
ಬೆಂಗಳೂರು, 10 ನವೆಂಬರ್ (ಹಿ.ಸ.):
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ಜಾಹೀರಾತು ಮತ್ತು ಸ್ವಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಜಾಹೀರಾತುಗಳಿಗಾಗಿ ಬರೋಬ್ಬರಿ 473 ಕೋಟಿ ರೂ. ವೆಚ್ಚ ಮಾಡಿದೆ. ಅಂದರೆ ಪ್ರತಿದಿನ ಸರಾಸರಿ 43 ಲಕ್ಷ ರೂ.ಗೂ ಅಧಿಕ ಹಣವನ್ನು ರಸ್ತೆ ನಿರ್ಮಾಣ, ಉದ್ಯೋಗ ಸೃಷ್ಟಿ ಅಥವಾ ರೈತರ ನೆರವಿಗೆ ಬಳಸುವ ಬದಲು ಸರ್ಕಾರದ ವರ್ಚಸ್ಸು ಹೆಚ್ಚಿಸಿಕೊಳ್ಳಲು ಖರ್ಚು ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಹಾಲಿನ ದರ ಏರಿಕೆಯಾಗುತ್ತಿದೆ. ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ವಿದ್ಯುತ್ ಸೇರಿದಂತೆ ಅಗತ್ಯ ಸೇವೆಗಳು ದುಬಾರಿಯಾಗುತ್ತಿವೆ. ರೈತರು ಬರಗಾಲ, ಆರ್ಥಿಕ ಸಂಕಷ್ಟ ಮತ್ತು ಅನಿಶ್ಚಿತತೆಯಿಂದ ಬಳಲುತ್ತಿದ್ದಾರೆ. ಯುವಜನರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳು ಹದಗೆಟ್ಟಿದ್ದು, ರಾಜಧಾನಿಯ ಮೂಲಸೌಕರ್ಯ ನಿರ್ವಹಣೆಯಲ್ಲಿಯೂ ಸರ್ಕಾರ ವಿಫಲವಾಗಿದೆ. ಗುತ್ತಿಗೆದಾರರು ತಮ್ಮ ಬಾಕಿ ಬಿಲ್ಗಳ ಪಾವತಿಗಾಗಿ ಕಾಯುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ಸರ್ಕಾರ ಮತ್ತಷ್ಟು ಜಾಹೀರಾತು, ಸ್ವಪ್ರಚಾರ ಮತ್ತು ಸಮರ್ಥನೆಗಳಲ್ಲಿ ತೊಡಗಿದೆ. ಕಾಂಗ್ರೆಸ್ ಸರ್ಕಾರದ ಪ್ರಮುಖ ಸಾಧನೆ ಎಂದು ಬಿಂಬಿಸಲಾಗುತ್ತಿರುವ ಗ್ಯಾರಂಟಿ ಯೋಜನೆಗಳೂ ಆರ್ಥಿಕ ಮತ್ತು ಅನುಷ್ಠಾನದ ಸವಾಲುಗಳನ್ನು ಎದುರಿಸುತ್ತಿವೆ. ಜನರಿಗೆ ಸಕಾಲದಲ್ಲಿ ಯೋಜನೆಗಳ ಪ್ರಯೋಜನ ತಲುಪಿಸುವುದಕ್ಕಿಂತ ಭರವಸೆಗಳ ಪ್ರಚಾರಕ್ಕೆ ಸರ್ಕಾರ ಹೆಚ್ಚು ಆಸಕ್ತಿ ತೋರುತ್ತಿದೆ ಎಂದು ಟೀಕಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳ ವಿಚಾರ ಬಂದಾಗ ಆರ್ಥಿಕ ಸಂಕಷ್ಟದ ನೆಪ ಹೇಳುವ ಸರ್ಕಾರ, ಜಾಹೀರಾತುಗಳಿಗಾಗಿ ಹಣ ಖರ್ಚು ಮಾಡುವಾಗ ಮಾತ್ರ ಖಜಾನೆಗೆ ಯಾವುದೇ ಮಿತಿಯಿಲ್ಲದಂತಾಗಿದೆ. ಪ್ರತಿ ದಿನಪತ್ರಿಕೆಯ ಪುಟದಲ್ಲೂ ಮುಖ್ಯಮಂತ್ರಿಗಳ ಭಾವಚಿತ್ರ ಪ್ರಕಟವಾಗಬೇಕೆಂದು ಜನರು ಬಯಸುತ್ತಿಲ್ಲ. ಬದಲಾಗಿ ಉತ್ತಮ ರಸ್ತೆಗಳು, ಕೈಗೆಟುಕುವ ಜೀವನ ವೆಚ್ಚ, ಯುವಜನರಿಗೆ ಉದ್ಯೋಗ, ಗುತ್ತಿಗೆದಾರರಿಗೆ ಬಾಕಿ ಹಣದ ಪಾವತಿ ಮತ್ತು ರೈತರಿಗೆ ನೈಜ ನೆರವು ಬೇಕಾಗಿದೆ ಎಂದು ಹೇಳಿದ್ದಾರೆ.
ಸರ್ಕಾರವನ್ನು ಅದು ನೀಡುವ ಜಾಹೀರಾತುಗಳ ಸಂಖ್ಯೆಯಿಂದ ಅಳೆಯುವುದಿಲ್ಲ. ಜನರ ಜೀವನಮಟ್ಟದಲ್ಲಿ ತರುವ ಸುಧಾರಣೆ ಮತ್ತು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಂದ ಅಳೆಯಲಾಗುತ್ತದೆ. ಬದಲಾವಣೆ ತರುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ಜನರ ಅಸಮಾಧಾನ ಮತ್ತು ವರ್ಚಸ್ಸು ವೃದ್ಧಿಯ ಪ್ರಯತ್ನಗಳೇ ಹೆಚ್ಚಾಗಿವೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕರ ಹಣವನ್ನು ಜನಕಲ್ಯಾಣಕ್ಕಾಗಿ ಬಳಸಬೇಕೇ ಹೊರತು ರಾಜಕೀಯ ಸ್ವಪ್ರಚಾರಕ್ಕಾಗಿ ಅಲ್ಲ. ಕಾರ್ಯಕ್ಷಮತೆಯಿಲ್ಲದ ಪ್ರಚಾರ, ಅನುಷ್ಠಾನವಿಲ್ಲದ ಭರವಸೆ, ಹೊಣೆಗಾರಿಕೆಯಿಲ್ಲದ ಸಮರ್ಥನೆ ಮತ್ತು ತೆರಿಗೆದಾರರ ಹಣದಲ್ಲಿ ಸ್ವಪ್ರಚಾರ ನಡೆಸುವುದೇ ಕಾಂಗ್ರೆಸ್ ಸರ್ಕಾರದ ಆಡಳಿತ ಮಾದರಿಯಾಗಿದೆ ಎಂದು ಟೀಕಿಸಿರುವ ಅವರು, 'ಅಭಿವೃದ್ಧಿ ಶೂನ್ಯ, ಪ್ರಚಾರವೇ ಸಾಧನೆ' ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.