
ಬೆಂಗಳೂರು, 10 ನವೆಂಬರ್ (ಹಿ.ಸ.):
ಗೌರಿ ಲಂಕೇಶ್ ಹಾಗೂ ಪ್ರೊ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಗಳಲ್ಲಿ ಸಂಘಪರಿವಾರದ ನಂಟಿರುವವರ ಕೈವಾಡವಿದೆ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆರೋಪಗಳಿಗೆ ಮೂರು ದಿನಗಳಲ್ಲಿ ಸಾಕ್ಷ್ಯ ಒದಗಿಸಬೇಕು. ಇಲ್ಲವಾದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, ಗೌರಿ ಲಂಕೇಶ್ ಮತ್ತು ಪ್ರೊ. ಕಲಬುರ್ಗಿ ಹತ್ಯೆ ಪ್ರಕರಣಗಳಲ್ಲಿ ನ್ಯಾಯ ದೊರಕಿಸುವ ಹೋರಾಟವು ರಾಜಕೀಯ ಭಾಷಣ ಮಾಡುವುದಕ್ಕಿಂತ ಹೆಚ್ಚಿನ ಗಂಭೀರತೆ ಹಾಗೂ ಬದ್ಧತೆಯನ್ನು ನಿರೀಕ್ಷಿಸುತ್ತದೆ ಎಂದು ಹೇಳಿದ್ದಾರೆ.
ರಾಜಕೀಯ ವೇದಿಕೆಯಲ್ಲಿ ಪೂರ್ವಾಗ್ರಹದ ತೀರ್ಪು ಬೇಡ
ಕಾನೂನಿನ ಆಳ್ವಿಕೆಗೆ ಅನುಗುಣವಾಗಿ ನ್ಯಾಯ ದೊರಕಿಸುವುದು ಗೃಹ ಸಚಿವರಾಗಿ ಪ್ರಿಯಾಂಕ್ ಖರ್ಗೆ ಅವರ ಜವಾಬ್ದಾರಿಯಾಗಿದೆ.
ಆದರೆ ರಾಜಕೀಯ ವೇದಿಕೆಗಳಲ್ಲಿ ಪೂರ್ವಾಗ್ರಹಪೀಡಿತ ತೀರ್ಪುಗಳನ್ನು ನೀಡುವುದು ಸರಿಯಲ್ಲ ಎಂದು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 2018ರಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, 2022ರಲ್ಲಿ ವಿಚಾರಣೆ ಆರಂಭವಾಗಿದೆ. ಪ್ರಕರಣವು ಈಗಾಗಲೇ ಏಳನೇ ನ್ಯಾಯಾಧೀಶರ ಮುಂದೆ ವಿಚಾರಣೆಯಲ್ಲಿದೆ. ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ.
ಇನ್ನು ಪ್ರೊ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ 2026ರ ಸೆಪ್ಟೆಂಬರ್ ವೇಳೆಗೆ ಒಟ್ಟು 139 ಸಾಕ್ಷಿಗಳ ಪೈಕಿ ಕೇವಲ 33 ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಪ್ರಕರಣಗಳ ವಿಚಾರಣೆಯಲ್ಲಿನ ವಿಳಂಬಕ್ಕೆ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ಈ ಹತ್ಯೆಗಳ ನಂತರದ ಬಹುತೇಕ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ವಿಶೇಷ ತನಿಖಾ ತಂಡಗಳನ್ನು (ಎಸ್ಐಟಿ) ರಚಿಸಿರುವುದು ರಾಜ್ಯ ಸರ್ಕಾರವೇ.
ಹೀಗಿರುವಾಗ ಪರಿಣಾಮಕಾರಿ ತನಿಖೆ ಹಾಗೂ ವಿಚಾರಣೆ ಖಚಿತಪಡಿಸುವಲ್ಲಿ ಗೃಹ ಇಲಾಖೆಯ ಪಾತ್ರವೇನು ಎಂಬುದನ್ನು ಸಚಿವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, 'ಕೇಸ್ ನಡೆಯುತ್ತಿದೆ, ಇನ್ನೂ ಆರು ತಿಂಗಳಲ್ಲಿ ಇದನ್ನು ಮುಗಿಸಿ, ಈ ಎಲ್ಲ ಜನರನ್ನು ಜೈಲಿಗೆ ಹಾಕುತ್ತೇನೆ' ಎಂದು ಪ್ರಿಯಾಂಕ್ ಖರ್ಗೆ ಹೇಳಿರುವುದು ನ್ಯಾಯಾಲಯದ ತೀರ್ಪಿನ ಮೇಲೆ ಪ್ರಭಾವ ಬೀರುವ ರೀತಿಯಲ್ಲಿದೆ ಎಂದು ತೇಜಸ್ವಿ ಸೂರ್ಯ ಆಕ್ಷೇಪಿಸಿದ್ದಾರೆ.
ಗೃಹ ಸಚಿವರ ಇಂತಹ ಹೇಳಿಕೆಗಳು ನ್ಯಾಯಾಂಗದ ಸ್ವತಂತ್ರತೆ ಮತ್ತು ವಿಚಾರಣೆಯ ನ್ಯಾಯಸಮ್ಮತತೆಯ ಬಗ್ಗೆ ಗಂಭೀರ ಆತಂಕ ಮೂಡಿಸುತ್ತವೆ ಎಂದು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಹೇಳಿಕೆಗಳಿಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮಾನನಷ್ಟ ಮೊಕದ್ದಮೆಗಳ ವಿಚಾರಣೆ ಎದುರಿಸುತ್ತಿರುವುದನ್ನು ಪ್ರಿಯಾಂಕ್ ಖರ್ಗೆ ನೆನಪಿಸಿಕೊಳ್ಳಬೇಕು ಎಂದು ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.
ಆರೋಪಗಳಿಗೆ ಆಧಾರಗಳಿದ್ದರೆ ಬಹಿರಂಗಪಡಿಸಲಿ, ಇಲ್ಲವಾದರೆ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R