
ಬೆಂಗಳೂರು, 08 ಅಕ್ಟೋಬರ್ (ಹಿ.ಸ.):
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಸಿಜೆಪಿ ನೇತೃತ್ವದಲ್ಲಿ ‘ಜನತಾ ನ್ಯಾಯಾಲಯ’ ಹೆಸರಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್, ಯೂಟ್ಯೂಬರ್ ಧ್ರುವ ರಾಠಿ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಸೇರಿದಂತೆ ಹಲವು ಗಣ್ಯರು, ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಎಸ್‌ಐಆರ್ ಪ್ರಕ್ರಿಯೆಯಿಂದ ತೊಂದರೆಗೊಳಗಾಗಿರುವುದಾಗಿ ಹೇಳಿಕೊಂಡಿರುವ ರಾಜ್ಯದ ವಿವಿಧ ಭಾಗಗಳ ಜನರು ಕಾರ್ಯಕ್ರಮದಲ್ಲಿ ತಮ್ಮ ಅಹವಾಲುಗಳನ್ನು ಹಂಚಿಕೊಂಡರು. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಕುರಿತು ಜನರ ಅನುಭವಗಳನ್ನು ಆಲಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು ಎಂದು ಆಯೋಜಕರು ತಿಳಿಸಿದರು. ಬಳಿಕ ಮಹಿಳೆಯರ ಪರವಾಗಿ ‘ಚಪ್ಪಲಿ ಪ್ರತಿಭಟನೆ’ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರಾಜ್, “ಇವತ್ತು ದೇಶದಲ್ಲಿ ನಮ್ಮ ವೋಟ್ ಹೋಯಿತು ಅನ್ನೋದಲ್ಲ, ಪ್ರತಿಯೊಬ್ಬ ಪ್ರಜೆಯ ಗೌರವ ಹೋಗ್ತಿದೆ” ಎಂದು ಹೇಳಿದರು. “ನಮ್ಮ ವೋಟ್ ಡಿಲೀಟ್ ಮಾಡೋಕೆ ಇವರ್ಯಾರು? ಎಸ್‌ಐಆರ್ ರದ್ದು ಆಗಬೇಕು. ಅಲ್ಲಿಯವರೆಗೆ ನಾವು ಸುಮ್ಮನೆ ಇರಲ್ಲ” ಎಂದು ಒತ್ತಾಯಿಸಿದರು.
ಎಸ್‌ಐಆರ್‌ನಿಂದ ಅನ್ಯಾಯಕ್ಕೆ ಒಳಗಾದ ಜನರನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿರುವುದಾಗಿ ಹೇಳಿದ ಅವರು, ಮತದಾರರ ಹಕ್ಕುಗಳ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು. ಅವರ ಭಾಷಣದ ವೇಳೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಆರೋಪಗಳನ್ನು ಹೊರಿಸಿದ ಅವರು, ಎಸ್‌ಐಆರ್ ಮೂಲಕ ದೇಶಾದ್ಯಂತ ಹಾಗೂ ಕರ್ನಾಟಕದಲ್ಲಿ ಕೋಟ್ಯಂತರ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ದೂರಿದರು.
“ದೇಶ ಉಳಿಯಲು ವೋಟ್ ಉಳಿಯಬೇಕು” ಎಂದು ಹೇಳಿದ ಅವರು, ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂದಿನ ದಿನಗಳಲ್ಲೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಮಾಜಿ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. ಮತದಾನ ಮಾಡುವುದು ನಾಗರಿಕರ ಮೂಲಭೂತ ಹಕ್ಕಾಗಿದ್ದು, ಅದಕ್ಕೆ ಧಕ್ಕೆಯಾಗಬಾರದು ಎಂದು ಹೇಳಿದರು. ಎಸ್‌ಐಆರ್ ರದ್ದುಪಡಿಸುವಂತೆ ಆಗ್ರಹಿಸಿದ ಅವರು, ಈ ವಿಚಾರದಲ್ಲಿ ಚುನಾವಣಾ ಆಯೋಗ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು ಹಾಗೂ ಮಾಧ್ಯಮಗಳು ಪ್ರಶ್ನಿಸಬೇಕು ಎಂದು ಒತ್ತಾಯಿಸಿದರು.
ಯೂಟ್ಯೂಬರ್ ಧ್ರುವ ರಾಠಿ ಮಾತನಾಡಿ, ಇದು ತಮ್ಮ ಮೊದಲ ಪ್ರತಿಭಟನೆ ಎಂದು ಹೇಳಿ, ತಾವು ಯಾವುದೇ ಸರ್ಕಾರ ಬದಲಿಸಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರುಗಳ ಬದಲಾವಣೆ ಮತ್ತು ತೆಗೆದುಹಾಕುವಿಕೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಹಾಗೂ ಬಿಹಾರದ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಮತದಾರರ ಹಕ್ಕುಗಳ ಕುರಿತ ಪ್ರಶ್ನೆಗಳನ್ನು ಎತ್ತಿದರು. ಬಳಿಕ ನೇರ ಪ್ರಸಾರದ ವಿಡಿಯೊ ಮೂಲಕವೂ ‘ವೋಟ್ ಚೋರ್’ ಎಂಬ ಘೋಷಣೆ ಮಾಡಿದರು.
ಪ್ರತಿಭಟನೆಯಲ್ಲಿ ಸಿಜೆಪಿ ಮುಖಂಡರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್, ಆಶುತೋಷ್ ರಾಂಕಾ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಎಸ್‌ಐಆರ್ ರದ್ದುಪಡಿಸುವುದು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R