
ಬೆಂಗಳೂರು, 10 ನವೆಂಬರ್ (ಹಿ.ಸ.):
ದೀಪಾವಳಿ ಹಬ್ಬದ ಆಚರಣೆಯ ಹೆಸರಿನಲ್ಲಿ ನಗರದ ಖಾಸಗಿ ವಿಲ್ಲಾದಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ ಆಯೋಜಿಸಲಾಗಿದ್ದ ಅಕ್ರಮ ಹೈಟೆಕ್ ಪೂಲ್ ಪಾರ್ಟಿ ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಎಂಡಿಎಂಎ, ಗಾಂಜಾ, ಮದ್ಯ ಹಾಗೂ ನಿಷೇಧಿತ ಹುಕ್ಕಾ ಬಳಕೆ ಮಾಡಿರುವುದು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮಾರತ್‌ಹಳ್ಳಿಯ ಯಮಲೂರಿನ ಕಾರಿಯಮ್ಮನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ವಿಲ್ಲಾದಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು. ದೀಪಾವಳಿ ಆಚರಣೆಯ ಹೆಸರಿನಲ್ಲಿ ಅನುಮತಿಯಿಲ್ಲದೆ ಪಾರ್ಟಿ ನಡೆಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕ-ಯುವತಿಯರನ್ನು ಆಕರ್ಷಿಸಲು ಆಯೋಜಕರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದರು. ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಅಂತರ್ಜಾಲ ವೇದಿಕೆಗಳ ಮೂಲಕ ಪಾರ್ಟಿಯ ಪ್ರಚಾರ ನಡೆಸಿ ಆಹ್ವಾನ ನೀಡಲಾಗಿತ್ತು. ಎಫ್‌ವಿ ಸೋಷಿಯಲ್ 404 ಮತ್ತು ಹಾಪ್ಝಿಕ್ಸ್ ಆ್ಯಪ್‌ಗಳ ಮೂಲಕವೂ ಯುವಕರನ್ನು ಸಂಪರ್ಕಿಸಲಾಗಿತ್ತು ಎನ್ನಲಾಗಿದೆ.
ಪುರುಷರಿಗೆ ₹1,710, ಮಹಿಳೆಯರಿಗೆ ₹1,080 ಶುಲ್ಕ
ಪಾರ್ಟಿಗೆ ಪ್ರವೇಶ ಪಡೆಯಲು ಪುರುಷರಿಗೆ ₹1,710, ಮಹಿಳೆಯರಿಗೆ ₹1,080 ಹಾಗೂ ಜೋಡಿಗಳಿಗೆ ₹2,400 ಶುಲ್ಕ ನಿಗದಿಪಡಿಸಲಾಗಿತ್ತು. ಮಾದಕ ವಸ್ತುಗಳು ಮತ್ತು ಇತರ ಪದಾರ್ಥಗಳಿಗೆ ಪ್ರತ್ಯೇಕವಾಗಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಪಾರ್ಟಿ ನಡೆಯುತ್ತಿತ್ತು. ಪೊಲೀಸರ ಕಣ್ತಪ್ಪಿಸಲು ಭಾಗವಹಿಸುವವರಿಗೆ ವಿಲ್ಲಾದ ನಿಖರ ವಿಳಾಸ ನೀಡದೆ, ಸ್ಥಳದ ಅಂದಾಜು ಮಾಹಿತಿ ಮಾತ್ರ ರವಾನಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳ ಬಂಧನ
ಸಿಸಿಬಿ ಪೊಲೀಸರು ದಾಳಿ ನಡೆಸಿ ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ್ ಎಂಬ ಮೂವರನ್ನು ಬಂಧಿಸಿದ್ದಾರೆ. ಸ್ಥಳದಿಂದ ಮಾದಕ ವಸ್ತುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡು ಪರಿಶೀಲನೆಗಾಗಿ ಕಳುಹಿಸಲಾಗಿದೆ.
ಈ ಸಂಬಂಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಬ್ಬದ ಆಚರಣೆಯ ಹೆಸರಿನಲ್ಲಿ ಖಾಸಗಿ ವಿಲ್ಲಾದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಸಿಸಿಬಿ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದ್ದು, ಮಾದಕ ವಸ್ತುಗಳ ಬಳಕೆ ಹಾಗೂ ಅನುಮತಿಯಿಲ್ಲದ ಪಾರ್ಟಿಗಳ ಆಯೋಜನೆ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R