
ಬೆಂಗಳೂರು, 10 ನವೆಂಬರ್ (ಹಿ.ಸ.):
ಕರ್ನಾಟಕದ ಹೆಮ್ಮೆಗೆ ಮತ್ತೊಂದು ಗರಿ ಮೂಡಿದ್ದು, ಭಾರತದ ಮೊಟ್ಟಮೊದಲ ಸ್ವತಂತ್ರ ಕಾಮನ್ವೆಲ್ತ್ ಮಹಿಳಾ ಸಂಸದರು ಭಾರತ ವಲಯದ ಸಮ್ಮೇಳನಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ.
ನವೆಂಬರ್ 17 ಮತ್ತು 18ರಂದು ಎರಡು ದಿನಗಳ ಕಾಲ ವಿಧಾನಸೌಧದಲ್ಲಿ ಈ ಐತಿಹಾಸಿಕ ಸಮ್ಮೇಳನ ನಡೆಯಲಿದ್ದು, ಮಹಿಳಾ ನಾಯಕತ್ವ, ಶಾಸಕಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹಾಗೂ ಡಿಜಿಟಲ್ ಸುರಕ್ಷತೆಯ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ.
ಭಾರತೀಯ ಸಂಸತ್ತಿನ ಸಹಯೋಗದೊಂದಿಗೆ ಕರ್ನಾಟಕ ವಿಧಾನಮಂಡಲವು ಈ ಸಮ್ಮೇಳನವನ್ನು ಆಯೋಜಿಸಿದೆ. ಕರ್ನಾಟಕ ವಿಧಾನಸಭೆ ಸ್ಪೀಕರ್ ಜಿ.ಎಸ್. ಪಾಟೀಲ್ ಹಾಗೂ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಸಮ್ಮೇಳನದ ಅಧಿಕೃತ ವೇಳಾಪಟ್ಟಿಯನ್ನು ಜಂಟಿಯಾಗಿ ಪ್ರಕಟಿಸಿದ್ದಾರೆ.
ಮಹಿಳಾ ನಾಯಕತ್ವಕ್ಕೆ ಬಲ ನೀಡುವ ವೇದಿಕೆ
ಮಹಿಳಾ ಸಂಸದರು ಹಾಗೂ ಶಾಸಕರು ಸಾರ್ವಜನಿಕ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸುವುದು ಮತ್ತು ಶಾಸಕಾಂಗ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಕಾಮನ್ವೆಲ್ತ್ ಮಹಿಳಾ ಸಂಸದರು ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಿ. ಪುರಂದೇಶ್ವರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭೆ ಸ್ಪೀಕರ್ಗಳು ಹಾಗೂ ಉಪಸಭಾಪತಿಗಳು ಸೇರಿದಂತೆ ಸುಮಾರು 150 ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರತಿ ರಾಜ್ಯದಿಂದ ನಾಲ್ವರು ಮಹಿಳಾ ಜನಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆಯಿದ್ದು, 15ರಿಂದ 20 ದೇಶಗಳ ಪ್ರತಿನಿಧಿಗಳೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಡಿಜಿಟಲ್ ಸುರಕ್ಷತೆ, ಶಾಸಕಾಂಗ ಕೌಶಲಕ್ಕೆ ಆದ್ಯತೆ
ಸಮ್ಮೇಳನದಲ್ಲಿ ಎರಡು ಪ್ರಮುಖ ವಿಷಯಗಳ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಮಹಿಳೆಯರ ಡಿಜಿಟಲ್ ಮತ್ತು ಅಂತರ್ಜಾಲ ಸುರಕ್ಷತೆ ಹಾಗೂ ಮಹಿಳಾ ಜನಪ್ರತಿನಿಧಿಗಳ ಶಾಸಕಾಂಗ ಕೌಶಲ ಮತ್ತು ನಾಯಕತ್ವ ಸಾಮರ್ಥ್ಯವನ್ನು ಬಲಪಡಿಸುವುದು ಪ್ರಮುಖ ಆದ್ಯತೆಯಾಗಿವೆ.
ಮಹಿಳೆಯರ ವಿರುದ್ಧ ನಡೆಯುತ್ತಿರುವ ಸೈಬರ್ ಅಪರಾಧಗಳು, ಆನ್ಲೈನ್ ಕಿರುಕುಳ, ಡಿಜಿಟಲ್ ದುರುಪಯೋಗ, ಕೃತಕ ಬುದ್ಧಿಮತ್ತೆಯ ದುರ್ಬಳಕೆ, ಡೀಪ್ಫೇಕ್ ತಂತ್ರಜ್ಞಾನ, ವೈಯಕ್ತಿಕ ಮಾಹಿತಿಯ ರಕ್ಷಣೆ ಮತ್ತು ಡಿಜಿಟಲ್ ಗೌಪ್ಯತೆಯ ಕುರಿತು ಸಮಾಲೋಚನೆ ನಡೆಯಲಿದೆ.
ಡಿಜಿಟಲ್ ವೇದಿಕೆಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಚರ್ಚಿಸಲಾಗುತ್ತದೆ.
ಇನ್ನು ಶಾಸಕಾಂಗ ಪ್ರಕ್ರಿಯೆಗಳು, ಕಾನೂನು ರಚನೆ, ನೀತಿ ನಿರೂಪಣೆ, ಸಂಸದೀಯ ಚರ್ಚೆಗಳು, ನಾಯಕತ್ವ ಅಭಿವೃದ್ಧಿ ಹಾಗೂ ಶಾಸಕಾಂಗ ಕಾರ್ಯಚಟುವಟಿಕೆಗಳಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ.
ಮಹಿಳೆಯರಿಗೆ ಸಚಿವ ಸ್ಥಾನ ನೀಡುವ ಭರವಸೆ
ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವುದಷ್ಟೇ ಅಲ್ಲದೆ, ನೀತಿ ನಿರೂಪಣೆ ಮತ್ತು ಆಡಳಿತದಲ್ಲಿ ಅವರು ಅರ್ಥಪೂರ್ಣ ಪಾತ್ರ ವಹಿಸುವಂತೆ ಮಾಡುವುದು ಅಗತ್ಯವಾಗಿದೆ.
ಮಹಿಳಾ ಜನಪ್ರತಿನಿಧಿಗಳು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲು ಹಾಗೂ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳಲು ಈ ಸಮ್ಮೇಳನ ಉತ್ತಮ ವೇದಿಕೆಯಾಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಸಮ್ಮೇಳನ ಆಯೋಜಿಸುವಂತೆ ಕರ್ನಾಟಕ ವಿಧಾನಮಂಡಲಕ್ಕೆ ಸೂಚನೆ ನೀಡಲಾಗಿದ್ದು, ಲೋಕಸಭಾ ಸಚಿವಾಲಯ ಮತ್ತು ಕಾಮನ್ವೆಲ್ತ್ ಮಹಿಳಾ ಸಂಸದರು ಘಟಕದ ನಾಯಕರೊಂದಿಗೆ ಸಮಾಲೋಚಿಸಿ ಕಾರ್ಯಸೂಚಿ ಸಿದ್ಧಪಡಿಸಲಾಗುತ್ತಿದೆ.
ಡಿ. ಪುರಂದೇಶ್ವರಿ ಅವರು 27ರಿಂದ 28 ಸಂಸದರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದು, ಸಿದ್ಧತೆಗಳ ಕುರಿತು ಪ್ರಾಥಮಿಕ ಸಭೆಗಳನ್ನೂ ನಡೆಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲದಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್ ಜಿ.ಎಸ್. ಪಾಟೀಲ್, ಸದ್ಯ ಎರಡು ಸಚಿವ ಸ್ಥಾನಗಳು ಖಾಲಿಯಿದ್ದು, ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ನ.17ರಂದು ಉದ್ಘಾಟನೆ, 18ರಂದು ಸಮಾರೋಪ
ನವೆಂಬರ್ 17ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದ ಊಟದ ಬಳಿಕ ವಿವಿಧ ವಿಷಯಗಳ ಕುರಿತು ಚರ್ಚೆಗಳು ಆರಂಭವಾಗಲಿವೆ.
ನವೆಂಬರ್ 18ರಂದು ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಪಾಲೆ ಸುಧಾ ಯಾದವ್ ಭಾಗವಹಿಸಲಿದ್ದಾರೆ.
ಸಮ್ಮೇಳನದ ಪೂರ್ವಭಾವಿಯಾಗಿ ನವೆಂಬರ್ 14ರಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಡಿ. ಪುರಂದೇಶ್ವರಿ ಅವರು ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ ಮಾಡಿ ಸಿದ್ಧತೆಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಸಮ್ಮೇಳನದ ಭಾಗವಾಗಿ ನವೆಂಬರ್ 19ರಂದು ಪ್ರತಿನಿಧಿಗಳನ್ನು ಮೈಸೂರಿಗೆ ಕರೆದೊಯ್ಯುವ ಕಾರ್ಯಕ್ರಮವೂ ರೂಪಿಸಲಾಗಿದೆ. ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟ ಸೇರಿದಂತೆ ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಕರ್ನಾಟಕ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಸಮ್ಮೇಳನವು ದೇಶಾದ್ಯಂತ ಮಹಿಳಾ ಸಬಲೀಕರಣದ ಕುರಿತು ಬಲವಾದ ಸಂದೇಶ ರವಾನಿಸಲಿದೆ ಎಂದು ಸ್ಪೀಕರ್ ಜಿ.ಎಸ್. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ನಾಯಕತ್ವವನ್ನು ಬಲಪಡಿಸುವುದು, ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಶಾಸಕಾಂಗ ಸಂಸ್ಥೆಗಳನ್ನು ಹೆಚ್ಚು ಒಳಗೊಳ್ಳುವಂತೆ ರೂಪಿಸುವುದು ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಬೆಂಗಳೂರು ಸಮ್ಮೇಳನ ಮಹತ್ವದ ವೇದಿಕೆಯಾಗುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R