
ಬೆಂಗಳೂರು, 05 ಅಕ್ಟೋಬರ್ (ಹಿ.ಸ.):
ರಾಜ್ಯದ 177 ತಾಲೂಕುಗಳಲ್ಲಿ ಈಗಾಗಲೇ ಸುಮಾರು ₹46 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಈ ಪೈಕಿ ಸುಮಾರು ₹10 ಸಾವಿರದಿಂದ ₹11 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಕೇಂದ್ರದ ಬರ ವೀಕ್ಷಣಾ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ಅಕ್ಟೋಬರ್ 3ರಿಂದ 6ರವರೆಗೆ ತಂಡಗಳು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ. ಪ್ರತಿ ತಂಡವು ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಬರಪೀಡಿತ ಎಂದು ಘೋಷಿಸಲಾದ 101 ತಾಲೂಕುಗಳ ಪರಿಸ್ಥಿತಿಯನ್ನು ತಂಡ ಪರಿಶೀಲಿಸುತ್ತಿದೆ. ಎರಡನೇ ಹಂತದಲ್ಲಿ ಘೋಷಿಸಲಾದ ಉಳಿದ 77 ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದರು.
ಕೇಂದ್ರದ ತಂಡದ ಸದಸ್ಯರು ಕೆಲವು ಕಡೆ ರೈತರೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಕೃಷಿ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಂಡಕ್ಕೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರ ತಂಡದ ಪರಿಶೀಲನೆ ಇಂದು ಅಥವಾ ನಾಳೆ ಪೂರ್ಣಗೊಳ್ಳಲಿದೆ. ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆ ವರದಿಯ ಆಧಾರದ ಮೇಲೆ ರಾಜ್ಯ ಕೇಳಿರುವ ಪರಿಹಾರದ ಕುರಿತು ಕೇಂದ್ರ ಸರ್ಕಾರ ತೀರ್ಮಾನಿಸಲಿದೆ ಎಂದರು.
ಕೇಂದ್ರಕ್ಕೆ ಅಂತಿಮ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ತಾವು ನಿಯೋಗದೊಂದಿಗೆ ತೆರಳಿ ಪರಿಹಾರ ನೀಡುವಂತೆ ಮನವಿ ಮಾಡುವ ಚಿಂತನೆಯಿದೆ ಎಂದು ಹೇಳಿದರು.
ಬರದಿಂದ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ಅದರ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲೂ ಬೀಳಲಿದೆ. ಸ್ವಾಭಾವಿಕವಾಗಿ ಜಿಎಸ್‌ಟಿ ಸಂಗ್ರಹವೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಈಗಾಗಲೇ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದನ್ನು ಗಮನಿಸಲಾಗುವುದು ಎಂದು ಪರಮೇಶ್ವರ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.