ಮತದಾರರ ಹೆಸರು ಅಳಿಸುವಿಕೆ ಆರೋಪ: ಜಯನಗರ ಪೊಲೀಸರಿಗೆ ಸೌಮ್ಯಾ ರೆಡ್ಡಿ ದೂರು
ಜಯನಗರ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸಲಾಗಿದೆ ಎಂಬ ಆರೋಪದ ಕುರಿತು ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದು, 4,327ಕ್ಕೂ ಹೆಚ್ಚು ಮತದಾರರ ಹೆಸರುಗಳು ಹಾಗೂ 5,698 ಫಾರ್ಮ್-7 ಅರ್ಜಿಗಳ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
Sowmya-Reddy-complaint-alleged-voter-deletion-in-Jayanagar


ಬೆಂಗಳೂರು, 05 ಅಕ್ಟೋಬರ್ (ಹಿ.ಸ.):

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಮತದಾರರನ್ನು ಕೈಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು,

ಈ ಕುರಿತು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಶಾಸಕಿ ಸೌಮ್ಯಾ ರೆಡ್ಡಿ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರ-173ರ ವ್ಯಾಪ್ತಿಯ ವಾರ್ಡ್ ನಂ.171 ಗುರುವಪ್ಪನಪಾಳ್ಯದಲ್ಲೇ 4,327ಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಅಲ್ಲದೆ, ಇಡೀ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಹೆಸರುಗಳನ್ನು ಅಳಿಸುವಂತೆ 5,698 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ನಾಯಕ ಸಿ.ಕೆ. ರಾಮಮೂರ್ತಿ ಅವರ ಪರವಾಗಿ ವಾರ್ಡ್ ನಂ.171 ಸೇರಿದಂತೆ ಜಯನಗರ ಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಕೆಲಸ ಮಾಡುತ್ತಿರುವ ಲೋಕೇಶ್ ಎಂಬುವವರ ಕೋರಿಕೆಯ ಮೇರೆಗೆ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧದ ಫಾರ್ಮ್ಗಳು ಹಾಗೂ ಮತದಾರರ ಪಟ್ಟಿ ಜಯನಗರ ಆರ್ಒ ಕಚೇರಿಯಲ್ಲಿ ಲಭ್ಯವಿದ್ದು, ಅವುಗಳನ್ನು ಪರಿಶೀಲಿಸುವಂತೆ ಸೌಮ್ಯಾ ರೆಡ್ಡಿ ಮನವಿ ಮಾಡಿದ್ದಾರೆ.

ಇದೇ ವೇಳೆ, ಬಿಜೆಪಿ ನಾಯಕ ಸಿ.ಕೆ. ರಾಮಮೂರ್ತಿ ಅವರೊಂದಿಗೆ ಕೆಲಸ ಮಾಡಿದ್ದ ಯೋಗೇಶ್ ಎಂಬುವವರು ನಕಲಿ ಅಥವಾ ಅಕ್ರಮ ಮತದಾನದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಮಾಡಲಾಗಿದೆ.

ಈ ಅಕ್ರಮಗಳು ಬೆಳಕಿಗೆ ಬಂದ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ರಿಜ್ವಾನ್ ನವಾಬ್ ಹಾಗೂ ಸಂಬಂಧಪಟ್ಟ ಬಿಎಲ್ಒಗಳು ಸ್ಥಳದಲ್ಲಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಒ ಈಶ್ವರ್ ನಾಯ್ಡು ಹಾಗೂ ಎಆರ್ಒ ರೇಖಾ ಅವರು ವಿಚಾರಣೆ ನಡೆಸಿದ್ದಾರೆ ಎಂದು ಸೌಮ್ಯಾ ರೆಡ್ಡಿ ತಿಳಿಸಿದ್ದಾರೆ.

ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ವಿಡಿಯೊ ಸಾಕ್ಷ್ಯಗಳು ಹಾಗೂ ಛಾಯಾಚಿತ್ರಗಳಿದ್ದು, ಅಗತ್ಯವಿದ್ದಾಗ ಪರಿಶೀಲನೆಗೆ ಹಾಜರುಪಡಿಸುವುದಾಗಿ ಹೇಳಿದ್ದಾರೆ.

“ಮತದಾರರ ಪಟ್ಟಿಯ ದಾಖಲೆಗಳು, ವಿಚಾರಣೆಯ ಅಂಶಗಳು ಹಾಗೂ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ, ಯಾವುದೇ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande