
ದಾವಣಗೆರೆ, 05 ಅಕ್ಟೋಬರ್ (ಹಿ.ಸ.):
‘ಬೇಲ್’ ಚಿತ್ರದ ಪ್ರಮೋಷನ್ ಹಿನ್ನೆಲೆಯಲ್ಲಿ ನಟ ಡಾ. ಶಿವರಾಜ್ ಕುಮಾರ್ ಸೋಮವಾರ ದಾವಣಗೆರೆಯ ತ್ರಿಶೂಲ್ ಟಾಕೀಸ್ಗೆ ಭೇಟಿ ನೀಡಿದರು.
ಹಾವೇರಿ ಹಾಗೂ ಹುಬ್ಬಳ್ಳಿಯಲ್ಲಿ ಚಿತ್ರದ ಪ್ರಚಾರ ಕಾರ್ಯಕ್ರಮಗಳನ್ನು ಮುಗಿಸಿ ದಾವಣಗೆರೆಗೆ ಆಗಮಿಸಿದ ಅವರು, ತ್ರಿಶೂಲ್ ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ಭೇಟಿಯಾದರು.
ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಣ್ಣ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಹಿಳಾ ಅಭಿಮಾನಿಗಳು ಆರತಿ ಬೆಳಗಿ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, “ದಾವಣಗೆರೆಯಲ್ಲಿ ಕನ್ನಡ ಸಿನಿಮಾಗಳಿಗೆ ಬಹಳ ಪ್ರೋತ್ಸಾಹ ಸಿಕ್ಕಿದೆ. ಅಪ್ಪಾಜಿ ಅವರ ಕಾಲದಿಂದಲೂ ಇಲ್ಲಿನ ಅಭಿಮಾನಿಗಳು ಕನ್ನಡ ಚಿತ್ರರಂಗವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದೇ ಪ್ರೀತಿ ಮತ್ತು ಪ್ರೋತ್ಸಾಹ ಈಗಲೂ ಮುಂದುವರಿದಿರುವುದು ಸಂತೋಷ ತಂದಿದೆ” ಎಂದು ಹೇಳಿದರು.
‘ಬೇಲ್’ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಶಿವರಾಜ್ ಕುಮಾರ್ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R