ಬರಪೀಡಿತ ರೈತರಿಗೆ ಕನಿಷ್ಠ ₹5,000 ಪರಿಹಾರ: ಮೊದಲ ಕಂತಿನಲ್ಲಿ ₹2,000 ಪಡೆದವರಿಗೆ ಬಾಕಿ ₹3,000 ಪಾವತಿ:ಡಿಸಿಎಂ
ಬೆಂಗಳೂರು, 10 ನವೆಂಬರ್ (ಹಿ.ಸ.): ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಅರ್ಹ ರೈತರಿಗೆ ಮೊದಲ ಹಂತದಲ್ಲಿ ಕನಿಷ್ಠ ₹5,000 ಬೆಳೆಹಾನಿ ಪರಿಹಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಮೊದಲ ಕಂತಿನಲ್ಲಿ ₹2,000 ಪಡೆದಿರುವ ರೈತರಿಗೆ ಮುಂದಿನ ಕಂತಿನಲ್ಲಿ ಬಾಕಿ ₹3,000 ಹಾಗೂ ಈಗಾಗಲೇ ₹2,500 ಪಡೆದ
ಬರಪೀಡಿತ ರೈತರಿಗೆ ಕನಿಷ್ಠ ₹5,000 ಪರಿಹಾರ: ಮೊದಲ ಕಂತಿನಲ್ಲಿ ₹2,000 ಪಡೆದವರಿಗೆ ಬಾಕಿ ₹3,000 ಪಾವತಿ:ಡಿಸಿಎಂ


ಬೆಂಗಳೂರು, 10 ನವೆಂಬರ್ (ಹಿ.ಸ.):

ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಅರ್ಹ ರೈತರಿಗೆ ಮೊದಲ ಹಂತದಲ್ಲಿ ಕನಿಷ್ಠ ₹5,000 ಬೆಳೆಹಾನಿ ಪರಿಹಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಮೊದಲ ಕಂತಿನಲ್ಲಿ ₹2,000 ಪಡೆದಿರುವ ರೈತರಿಗೆ ಮುಂದಿನ ಕಂತಿನಲ್ಲಿ ಬಾಕಿ ₹3,000 ಹಾಗೂ ಈಗಾಗಲೇ ₹2,500 ಪಡೆದಿರುವ ರೈತರಿಗೆ ಹೆಚ್ಚುವರಿಯಾಗಿ ₹2,500 ಪಾವತಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೃಷಿ ಭೂಮಿಯ ವಿಸ್ತೀರ್ಣ ಕಡಿಮೆ ಇದೆ ಎಂಬ ಕಾರಣಕ್ಕೆ ಯಾವುದೇ ಅರ್ಹ ರೈತರು ಪರಿಹಾರದಿಂದ ವಂಚಿತರಾಗಲು ಬಿಡುವುದಿಲ್ಲ. ರೈತರಿಗೆ ನ್ಯಾಯಯುತವಾಗಿ, ಗೌರವಯುತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ತಲುಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಮೊದಲ ಕಂತಿನಲ್ಲಿ ಕೆಲವು ರೈತರ ಖಾತೆಗೆ ₹2,500 ಬದಲಾಗಿ ₹2,000 ಜಮೆಯಾಗಿರುವ ಕುರಿತು ಗೊಂದಲ ಉಂಟಾಗಿದೆ. ಆದರೆ ₹2,000 ಅಂತಿಮ ಪರಿಹಾರವಲ್ಲ. ಅರ್ಹ ರೈತರಿಗೆ ಕನಿಷ್ಠ ₹5,000 ಪರಿಹಾರ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

2026ರ ಅಕ್ಟೋಬರ್ 23ರಂದು ಹೊರಡಿಸಿದ ಸರ್ಕಾರಿ ಆದೇಶದಂತೆ ಅರ್ಹ ರೈತರಿಗೆ ತಲಾ ₹2,500 ಮೊದಲ ಕಂತಿನ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿತ್ತು. ಅದರಂತೆ ನವೆಂಬರ್ 5ರಂದು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ ₹17.43 ಕೋಟಿ ಪರಿಹಾರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

ಆದರೆ ಕಡಿಮೆ ಜಮೀನು ಹೊಂದಿರುವ ರೈತರು ವ್ಯಕ್ತಪಡಿಸಿದ ಆತಂಕ ಮತ್ತು ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಪಾವತಿಯ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೃಷಿ ಭೂಮಿಯ ವಿಸ್ತೀರ್ಣದ ಆಧಾರದಲ್ಲಿ ಪರಿಹಾರ

ಕೇಂದ್ರ ಸರ್ಕಾರದ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್‌) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿಗಳ ಪ್ರಕಾರ, ಬೆಳೆಹಾನಿ ಪರಿಹಾರವನ್ನು ಕೃಷಿ ಭೂಮಿಯ ವಿಸ್ತೀರ್ಣ ಮತ್ತು ಬೆಳೆಗಳ ವರ್ಗೀಕರಣದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಮಳೆಯಾಶ್ರಿತ ಬೆಳೆಗಳಿಗೆ ಕನಿಷ್ಠ ₹1,500, ನೀರಾವರಿ ಬೆಳೆಗಳಿಗೆ ₹2,600 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹3,200 ಪರಿಹಾರ ನಿಗದಿಪಡಿಸಲಾಗಿದೆ.

