
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 5ರ ವೇಳೆಗೆ ರಾಜ್ಯದ ಒಟ್ಟು ಮತದಾರರ ಸಂಖ್ಯೆ 4,50,29,916ಕ್ಕೆ ಏರಿಕೆಯಾಗಿದೆ. ಈ ಪೈಕಿ 2,23,41,784 ಪುರುಷರು, 2,26,85,269 ಮಹಿಳೆಯರು ಹಾಗೂ 2,863 ತೃತೀಯ ಲಿಂಗದ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯಡಿ ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಈ ಪೈಕಿ 43,55,818 ನೋಟಿಸ್‌ಗಳನ್ನು ವಿತರಿಸಲಾಗಿದೆ. ಇನ್ನೂ 26,495 ನೋಟಿಸ್‌ಗಳ ವಿತರಣೆ ಬಾಕಿಯಿದ್ದು, ಒಟ್ಟಾರೆ ಶೇ.99.40ರಷ್ಟು ನೋಟಿಸ್‌ಗಳನ್ನು ವಿತರಿಸಲಾಗಿದೆ.
ವಿತರಿಸಲಾದ ನೋಟಿಸ್‌ಗಳ ಪೈಕಿ 36,89,063 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಶೇ.84.69ರಷ್ಟು ವಿಚಾರಣೆಗಳು ಮುಕ್ತಾಯಗೊಂಡಿವೆ. ಇನ್ನೂ 6,66,755 ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಅಕ್ಟೋಬರ್ 12ರಂದು ಕೊನೆಯ ವಿಚಾರಣೆ ನಡೆಯಲಿದೆ.
ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ನೋಟಿಸ್ ಹಂತದ ಪ್ರಕರಣಗಳ ವಿಲೇವಾರಿಗೆ ಅಕ್ಟೋಬರ್ 22 ಕೊನೆಯ ದಿನವಾಗಿದ್ದು, ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅನ್ಬುಕುಮಾರ್ ತಿಳಿಸಿದರು.
ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ‘ನಕ್ಷೆಗೊಳಪಡಿಸದ’ ಮತ್ತು ‘ಅಸಂಗತತೆ’ ವಿಭಾಗಗಳಲ್ಲಿ ನೋಟಿಸ್ ಪಡೆದವರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಂದ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳ ವಿಧಾನಸಭಾ ಕ್ಷೇತ್ರವಾರು ವಿವರಗಳನ್ನೂ ಪ್ರಕಟಿಸಲಾಗಿದ್ದು, ಇದರಲ್ಲಿ ನಮೂನೆ-9, ನಮೂನೆ-10, ನಮೂನೆ-11, ನಮೂನೆ-11ಎ ಹಾಗೂ ನಮೂನೆ-11ಬಿ ಸೇರಿವೆ.
22.05 ಲಕ್ಷ ಅರ್ಜಿಗಳ ಸ್ವೀಕೃತಿ
ಜೂನ್ 16ರಿಂದ ಅಕ್ಟೋಬರ್ 4ರವರೆಗೆ ರಾಜ್ಯದಲ್ಲಿ ಒಟ್ಟು 22,05,171 ಅರ್ಜಿಗಳು ಸ್ವೀಕರಿಸಲಾಗಿದೆ. ಇದರಲ್ಲಿ ನಮೂನೆ-6ರ ಅಡಿ 9,10,732, ನಮೂನೆ-6ಎ ಅಡಿ 4,677, ನಮೂನೆ-7 ಅಡಿ 91,278 ಹಾಗೂ ನಮೂನೆ-8 ಅಡಿ 11,98,484 ಅರ್ಜಿಗಳು ಬಂದಿವೆ.
ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ತೆಗೆದುಹಾಕುವ ಕುರಿತು ಆಕ್ಷೇಪ ಸಲ್ಲಿಸಲು ನಮೂನೆ-7 ಬಳಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ. ಸ್ವೀಕರಿಸಲಾದ 91,278 ನಮೂನೆ-7 ಅರ್ಜಿಗಳ ಪೈಕಿ ಪ್ರಸ್ತಾವಿತ ಸೇರ್ಪಡೆಗೆ ಸಂಬಂಧಿಸಿದ ಆಕ್ಷೇಪಗಳ ಸಂಖ್ಯೆ ಶೂನ್ಯ ಎಂದು ತಿಳಿಸಲಾಗಿದೆ.
ಬೆಂಗಳೂರು ನಗರದಲ್ಲಿ ಹೆಚ್ಚು ಅರ್ಜಿಗಳು
ಜಿಲ್ಲಾವಾರು ಅರ್ಜಿಗಳ ಪೈಕಿ ಬೆಂಗಳೂರು ನಗರದಲ್ಲಿ 2,48,650 ಅರ್ಜಿಗಳು ಸ್ವೀಕರಿಸಲಾಗಿದ್ದು, ಅತಿ ಹೆಚ್ಚು ಅರ್ಜಿಗಳು ಬಂದ ಪ್ರದೇಶವಾಗಿದೆ. ಬೆಂಗಳೂರು ಉತ್ತರದಲ್ಲಿ 1,36,642, ಬೆಳಗಾವಿಯಲ್ಲಿ 1,11,323, ಮೈಸೂರಿನಲ್ಲಿ 1,09,201, ದಕ್ಷಿಣ ಕನ್ನಡದಲ್ಲಿ 1,06,230, ಬೆಂಗಳೂರು ದಕ್ಷಿಣದಲ್ಲಿ 1,04,350, ಬೆಂಗಳೂರು ಕೇಂದ್ರದಲ್ಲಿ 1,00,545, ಗುಲ್ಬರ್ಗಾದಲ್ಲಿ 1,00,374, ತುಮಕೂರಿನಲ್ಲಿ 75,562 ಹಾಗೂ ಬೀದರ್‌ನಲ್ಲಿ 65,663 ಅರ್ಜಿಗಳು ಸ್ವೀಕರಿಸಲಾಗಿದೆ.
ಅರ್ಹ ಮತದಾರರಿಗೆ ಅವಕಾಶ
ಕರಡು ಮತದಾರರ ಪಟ್ಟಿಯಿಂದ ಯಾವುದೇ ಮತದಾರರನ್ನು ಕೈಬಿಡಲಾಗಿಲ್ಲ. ನಮೂನೆ-7 ಅರ್ಜಿ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೂ ಯಾವುದೇ ಮತದಾರರ ಹೆಸರನ್ನು ತೆಗೆದುಹಾಕಲಾಗಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಸ್ಪಷ್ಟಪಡಿಸಿದರು.
ಅರ್ಹ ಮತದಾರರು ತಮ್ಮ ಹಕ್ಕು ಪಡೆಯಲು ನಮೂನೆ-6ರ ಮೂಲಕ ಅರ್ಜಿ ಸಲ್ಲಿಸಬಹುದು. ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುನಾವಣಾ ಆಯೋಗದ ಸೂಚನೆಯಂತೆ ಮತ್ತೊಮ್ಮೆ ವಿಶೇಷ ಅಭಿಯಾನ ನಡೆಸಿ ಅರ್ಹ ಮತದಾರರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಮನೆಗಳಿಗೆ ತೆರಳಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಬಾಕಿ ಇರುವ ವಿಚಾರಣೆಗಳನ್ನು ಅಕ್ಟೋಬರ್ 12ರೊಳಗೆ ಪೂರ್ಣಗೊಳಿಸಲಾಗುವುದು. ಈ ಕುರಿತು ಸೋಮವಾರ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಮತಗಟ್ಟೆ ಮಟ್ಟದ ಏಜೆಂಟ್‌ಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಅನ್ಬುಕುಮಾರ್ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R