
ವಿಜಯಪುರ, 01 ನವೆಂಬರ್ (ಹಿ.ಸ.)
ಮಹಾರಾಷ್ಟ್ರ ಸರ್ಕಾರವು ಕೃಷ್ಣಾ ನದಿಯ ಪ್ರವಾಹದ ನೀರನ್ನು ಭೀಮಾ ನದಿಯ ಉಜ್ಜನಿ ಜಲಾಶಯಕ್ಕೆ ವರ್ಗಾಯಿಸುವ ಉದ್ದೇಶದಿಂದ ರೂಪಿಸುತ್ತಿರುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ಜಲಹಕ್ಕುಗಳು, ಆಲಮಟ್ಟಿ ಮೇಲ್ದಂಡೆ ಯೋಜನೆ ಹಾಗೂ ರೈತರ ಹಿತಾಸಕ್ತಿಯೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಅವರು ಅ.9ರಂದು ಮುಂಬೈನಲ್ಲಿ ನಡೆದ ‘ಇಂಡಿಯಾ ಟುಡೇ ಕಾನ್ಕ್ಲೇವ್–2026’ರಲ್ಲಿ ಮಾತನಾಡುವ ಸಂದರ್ಭದಲ್ಲಿ, ಮಹಾಬಲೇಶ್ವರ ಸಮೀಪ ಕೃಷ್ಣಾ ನದಿಯಿಂದ ಸುಮಾರು 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಯ ಉಜ್ಜನಿ ಜಲಾಶಯಕ್ಕೆ ವರ್ಗಾಯಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರಸ್ತಾಪಿಸಿರುವುದು ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ನೀರನ್ನು ಮರಾಠವಾಡದ ಎರಡು ಜಿಲ್ಲೆಗಳು ಸೇರಿದಂತೆ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕೆಲವು ಪ್ರದೇಶಗಳ ಬಳಕೆಗೆ ತಿರುಗಿಸುವ ಉದ್ದೇಶ ಹೊಂದಿರುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಸುಮಾರು ₹19,000 ಕೋಟಿ ವೆಚ್ಚದ ಈ ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಮಹಾರಾಷ್ಟ್ರ ಸರ್ಕಾರ ಈಗಾಗಲೇ ₹24 ಕೋಟಿ ಅನುದಾನ ಮಂಜೂರು ಮಾಡಿದೆ ಎನ್ನಲಾಗಿದ್ದು, ಸುಮಾರು 84 ಕಿ.ಮೀ. ಉದ್ದದ ಮಾರ್ಗದಲ್ಲಿ ಭೂವೈಜ್ಞಾನಿಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆದಿದೆ.
2026ರ ಅಂತ್ಯದ ವೇಳೆಗೆ ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಉದ್ದೇಶವಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಇದರ ಜೊತೆಗೆ ಯೋಜನೆಯ ಕಾಮಗಾರಿ ಆರಂಭವಾಗಿದೆ ಹಾಗೂ ವಿಶ್ವಬ್ಯಾಂಕ್ ಹಣಕಾಸು ನೆರವು ನೀಡುತ್ತಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಹೇಳಿಕೆ ಹಲವು ಕಾನೂನು ಮತ್ತು ತಾಂತ್ರಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಜಲವಿವಾದ ನ್ಯಾಯಮಂಡಳಿ ತೀರ್ಪಿನ ಹಿನ್ನೆಲೆ
ಕೃಷ್ಣಾ ಜಲವಿವಾದ ನ್ಯಾಯಮಂಡಳಿ–II (KWDT-II) ತೀರ್ಪಿನ ಪ್ರಕಾರ ಹೆಚ್ಚುವರಿಯಾಗಿ ಹಂಚಿಕೆಯಾದ 448 ಟಿಎಂಸಿ ಅಡಿ ನೀರಿನಲ್ಲಿ ಮಹಾರಾಷ್ಟ್ರಕ್ಕೆ 81 ಟಿಎಂಸಿ, ಕರ್ನಾಟಕಕ್ಕೆ 173 ಟಿಎಂಸಿ ಹಾಗೂ ಅವಿಭಜಿತ ಆಂಧ್ರಪ್ರದೇಶಕ್ಕೆ 194 ಟಿಎಂಸಿ ಅಡಿ ನೀರು ನಿಗದಿಪಡಿಸಲಾಗಿದೆ.