ಆದರೆ ಈ ಕನಿಷ್ಠ ಮಾನದಂಡಗಳಿಗೆ ಸೀಮಿತವಾಗದೆ, ರೈತರ ಹಿತದೃಷ್ಟಿಯಿಂದ ಕನಿಷ್ಠ ₹5,000 ಪರಿಹಾರ ನೀಡಲು ಮುಖ್ಯಮಂತ್ರಿ ಮತ್ತು ತಾವು ನಿರ್ಧರಿಸಿರುವುದಾಗಿ ಪರಮೇಶ್ವರ ತಿಳಿಸಿದ್ದಾರೆ.

ಅರ್ಧ ಎಕರೆ ಜಮೀನಿನಲ್ಲಿ ಕೃಷಿ ಮಾಡುವವರಿಗೂ ಹಲವು ಎಕರೆ ಜಮೀನು ಹೊಂದಿರುವವರಿಗೂ ಬರಗಾಲದ ಸಂಕಷ್ಟ ಒಂದೇ. ಬೆಳೆ ನಷ್ಟ ಮತ್ತು ಆರ್ಥಿಕ ತೊಂದರೆಗಳು ಎಲ್ಲ ರೈತರನ್ನೂ ಕಾಡುತ್ತವೆ. ಹೀಗಾಗಿ ಕಡಿಮೆ ಜಮೀನು ಹೊಂದಿದ್ದಾರೆ ಎಂಬ ಕಾರಣಕ್ಕೆ ಪರಿಹಾರದಲ್ಲಿ ತಾರತಮ್ಯ ಮಾಡಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

₹5,000ರಿಂದ ₹60,000ವರೆಗೆ ಪರಿಹಾರಕ್ಕೆ ಅವಕಾಶ

₹5,000 ಕನಿಷ್ಠ ಪರಿಹಾರ ಮೊತ್ತವಾಗಿದ್ದು, ಬೆಳೆಹಾನಿಯ ಪ್ರಮಾಣ, ಕೃಷಿ ಭೂಮಿಯ ವಿಸ್ತೀರ್ಣ ಹಾಗೂ ಅನ್ವಯವಾಗುವ ಮಾನದಂಡಗಳ ಆಧಾರದ ಮೇಲೆ ಅರ್ಹ ರೈತರಿಗೆ ₹5,000ರಿಂದ ₹60,000ವರೆಗೆ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪರಿಹಾರ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಬಾಕಿ ಕಂತುಗಳನ್ನು ಶೀಘ್ರ ಬಿಡುಗಡೆ ಮಾಡಬೇಕು. ಅರ್ಹ ರೈತರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರ ತಪ್ಪಿಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ಸರ್ಕಾರದ ನಿಯಮಗಳು ರೈತರ ನೆರವಿಗೆ ಬರಬೇಕೇ ಹೊರತು ಪರಿಹಾರ ತಲುಪಿಸಲು ಅಡ್ಡಿಯಾಗಬಾರದು. ಮಾರ್ಗಸೂಚಿಗಳು ರೈತರ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗದಿದ್ದರೆ, ರೈತರ ಹಿತ ಕಾಪಾಡಲು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ವದಂತಿಗಳಿಗೆ ಕಿವಿಗೊಡದಂತೆ ಮನವಿ

ಬರ ಪರಿಹಾರದ ಕುರಿತು ಹರಡುತ್ತಿರುವ ವದಂತಿಗಳು, ತಪ್ಪು ಮಾಹಿತಿ ಹಾಗೂ ರಾಜಕೀಯ ಪ್ರೇರಿತ ಅಪಪ್ರಚಾರಗಳಿಗೆ ರೈತರು ಕಿವಿಗೊಡಬಾರದು ಎಂದು ಮನವಿ ಮಾಡಿರುವ ಅವರು, ಮೊದಲ ಕಂತಿನ ಮಧ್ಯಂತರ ಪರಿಹಾರವನ್ನೇ ಅಂತಿಮ ಪರಿಹಾರವೆಂದು ಬಿಂಬಿಸಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳ ನಾಯಕರಿಗೆ ಹೇಳಿದ್ದಾರೆ.

ರೈತರು ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಅರ್ಹ ರೈತರಿಗೆ ನಿಗದಿತ ಮೊತ್ತಕ್ಕಿಂತ ಕಡಿಮೆ ಪರಿಹಾರ ದೊರೆತಿದ್ದರೆ ಅಥವಾ ಮುಂದಿನ ಕಂತಿನ ಹಣ ಪಡೆಯುವಲ್ಲಿ ತೊಂದರೆ ಎದುರಾದರೆ ಅಂತಹ ಪ್ರಕರಣಗಳನ್ನು ಪರಿಶೀಲಿಸಿ ವಿಳಂಬವಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರೈತರಿಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಸಕಾಲದಲ್ಲಿ ಪರಿಹಾರ, ಆರ್ಥಿಕ ಭದ್ರತೆ ಮತ್ತು ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ತಮ್ಮ ಬೆನ್ನಿಗೆ ನಿಂತಿದೆ ಎಂಬ ವಿಶ್ವಾಸ ಮುಖ್ಯ. ಮುಖ್ಯಮಂತ್ರಿ ಹಾಗೂ ತಾವು ರೈತರೊಂದಿಗೆ ನಿಲ್ಲುತ್ತೇವೆ. ಅವರ ಅಹವಾಲುಗಳನ್ನು ಆಲಿಸಿ ಲೋಪದೋಷಗಳನ್ನು ಸರಿಪಡಿಸಲಾಗುವುದು. ಅರ್ಹ ರೈತರಿಗೆ ಕನಿಷ್ಠ ₹5,000 ಪರಿಹಾರ ತಲುಪಿಸುವುದು ಸರ್ಕಾರದ ದೃಢ ಬದ್ಧತೆಯಾಗಿದೆ ಎಂದು ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande