
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಮುಖ್ಯಮಂತ್ರಿ ನೇಗಿಲಯೋಗಿ’ ಯೋಜನೆಗೆ ನ.1ರಿಂದ ಆ್ಯಪ್ ಆಧಾರಿತ ಸೇವೆ ಆರಂಭವಾಗಲಿದೆ. ಈ ಮೂಲಕ ರೈತರು ತಮ್ಮ ಜಮೀನಿನ ಉಳುಮೆಗಾಗಿ ಟ್ರ್ಯಾಕ್ಟರ್ ಸೇವೆಯನ್ನು ಸುಲಭವಾಗಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಎತ್ತುಗಳ ಕೊರತೆ ಹಾಗೂ ಉಳುಮೆಗೆ ಕಾರ್ಮಿಕರ ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ರೈತರಿಗೆ ನೆರವಾಗಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.
ಸರ್ಕಾರವೇ ಟ್ರ್ಯಾಕ್ಟರ್ಗಳನ್ನು ಬಾಡಿಗೆಗೆ ಪಡೆದು ರೈತರ ಜಮೀನು ಉಳುಮೆ ಮಾಡಲು ಬಳಸುವ ಯೋಜನೆ ಇದಾಗಿದೆ. ಈಗಾಗಲೇ ಯೋಜನೆಗೆ ₹152 ಕೋಟಿ ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ.
ಆರಂಭಿಕ ಹಂತದಲ್ಲಿ ರಾಜ್ಯದ 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಆ್ಯಪ್ ಮೂಲಕ ಸೇವೆ ಪಡೆಯುವ ವ್ಯವಸ್ಥೆಯಿಂದ ರೈತರಿಗೆ ಉಳುಮೆ ಸೇವೆ ಪಡೆಯುವುದು ಮತ್ತಷ್ಟು ಸರಳವಾಗಲಿದೆ.
ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ರೈತರ ಬೆಳೆ ಮಾಹಿತಿ ದಾಖಲಿಸಲು ಮೊಬೈಲ್ ಆಯಪ್ ಆಧಾರಿತ ವ್ಯವಸ್ಥೆ ಜಾರಿಗೊಳಿಸಿದೆ. ಬೆಳೆ ಸಮೀಕ್ಷೆಯ ಮಾಹಿತಿಯನ್ನು ಬೆಳೆ ವಿಮೆ, ಪ್ರಕೃತಿ ವಿಕೋಪ ಪರಿಹಾರ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೂ ಬಳಸಲಾಗುತ್ತಿದೆ.
“ಸಣ್ಣ ರೈತರಿಗೆ ಉಳುಮೆ ವೆಚ್ಚದ ಹೊರೆ ಕಡಿಮೆ ಮಾಡಿ, ಸಮಯಕ್ಕೆ ಸರಿಯಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R