ಈ ಹಿಂದೆ ಕೂಡ ಮೇಲ್ಕೃಷ್ಣಾ (K-1) ಉಪಜಲಾನಯನ ಪ್ರದೇಶದಿಂದ ಭೀಮಾ (K-5) ಉಪಜಲಾನಯನ ಪ್ರದೇಶಕ್ಕೆ 35 ಟಿಎಂಸಿ ಅಡಿ ನೀರನ್ನು ವರ್ಗಾಯಿಸುವ ಮಹಾರಾಷ್ಟ್ರದ ಪ್ರಸ್ತಾವನೆಗೆ ನ್ಯಾಯಮಂಡಳಿ ಒಪ್ಪಿಗೆ ನೀಡಿರಲಿಲ್ಲ. K-1 ಪ್ರದೇಶದ ನೀರಿನ ಹರಿವು ಮತ್ತು ಬಳಕೆಯ ಮೇಲೆ ಇಂತಹ ವರ್ಗಾವಣೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯನ್ನು ಪರಿಗಣಿಸಿ ಈ ನಿಲುವು ಕೈಗೊಳ್ಳಲಾಗಿತ್ತು ಎಂಬುದನ್ನು ಸಚಿವರು ಉಲ್ಲೇಖಿಸಿದ್ದಾರೆ.
ಹೀಗಿರುವಾಗ, ಈಗ ಮಹಾರಾಷ್ಟ್ರ ಸರ್ಕಾರವು 40 ಟಿಎಂಸಿ ಅಡಿ ನೀರನ್ನು ಕೃಷ್ಣಾದಿಂದ ಭೀಮಾ ಜಲಾನಯನ ಪ್ರದೇಶಕ್ಕೆ ವರ್ಗಾಯಿಸುವ ಯೋಜನೆಗೆ ಯಾವ ಕಾನೂನು ಹಾಗೂ ತಾಂತ್ರಿಕ ಆಧಾರವಿದೆ? ಎಂಬ ಪ್ರಶ್ನೆ ಎದುರಾಗಿದೆ ಎಂದು ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ.
ಕೇಂದ್ರದ ಅನುಮತಿ ಇದೆಯೇ?
KWDT-II ತೀರ್ಪು ಇನ್ನೂ ಗೆಜೆಟ್ನಲ್ಲಿ ಅಧಿಸೂಚಿತವಾಗಿಲ್ಲದ ಸಂದರ್ಭದಲ್ಲಿ ಮಹಾರಾಷ್ಟ್ರದ ಈ ಯೋಜನೆಗೆ ಅಗತ್ಯವಿರುವ ಕಾನೂನುಬದ್ಧ ಹಾಗೂ ಕೇಂದ್ರ ಮಟ್ಟದ ಅನುಮತಿಗಳು ದೊರೆತಿವೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಇದೆಯೇ? ಪರಿಸರ, ಜಲಸಂಪನ್ಮೂಲ ಹಾಗೂ ಇತರ ಸಂಬಂಧಿತ ಇಲಾಖೆಗಳ ಅನುಮತಿಗಳನ್ನು ಪಡೆದಿದೆಯೇ? ವಿಶ್ವಬ್ಯಾಂಕ್ನಿಂದ ಹಣಕಾಸು ನೆರವು ದೊರೆಯುತ್ತಿದ್ದರೆ ಅದಕ್ಕೆ ಆಧಾರವೇನು? ಎಂಬ ಪ್ರಶ್ನೆಗಳಿಗೂ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.
ಕರ್ನಾಟಕಕ್ಕೆ ಒಂದು ನಿಯಮ, ಮಹಾರಾಷ್ಟ್ರಕ್ಕೆ ಮತ್ತೊಂದು ನಿಯಮವೇ?
ಇದೇ ವೇಳೆ, KWDT-II ತೀರ್ಪು ಗೆಜೆಟ್ನಲ್ಲಿ ಅಧಿಸೂಚಿತವಾಗಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕರ್ನಾಟಕದ ಮಹತ್ವಾಕಾಂಕ್ಷೆಯ ಆಲಮಟ್ಟಿ ಮೇಲ್ದಂಡೆ ಯೋಜನೆ ಹಂತ–IIIರ ಡಿಪಿಆರ್ ಅನ್ನು ಕೇಂದ್ರ ಸರ್ಕಾರ ಹಿಂದಿರುಗಿಸುತ್ತಿರುವ ಸಂದರ್ಭದಲ್ಲಿ, ಮಹಾರಾಷ್ಟ್ರದ ಯೋಜನೆಗೆ ಇದೇ ಮಾನದಂಡ ಏಕೆ ಅನ್ವಯಿಸಬಾರದು ಎಂಬ ಪ್ರಶ್ನೆಯನ್ನು ಸಚಿವ ಎಂ.ಬಿ. ಪಾಟೀಲ ಮುಂದಿಟ್ಟಿದ್ದಾರೆ.
ಕರ್ನಾಟಕದ ಆಲಮಟ್ಟಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಾನೂನುಬದ್ಧ ಹಾಗೂ ಅಧಿಸೂಚನೆಗೆ ಸಂಬಂಧಿಸಿದ ಅಂಶಗಳನ್ನು ಕಟ್ಟುನಿಟ್ಟಾಗಿ ಪರಿಗಣಿಸುತ್ತಿರುವಾಗ, ಇದೇ ರೀತಿಯ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಕೃಷ್ಣಾ ನದಿ ನೀರನ್ನು ಮತ್ತೊಂದು ಜಲಾನಯನ ಪ್ರದೇಶಕ್ಕೆ ವರ್ಗಾಯಿಸುವ ಯೋಜನೆಯನ್ನು ಮುಂದುವರಿಸುವುದು ಎಷ್ಟು ಸಮಂಜಸ ಎಂಬುದನ್ನು ಕೇಂದ್ರ ಸರ್ಕಾರ ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.
ಆಲಮಟ್ಟಿ ಒಳಹರಿವಿನ ಮೇಲೆ ಪರಿಣಾಮದ ಆತಂಕ
ಕೃಷ್ಣ ಮೇಲ್ದಂಡೆ ಪ್ರದೇಶದಲ್ಲಿ ನೀರಿನ ಹರಿವಿನ ದಿಕ್ಕು ಬದಲಿಸುವ ಯಾವುದೇ ಯೋಜನೆಯು ಭವಿಷ್ಯದಲ್ಲಿ ಆಲಮಟ್ಟಿ ಜಲಾಶಯದ ಒಳಹರಿವು ಹಾಗೂ ಕೆಳಹಂತದ ರಾಜ್ಯಗಳ ನೀರಿನ ಲಭ್ಯತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಯೋಜನೆಗಳನ್ನು ಕೇವಲ ಒಂದು ರಾಜ್ಯದ ಕುಡಿಯುವ ನೀರು ಅಥವಾ ನೀರಾವರಿ ಅಗತ್ಯಗಳ ದೃಷ್ಟಿಯಿಂದ ಪರಿಗಣಿಸದೆ, ಅಂತರರಾಜ್ಯ ನದಿ ನೀರು ಹಂಚಿಕೆ, ನ್ಯಾಯಮಂಡಳಿ ತೀರ್ಪುಗಳು ಹಾಗೂ ಕೆಳಹಂತದ ರಾಜ್ಯಗಳ ಹಕ್ಕುಗಳನ್ನು ಒಳಗೊಂಡ ಸಮಗ್ರ ದೃಷ್ಟಿಕೋನದಲ್ಲಿ ಪರಿಶೀಲಿಸಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೃಷ್ಣಾ ನದಿ ನೀರಿನ ಬಳಕೆ ಹಾಗೂ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ದೊರೆತಿರುವ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ರಾಜ್ಯ ಸರ್ಕಾರ ಎಚ್ಚರಿಕೆಯಿಂದ ನಡೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಬಂದರೆ ಕಾನೂನುಬದ್ಧ ಹೋರಾಟ
“ಕರ್ನಾಟಕದ ಜಲಹಕ್ಕುಗಳು, ಆಲಮಟ್ಟಿ ಯೋಜನೆ ಮತ್ತು ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸುವುದು ನಮ್ಮ ಆದ್ಯತೆ. ಮಹಾರಾಷ್ಟ್ರದ ಪ್ರಸ್ತಾವಿತ ನೀರು ವರ್ಗಾವಣೆ ಯೋಜನೆಯ ಕುರಿತು ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಅಗತ್ಯ ವಿಚಾರಗಳನ್ನು ತಂದು ಸಮಗ್ರ ಪರಿಶೀಲನೆ ನಡೆಸಲಾಗುವುದು. ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ” ಎಂದು ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಕ್ಕುಗಳನ್ನು ಕಾಪಾಡಲು ಸರ್ಕಾರ ಅಗತ್ಯವಿರುವ ಎಲ್ಲ ಕಾನೂನುಬದ್ಧ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ. ಆಲಮಟ್ಟಿ ಮೇಲ್ದಂಡೆ ಯೋಜನೆಯ ಭವಿಷ್ಯ, ವಿಜಯಪುರ–ಬಾಗಲಕೋಟೆ ಸೇರಿದಂತೆ ಕೃಷ್ಣಾ ನದಿ ನೀರಿನ ಮೇಲೆ ಅವಲಂಬಿತವಾಗಿರುವ ಪ್ರದೇಶಗಳ ರೈತರ ಹಿತಾಸಕ್ತಿ ಮತ್ತು ರಾಜ್ಯದ ನೀರಿನ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದ 40 ಟಿಎಂಸಿ ನೀರು ವರ್ಗಾವಣೆ ಪ್ರಸ್ತಾವನೆ ಇದೀಗ ಅಂತರರಾಜ್ಯ ಜಲವಿವಾದದ ಹೊಸ ಚರ್ಚೆಗೆ ಕಾರಣವಾಗಿದ್ದು, ಯೋಜನೆಯ ಕಾನೂನುಬದ್ಧತೆ, ತಾಂತ್ರಿಕ ಸಾಧ್ಯತೆ, ಕೇಂದ್ರದ ಅನುಮತಿಗಳು ಹಾಗೂ ಹಣಕಾಸು ನೆರವಿನ ಕುರಿತು ಸ್ಪಷ್ಟತೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಮಹತ್ವ ಪಡೆದುಕೊಂಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande