ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಸಂಭ್ರಮ
ಬೆಳಗಾವಿ, 01 ನವೆಂಬರ್ (ಹಿ.ಸ.): ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಮುಗಿಲು ಮುಟ್ಟಿತು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ನಗರದ ಹೃದಯಭಾಗವಾದ ರಾಣಿ ಚೆನ್ನಮ್ಮ ವೃತ್ತದಲ್ಲಿ ಕನ್ನಡಿಗರು ಪಟಾಕಿ ಸಿಡಿಸಿ, ಕೆಂಪು-ಹಳದಿ ಬಾವುಟಗಳನ್ನು ಹಾರಿಸಿ, ಕನ್ನಡದ ಜಯಘ
ರಾಜ್ಯೋತ್ಸವ ಆಚರಣೆ


ಬೆಳಗಾವಿ, 01 ನವೆಂಬರ್ (ಹಿ.ಸ.):

ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಮುಗಿಲು ಮುಟ್ಟಿತು. ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ನಗರದ ಹೃದಯಭಾಗವಾದ ರಾಣಿ ಚೆನ್ನಮ್ಮ ವೃತ್ತದಲ್ಲಿ ಕನ್ನಡಿಗರು ಪಟಾಕಿ ಸಿಡಿಸಿ, ಕೆಂಪು-ಹಳದಿ ಬಾವುಟಗಳನ್ನು ಹಾರಿಸಿ, ಕನ್ನಡದ ಜಯಘೋಷ ಮೊಳಗಿಸುವ ಮೂಲಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ವೃತ್ತದಲ್ಲಿ ಯುವಕ-ಯುವತಿಯರು, ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಸೇರಿದಂತೆ ಸಹಸ್ರಾರು ಜನರು ಜಮಾಯಿಸಿದ್ದರು. ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಿದವು. ಕನ್ನಡದ ಪರ ಘೋಷಣೆಗಳು ಮೊಳಗಿದವು.

ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಆಕಾಶದೆತ್ತರಕ್ಕೆ ಚಿಮ್ಮಿದ ಸಿಡಿಮದ್ದುಗಳು ಬಾನಂಗಳದಲ್ಲಿ ಬಣ್ಣಗಳ ಚಿತ್ತಾರ ಮೂಡಿಸಿದವು. ಪಟಾಕಿಗಳ ಸದ್ದು, ವಿದ್ಯುತ್ ದೀಪಗಳ ಬೆಳಕು, ಯುವ ಸಮೂಹದ ಕೇಕೆ ಮತ್ತು ಚಪ್ಪಾಳೆಗಳ ನಡುವೆ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿತು. ಇಡೀ ರಾಣಿ ಚೆನ್ನಮ್ಮ ವೃತ್ತ ಕನ್ನಡಮಯವಾಗಿತ್ತು.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಹಾಗೂ ಉಪಮೇಯರ್ ಹನುಮಂತ ಕೊಂಗಾಲಿ ಮಧ್ಯರಾತ್ರಿಯೇ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ, ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮದಲ್ಲಿ ಭಾಗಿಯಾದರು.

ಮಧ್ಯರಾತ್ರಿಯೇ ರಾಜ್ಯೋತ್ಸವ ಆಚರಣೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ರಾತ್ರಿ 1 ಗಂಟೆಯವರೆಗೆ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿತ್ತು. ಯಾವುದೇ ಗದ್ದಲ, ಗಲಾಟೆ ನಡೆಯದೆ ಮಧ್ಯರಾತ್ರಿ ರಾಜ್ಯೋತ್ಸವ ಆಚರಣೆ ಶಾಂತಿಯುತವಾಗಿ ಆಚರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande