
ಬೆಂಗಳೂರು, 10 ನವೆಂಬರ್ (ಹಿ.ಸ.):
ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹಳಿಗೆ ಹಾರಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಘಟನೆಯಿಂದ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ಮಧ್ಯಾಹ್ನ ಸುಮಾರು 1.31ರ ವೇಳೆಗೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲು ವೇದಿಕೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹಳಿಗೆ ಹಾರಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ನಿಲ್ದಾಣದ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಬಳಿಕ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಧಿಕೃತ ಮಾಹಿತಿ ನೀಡಿದ್ದು, ವ್ಯಕ್ತಿಯನ್ನು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದೆ.
ನೇರಳೆ ಮಾರ್ಗದ ಸಂಚಾರದಲ್ಲಿ ಬದಲಾವಣೆ
ರಕ್ಷಣಾ ಕಾರ್ಯಾಚರಣೆ ಹಾಗೂ ಸುರಕ್ಷತಾ ಕ್ರಮಗಳ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿತ್ತು.
ಪ್ರಯಾಣಿಕರ ಅನುಕೂಲಕ್ಕಾಗಿ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಹಾಗೂ ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವೆ ಪ್ರತ್ಯೇಕವಾಗಿ ರೈಲು ಸೇವೆಗಳನ್ನು ನಿರ್ವಹಿಸಲಾಯಿತು.
ಮಧ್ಯಾಹ್ನ 1.58ರಿಂದ ನೇರಳೆ ಮಾರ್ಗದಲ್ಲಿ ರೈಲು ಸಂಚಾರವನ್ನು ಪುನರಾರಂಭಿಸಿ ಯಥಾಸ್ಥಿತಿಗೆ ತರಲಾಯಿತು. ಹಸಿರು ಮಾರ್ಗ ಮತ್ತು ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಘಟನೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿರುವ ಬಿಎಂಆರ್‌ಸಿಎಲ್, ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ತೋರಿದ ಸಹಕಾರ ಮತ್ತು ತಾಳ್ಮೆಗೆ ಧನ್ಯವಾದ ಸಲ್ಲಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R