ನಮ್ಮ ಮೆಟ್ರೋ ಗುಲಾಬಿ ಮಾರ್ಗದ 7.5 ಕಿ.ಮೀ. ಎತ್ತರಿಸಿದ ವಿಭಾಗದ ಸುರಕ್ಷತಾ ತಪಾಸಣೆ ಪೂರ್ಣ
ಬೆಂಗಳೂರು ಮೆಟ್ರೋದ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ 7.5 ಕಿ.ಮೀ. ಎತ್ತರಿಸಿದ ವಿಭಾಗದಲ್ಲಿ ಸಿಎಂಆರ್ಎಸ್ನ ಮೂರು ದಿನಗಳ ಸುರಕ್ಷತಾ ತಪಾಸಣೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪ್ರಯಾಣಿಕರ ಸಂಚಾರಕ್ಕೆ ಮಾರ್ಗ ಮುಕ್ತವಾಗುವ ನಿರೀಕ್ಷೆಯಿದೆ.
ನಮ್ಮ ಮೆಟ್ರೋ ಗುಲಾಬಿ ಮಾರ್ಗದ 7.5 ಕಿ.ಮೀ. ಎತ್ತರಿಸಿದ ವಿಭಾಗದ ಸುರಕ್ಷತಾ ತಪಾಸಣೆ ಪೂರ್ಣ


ಬೆಂಗಳೂರು, 08 ಅಕ್ಟೋಬರ್ (ಹಿ.ಸ.):

ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಎತ್ತರಿಸಿದ ವಿಭಾಗದಲ್ಲಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ನಡೆಸಿದ ಮೂರು ದಿನಗಳ ಶಾಸನಬದ್ಧ ಸುರಕ್ಷತಾ ತಪಾಸಣೆ ಗುರುವಾರ ಪೂರ್ಣಗೊಂಡಿದೆ.

ದಕ್ಷಿಣ ವಲಯದ ಮೆಟ್ರೋ ರೈಲು ಸುರಕ್ಷತಾ ಆಯುಕ್ತ ವಿ. ವೆಂಕಟಸುಬ್ರಮಣಿಯನ್ ನೇತೃತ್ವದಲ್ಲಿ ಅ.6ರಿಂದ 8ರವರೆಗೆ ತಪಾಸಣೆ ನಡೆಯಿತು.

ಈ ಎತ್ತರಿಸಿದ ವಿಭಾಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ತಾವರೆಕೆರೆ ಸೇರಿದಂತೆ ಒಟ್ಟು ಆರು ನಿಲ್ದಾಣಗಳಿವೆ.

ತಪಾಸಣೆಯ ಮೊದಲ ದಿನ ಸಿಎಂಆರ್ಎಸ್ ಹಾಗೂ ತಂಡವು ಮೋಟಾರ್ ಟ್ರಾಲಿ ಮೂಲಕ ಮುಖ್ಯ ಮಾರ್ಗ ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ಪರಿಶೀಲಿಸಿತು.

ಎರಡನೇ ದಿನ ಕೋತನೂರು ಡಿಪೋದ ಸೌಲಭ್ಯಗಳನ್ನು ಪರಿಶೀಲಿಸುವುದರ ಜತೆಗೆ ಮುಖ್ಯ ಮಾರ್ಗದಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ಹಾಗೂ ವಿವಿಧ ಪರೀಕ್ಷೆಗಳನ್ನು ನಡೆಸಲಾಯಿತು.

ಮೂರನೇ ದಿನ ಬೈಯಪ್ಪನಹಳ್ಳಿಯ ಕಾರ್ಯಾಚರಣೆ ನಿಯಂತ್ರಣ ಕೇಂದ್ರ ಪರಿಶೀಲಿಸುವ ಮೂಲಕ ತಪಾಸಣೆ ಪೂರ್ಣಗೊಳಿಸಲಾಯಿತು.

ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಬಿಎಂಆರ್ಸಿಎಲ್ “ಸಾರ್ವಜನಿಕ ಪ್ರಯಾಣಿಕರ ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸುವ ಮೊದಲು ಸಿಎಂಆರ್ಎಸ್ ನಡೆಸುವ ತಪಾಸಣೆ ಪ್ರಮುಖ ಶಾಸನಬದ್ಧ ಸುರಕ್ಷತಾ ಪರಿಶೀಲನೆಯಾಗಿದೆ.

ತಪಾಸಣೆಯ ಸಂದರ್ಭದಲ್ಲಿ ಸಿಎಂಆರ್ಎಸ್ ಸೂಚಿಸಿರುವ ಅಂಶಗಳು ಹಾಗೂ ಷರತ್ತುಗಳನ್ನು ಪಾಲಿಸಿದ ಬಳಿಕವೇ ಪ್ರಯಾಣಿಕರ ಸಂಚಾರಕ್ಕೆ ಅಗತ್ಯವಾದ ಸುರಕ್ಷತಾ ಅನುಮೋದನೆ ನೀಡಲಾಗುತ್ತದೆ,” ಎಂದು ಬಿಎಂಆರ್ಸಿಎಲ್ ತಿಳಿಸಿದೆ.

ಈಗಾಗಲೇ ಬಿಎಂಆರ್ಸಿಎಲ್ 2026ರ ಆಗಸ್ಟ್ನಲ್ಲಿ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ ಯಿಂದ ವೇಗ ಪ್ರಮಾಣಪತ್ರ ಪಡೆದಿದೆ.

ರೈಲ್ವೆ ಮಂಡಳಿಯಿಂದ ಮೆಟ್ರೋ ರೈಲು ಬೋಗಿಗಳಿಗೆ ತಾತ್ಕಾಲಿಕ ಅನುಮೋದನೆ ಹಾಗೂ ಸಿಗ್ನಲಿಂಗ್ ವ್ಯವಸ್ಥೆಗೆ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕರಿಂದ ಸುರಕ್ಷತಾ ಪ್ರಮಾಣೀಕರಣವನ್ನೂ ಪಡೆದಿದೆ.

ಗುಲಾಬಿ ಮಾರ್ಗದ ಈ ಎತ್ತರಿಸಿದ ವಿಭಾಗ ಸಾರ್ವಜನಿಕ ಸೇವೆಗೆ ಮುಕ್ತಗೊಂಡ ಬಳಿಕ, ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 96.10 ಕಿ.ಮೀ. ಮೆಟ್ರೋ ಮಾರ್ಗವು 103.60 ಕಿ.ಮೀ.ಗೆ ವಿಸ್ತರಣೆಯಾಗಲಿದೆ.

ಇದರಿಂದ ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಧಾರಿಸಲಿದ್ದು, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬಲ ದೊರೆಯಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande