
ಕೋಲಾರ, 10 ನವೆಂಬರ್ (ಹಿ.ಸ.)
ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ ಪರಿಚಯಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದರೂ, ಈ ಉದ್ದೇಶಕ್ಕಾಗಿ ನೇಮಕಗೊಂಡಿರುವ ಶಿಕ್ಷಕರಿಗೆ ನಾಲ್ಕು ತಿಂಗಳು ಕಳೆದರೂ ವೇತನ ಪಾವತಿಯಾಗಿಲ್ಲ. ಮತ್ತೊಂದೆಡೆ, ಬೋಧನೆಗೆ ಅಗತ್ಯವಾದ ಪಠ್ಯವಸ್ತು ಹಾಗೂ ಮೂಲಸೌಕರ್ಯಗಳನ್ನೂ ಒದಗಿಸದಿರುವುದು ಶಿಕ್ಷಕರ ಸಂಕಷ್ಟಕ್ಕೆ ಕಾರಣವಾಗಿದೆ.
ಗಣಕ ವಿಜ್ಞಾನ, ಗಣಕ ಅನ್ವಯಶಾಸ್ತ್ರ ಸೇರಿದಂತೆ ತಂತ್ರಜ್ಞಾನ ಆಧಾರಿತ ಪದವಿಗಳನ್ನು ಪೂರ್ಣಗೊಳಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಕ, ಯುವತಿಯರಿಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಐ ಬೋಧಕರಾಗಿ ಕೆಲಸ ಮಾಡುವ ಅವಕಾಶ ದೊರೆತಿತ್ತು. ಮಾಸಿಕ 20 ಸಾವಿರ ರೂ. ವೇತನದ ನಿರೀಕ್ಷೆಯಲ್ಲಿ ಹಲವರು ತಮ್ಮ ಹಿಂದಿನ ಉದ್ಯೋಗಗಳನ್ನು ತೊರೆದು ಈ ಕೆಲಸಕ್ಕೆ ಸೇರಿದ್ದರು. ಕಳೆದ ನಾಲ್ಕು ತಿಂಗಳಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಎಐ ಬೋಧನೆ ಮಾಡುತ್ತಿದ್ದರೂ ಈವರೆಗೆ ವೇತನ ದೊರೆತಿಲ್ಲ. ವೇತನ ಬಿಡುಗಡೆಗೆ ಸಂಬಂಧಿಸಿದ ಸ್ಪಷ್ಟ ಪ್ರಸ್ತಾಪವಾಗಲಿ, ಅನುದಾನವಾಗಲಿ ಇಲ್ಲದಿರುವುದರಿಂದ ಶಿಕ್ಷಕರು ಕುಟುಂಬ ನಿರ್ವಹಣೆಗೂ ಪರದಾಡುವಂತಾಗಿದೆ.
ಇನ್ನೊಂದೆಡೆ, ಯಾವುದೇ ಪೂರ್ವಸಿದ್ಧತೆ ಇಲ್ಲದೆ ಶಾಲೆಗಳಲ್ಲಿ ಎಐ ಶಿಕ್ಷಣ ಆರಂಭಿಸಲಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ನಾಲ್ಕು ತಿಂಗಳು ಕಳೆದರೂ 9ನೇ ತರಗತಿಗೆ ಬೋಧಿಸಬೇಕಾದ ಎಐ ಪಠ್ಯವಸ್ತುವನ್ನೇ ಒದಗಿಸಿಲ್ಲ. ಹೀಗಾಗಿ ಶಿಕ್ಷಕರು ತಮ್ಮದೇ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಅಗತ್ಯ ವಿಷಯಗಳನ್ನು ಕಲಿಸುತ್ತಿದ್ದಾರೆ. ಬೋಧನೆಗೆ ಪಠ್ಯಕ್ರಮವೇ ಇಲ್ಲದಿರುವಾಗ ಸರ್ಕಾರ ತರಾತುರಿಯಲ್ಲಿ ಈ ಯೋಜನೆ ಜಾರಿಗೆ ತಂದಿರುವುದರ ಔಚಿತ್ಯವೇನು ಎಂಬ ಪ್ರಶ್ನೆ ಎದುರಾಗಿದೆ.
ಕನ್ನಡ ಕಲಿಕೆಗೆ ಅವಕಾಶ ತಪ್ಪುವ ಆತಂಕ
9ನೇ ತರಗತಿಯಲ್ಲಿ ಹಿಂದಿ ಬದಲಿಗೆ ಎಐ ಶಿಕ್ಷಣ ಪರಿಚಯಿಸುವ ಸರ್ಕಾರದ ನಿರ್ಧಾರದ ಮತ್ತೊಂದು ಪರಿಣಾಮದ ಬಗ್ಗೆ ಆತಂಕ ವ್ಯಕ್ತವಾಗಿದೆ. ಉರ್ದು, ಸಂಸ್ಕೃತ, ತಮಿಳು ಹಾಗೂ ಮಲಯಾಳಂ ಮೊದಲಾದ ಭಾಷೆಗಳನ್ನು ಪ್ರಥಮ ಭಾಷೆಯಾಗಿ ಕಲಿಯುವ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಕನ್ನಡ ಕಲಿಯಲು ಇದ್ದ ಅವಕಾಶಕ್ಕೂ ಇದರಿಂದ ತೊಂದರೆಯಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಿಂದಿ ಬದಲಿಗೆ ಎಐ ಶಿಕ್ಷಣ ಪರಿಚಯಿಸುವ ನಿರ್ಧಾರದ ಹಿಂದೆ ಕನ್ನಡ ಭಾಷೆಯ ಕಲಿಕೆಗೆ ಕುತ್ತು ತರುವ ಉದ್ದೇಶವಿದೆಯೇ ಎಂಬ ಅನುಮಾನವೂ ಮೂಡಿದೆ. ಈ ಕುರಿತು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಎಐ ಶಿಕ್ಷಣದ ಪ್ರಯೋಜನ ಮತ್ತು ಸವಾಲುಗಳು
ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಬಲ್ಲದು. ಎಐ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ತಾರ್ಕಿಕ ಚಿಂತನೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಹೆಚ್ಚಲು ನೆರವಾಗುತ್ತದೆ. ವಿದ್ಯಾರ್ಥಿಗಳ ಕಲಿಕೆಯ ವೇಗ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವೈಯಕ್ತಿಕ ಕಲಿಕೆಗೂ ಅವಕಾಶ ಕಲ್ಪಿಸಬಹುದು. ಶಿಕ್ಷಕರಿಗೆ ಪಾಠ ಯೋಜನೆ, ಬೋಧನಾ ಸಾಮಗ್ರಿ ಸಿದ್ಧಪಡಿಸುವುದು ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿಯೂ ಎಐ ಸಹಕಾರಿಯಾಗಲಿದೆ.
ಆದರೆ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್, ಅಂತರ್ಜಾಲ ಸಂಪರ್ಕ ಹಾಗೂ ಅಗತ್ಯ ತಾಂತ್ರಿಕ ಸೌಲಭ್ಯಗಳ ಕೊರತೆಯಿದೆ. ಶಿಕ್ಷಕರಿಗೆ ಸೂಕ್ತ ತರಬೇತಿ ಇಲ್ಲದಿರುವುದು, ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಅರಿವಿನ ಕೊರತೆ ಮತ್ತು ಆರ್ಥಿಕ ಅಸಮಾನತೆ ಪ್ರಮುಖ ಸವಾಲುಗಳಾಗಿವೆ. ಎಐ ಮೇಲೆ ಅತಿಯಾದ ಅವಲಂಬನೆಯಿಂದ ವಿದ್ಯಾರ್ಥಿಗಳ ಸ್ವಂತ ಚಿಂತನೆ, ಓದುವ ಅಭ್ಯಾಸ ಹಾಗೂ ಸೃಜನಶೀಲತೆ ಕುಂಠಿತವಾಗುವ ಸಾಧ್ಯತೆಯೂ ಇದೆ.
ಹೀಗಾಗಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿ, ಎಐ ಬಳಕೆಯ ನೈತಿಕತೆಯ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಎಐ ಅನ್ನು ಶಿಕ್ಷಕರಿಗೆ ಪರ್ಯಾಯವಾಗಿ ಬಳಸದೆ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಹಾಯಕ ಸಾಧನವಾಗಿ ಬಳಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವೇತನ ತಾರತಮ್ಯಕ್ಕೂ ಶಿಕ್ಷಕರ ಆಕ್ಷೇಪ
ಎಐ ಶಿಕ್ಷಕರಿಗೆ ಮಾಸಿಕ 20 ಸಾವಿರ ರೂ. ವೇತನ ನಿಗದಿಪಡಿಸಿರುವ ಸರ್ಕಾರ, ಪದವಿಯೊಂದಿಗೆ ಬಿ.ಎಡ್. ಪೂರ್ಣಗೊಳಿಸಿ ಪ್ರೌಢಶಾಲೆಗಳಲ್ಲಿ ಬೋಧಿಸುತ್ತಿರುವ ಇತರೆ ಶಿಕ್ಷಕರಿಗೆ ಕೇವಲ 12,500 ರೂ. ನೀಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
8, 9 ಮತ್ತು 10ನೇ ತರಗತಿಗಳಿಗೆ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಬೋಧಿಸುವ ತಾವು ವಾರಕ್ಕೆ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇವೆ. ಆದರೆ ಎಐ ಶಿಕ್ಷಕರು ಕೇವಲ 9ನೇ ತರಗತಿಗೆ ವಾರಕ್ಕೆ 5ರಿಂದ 6 ಗಂಟೆಗಳ ಕಾಲ ಬೋಧಿಸುತ್ತಿದ್ದರೂ ಅವರಿಗೆ 20 ಸಾವಿರ ರೂ. ವೇತನ ನೀಡಲಾಗುತ್ತಿದೆ. ನಮಗೆ ಮಾತ್ರ 12,500 ರೂ. ನೀಡುತ್ತಿರುವುದು ಯಾವ ನ್ಯಾಯ ಎಂದು ಶಿಕ್ಷಕರು ಪ್ರಶ್ನಿಸಿದ್ದಾರೆ.
ಸರ್ಕಾರ ಎಐ ಶಿಕ್ಷಕರಿಗೆ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು. ಬೋಧನೆಗೆ ಅಗತ್ಯವಾದ ಪಠ್ಯವಸ್ತು, ಕಂಪ್ಯೂಟರ್ ಹಾಗೂ ಇತರ ಮೂಲಸೌಕರ್ಯಗಳನ್ನು ಒದಗಿಸಬೇಕು. ಎಐ ಶಿಕ್ಷಕರು ಮತ್ತು ಇತರೆ ಶಿಕ್ಷಕರ ನಡುವಿನ ವೇತನ ತಾರತಮ್ಯವನ್ನು ನಿವಾರಿಸುವ ಮೂಲಕ ಎಲ್ಲ ಶಿಕ್ಷಕರಿಗೂ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್