
ಗದಗ, 10 ನವೆಂಬರ್ (ಹಿ.ಸ.)
ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿರುವ ಇಂದಿನ ದಿನಗಳಲ್ಲಿ, ಪ್ರೀತಿ, ವಿಶ್ವಾಸ ಹಾಗೂ ಮಾನವೀಯತೆಯೇ ಶ್ರೇಷ್ಠ ಧರ್ಮ ಎಂಬ ಸಂದೇಶವನ್ನು ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಕಳೆದ 35 ವರ್ಷಗಳಿಂದ ಸಾರುತ್ತಾ ಬಂದಿದೆ.
ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಬಸ್ ನಿಲ್ದಾಣದ ಸಮೀಪ ವಾಸಿಸುವ ಕುತ್ಬುದ್ದೀನ್ ಗಡಾದ ಅವರ ಕುಟುಂಬ ಪ್ರತಿವರ್ಷ ದೀಪಾವಳಿ ಹಬ್ಬದಂದು ತಮ್ಮ ಅಂಗಡಿಯಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತಿದೆ. ಧರ್ಮದ ಆಚರಣೆಗಳು ಬೇರೆಬೇರೆಯಾಗಿದ್ದರೂ ಪರಸ್ಪರ ಪ್ರೀತಿ ಮತ್ತು ಗೌರವದಿಂದ ಬದುಕಬಹುದು ಎಂಬುದಕ್ಕೆ ಈ ಕುಟುಂಬದ ಆಚರಣೆ ಸಾಕ್ಷಿಯಾಗಿದೆ.
ಸಣ್ಣ ಸೈಕಲ್ ಅಂಗಡಿಯಿಂದ ಬದುಕಿನ ಪಯಣ ಆರಂಭಿಸಿದ ಕುತ್ಬುದ್ದೀನ್ ಗಡಾದ ಅವರು ಇಂದು ಸೈಕಲ್, ಮೋಟಾರ್ ವಾಹನ ಹಾಗೂ ಟ್ರ್ಯಾಕ್ಟರ್ಗಳ ಟೈರ್ ಪಂಚರ್ ದುರಸ್ತಿ ಕೆಲಸದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ತಮ್ಮ ದುಡಿಮೆಯ ಬದುಕಿನ ನಡುವೆಯೂ ಕಳೆದ ಮೂರುವರೆ ದಶಕಗಳಿಂದ ಲಕ್ಷ್ಮೀ ಪೂಜೆಯ ಪರಂಪರೆಯನ್ನು ತಪ್ಪದೆ ಮುಂದುವರಿಸಿಕೊಂಡು ಬಂದಿದ್ದಾರೆ.
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಅಂಗಡಿಯಲ್ಲಿ ಸಂಭ್ರಮದ ಸಿದ್ಧತೆಗಳು ಆರಂಭವಾಗುತ್ತವೆ. ಅಂಗಡಿಯನ್ನು ಸ್ವಚ್ಛಗೊಳಿಸಿ, ಸುಂದರ ಮಂಟಪ ನಿರ್ಮಿಸಿ, ವಿದ್ಯುತ್ ದೀಪಗಳು, ಹೂವು ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಲಕ್ಷ್ಮೀದೇವಿಯ ಮೂರ್ತಿಗೆ ಹೊಸ ಸೀರೆ ಉಡಿಸಿ ಶೃಂಗರಿಸಲಾಗುತ್ತದೆ. ಹಬ್ಬದ ದಿನ ಹಿಂದೂ ಸ್ವಾಮಿಗಳನ್ನು ಆಹ್ವಾನಿಸಿ, ಮಂತ್ರೋಚ್ಚಾರಣೆ ಹಾಗೂ ಆರತಿಯೊಂದಿಗೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಲಾಗುತ್ತದೆ.
ಪೂಜೆಯ ಬಳಿಕ ಕುಟುಂಬದ ವತಿಯಿಂದ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ಕಡುಬು, ಕಡಲೆಕಾಯಿ ಪಲ್ಯ, ಕಾಳು ಪಲ್ಯ, ಚಟ್ನಿ, ಹಪ್ಪಳ, ಸಂಡಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಅತಿಥಿಗಳಿಗೆ ಆತ್ಮೀಯವಾಗಿ ಊಟ ಬಡಿಸಲಾಗುತ್ತದೆ. ಆರಂಭದಲ್ಲಿ ಹತ್ತು ಜನರಿಗೆ ಸೀಮಿತವಾಗಿದ್ದ ಈ ಆತಿಥ್ಯ ಇಂದು ಗ್ರಾಮದ ವಿವಿಧ ಸಮುದಾಯಗಳ ಜನರು ಭಾಗವಹಿಸುವ ಸೌಹಾರ್ದದ ಸಮಾಗಮವಾಗಿ ಬೆಳೆದಿದೆ.
ಕುತ್ಬುದ್ದೀನ್ ಗಡಾದ ಅವರಿಗೆ ಪತ್ನಿ ರಜಮಾ ಬೇಗಂ, ಮಕ್ಕಳಾದ ಕಾಶಿಂಸಾಬ, ಫಜಲ್ ಅಹ್ಮದ್, ನಜೀರ್ ಅಹ್ಮದ್, ಸಫರಾ ಬೇಗಂ, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಈ ಆಚರಣೆಯಲ್ಲಿ ಕೈಜೋಡಿಸುತ್ತಾರೆ. ಮೂರು ತಲೆಮಾರುಗಳಿಂದ ಮುಂದುವರಿದಿರುವ ಈ ಸಂಪ್ರದಾಯ ಕುಟುಂಬದ ಒಗ್ಗಟ್ಟು, ಹಿರಿಯರ ಮೇಲಿನ ಗೌರವ ಹಾಗೂ ಪರಸ್ಪರ ಪ್ರೀತಿಯ ಪ್ರತೀಕವಾಗಿದೆ.
ಈ ಕುಟುಂಬದ ಸೌಹಾರ್ದತೆ ಲಕ್ಷ್ಮೀ ಪೂಜೆಗೆ ಮಾತ್ರ ಸೀಮಿತವಾಗಿಲ್ಲ. ಗ್ರಾಮದ ದರ್ಗಾದ ಉರುಸ್, ಗಂಧದ ಆಚರಣೆ ಹಾಗೂ ಮೊಹರಂ ಕಾರ್ಯಕ್ರಮಗಳಲ್ಲಿಯೂ ಕುಟುಂಬದವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ತಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಹಿಂದೂ ಬಾಂಧವರನ್ನು ಆಹ್ವಾನಿಸುವಂತೆ, ಹಿಂದೂಗಳ ಹಬ್ಬಗಳಲ್ಲಿಯೂ ಆತ್ಮೀಯವಾಗಿ ಬೆರೆಯುತ್ತಾರೆ. ಪರಸ್ಪರರ ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವುದೇ ಇವರ ಬದುಕಿನ ವೈಶಿಷ್ಟ್ಯವಾಗಿದೆ.
ಈ ಕುರಿತು ಮಾತನಾಡಿದ ಕುತ್ಬುದ್ದೀನ್ ಗಡಾದ ಅವರು, ನಾವು ಸುಮಾರು 35 ವರ್ಷಗಳಿಂದ ದೀಪಾವಳಿ ಹಬ್ಬದಂದು ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ. ಪ್ರತಿವರ್ಷ ಸ್ವಾಮಿಗಳನ್ನು ಕರೆಸಿ ಪೂಜೆ ಮಾಡಿಸುತ್ತೇವೆ. ಗ್ರಾಮದ ಹಿಂದೂ ಬಾಂಧವರು, ವ್ಯಾಪಾರಸ್ಥರು ಹಾಗೂ ಸ್ನೇಹಿತರನ್ನು ಆಹ್ವಾನಿಸುತ್ತೇವೆ. ಎಲ್ಲರೂ ಒಟ್ಟಾಗಿ ಪೂಜೆಯಲ್ಲಿ ಪಾಲ್ಗೊಂಡು ಊಟ ಮಾಡಿ ಸಂತೋಷದಿಂದ ತೆರಳುತ್ತಾರೆ. ನಮ್ಮಲ್ಲಿ ಹಿಂದೂ, ಮುಸ್ಲಿಂ ಎಂಬ ಭೇದಭಾವವಿಲ್ಲ. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಒಂದಾಗಿ ಬದುಕಬೇಕು ಎಂಬುದೇ ನಮ್ಮ ಆಶಯ ಎಂದು ತಿಳಿಸಿದರು.
ಪ್ರೀತಿಯೇ ಶ್ರೇಷ್ಠ ಧರ್ಮ
ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಜಕ್ಕಲಿಯ ಗಡಾದ ಕುಟುಂಬದ 35 ವರ್ಷಗಳ ಈ ಪರಂಪರೆ ಸಮಾಜಕ್ಕೆ ಮಾದರಿಯಾಗಿದೆ. ದೇವರನ್ನು ಆರಾಧಿಸುವ ವಿಧಾನಗಳು ಬೇರೆಬೇರೆಯಾಗಿರಬಹುದು. ಆದರೆ ಮನುಷ್ಯರ ನಡುವಿನ ಪ್ರೀತಿ, ಸಹೋದರತ್ವ ಹಾಗೂ ಮಾನವೀಯತೆಗೆ ಯಾವುದೇ ಧರ್ಮದ ಗಡಿಗಳಿಲ್ಲ ಎಂಬುದನ್ನು ಈ ಕುಟುಂಬ ತನ್ನ ಆಚರಣೆಯ ಮೂಲಕ ತೋರಿಸಿಕೊಟ್ಟಿದೆ.
ಜಕ್ಕಲಿಯ ಈ ಪುಟ್ಟ ಅಂಗಡಿಯಲ್ಲಿ ಪ್ರತಿವರ್ಷ ಬೆಳಗುವ ಹಣತೆಗಳು ಕೇವಲ ದೀಪಾವಳಿಯ ಬೆಳಕನ್ನಷ್ಟೇ ಹರಡುವುದಿಲ್ಲ; ಸಮಾಜದಲ್ಲಿ ಭಾವೈಕ್ಯತೆ ಮತ್ತು ಸೌಹಾರ್ದದ ಬೆಳಕನ್ನೂ ಪಸರಿಸುತ್ತಿವೆ. ಧರ್ಮದ ಗೋಡೆಗಳನ್ನು ಮೀರಿ ಪ್ರೀತಿಯ ಸೇತುವೆ ನಿರ್ಮಿಸಿರುವ ಕುತ್ಬುದ್ದೀನ್ ಗಡಾದ ಕುಟುಂಬದ ಈ ಅಪರೂಪದ ಪರಂಪರೆ ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP