ಬೆಂಗಳೂರಿನಲ್ಲಿ ಫಾರ್ಮ್-7 ದುರ್ಬಳಕೆ ಆರೋಪ: ಬಿಜೆಪಿ ಬೂತ್ ಏಜೆಂಟ್ ವಿರುದ್ಧ ಎಫ್ಐಆರ್
SIR ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಫಾರ್ಮ್-7 ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಬೂತ್ ಏಜೆಂಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
bengaluru-form-7-misuse-fir-against-bjp-booth-agent


ಬೆಂಗಳೂರು, 04 ಅಕ್ಟೋಬರ್ (ಹಿ.ಸ.):

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡುವೆಯೇ ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಫಾರ್ಮ್-7 ಅರ್ಜಿಗಳ ದುರ್ಬಳಕೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಿಜೆಪಿ ಸದಸ್ಯೆ ಹಾಗೂ ಬೂತ್ ಏಜೆಂಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಲ್ಲೇಶ್ವರ ಕ್ಷೇತ್ರದ 778 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಪೈಕಿ ಅರ್ಹ ಮತದಾರರು ತಮ್ಮ ನಿವಾಸದಲ್ಲಿಯೇ ಇದ್ದರೂ ಅವರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಫ್ಐಆರ್ನಲ್ಲಿ ಜಿ.ಎಸ್. ವಸಂತಲಕ್ಷ್ಮಿ ಅವರನ್ನು ಪ್ರಮುಖ ಆರೋಪಿಯಾಗಿ ಹೆಸರಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಫಾರ್ಮ್-7 ಅರ್ಜಿಗಳ ಮೂಲಕ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಫಾರ್ಮ್-7 ಅರ್ಜಿಗಳನ್ನು ಸಲ್ಲಿಸುವುದೇ ಅಪರಾಧವಲ್ಲ. ಆದರೆ ತಪ್ಪು ಮಾಹಿತಿ, ನಕಲಿ ದಾಖಲೆ ಅಥವಾ ಸುಳ್ಳು ಆಕ್ಷೇಪಣೆಗಳನ್ನು ಉದ್ದೇಶಪೂರ್ವಕವಾಗಿ ಸಲ್ಲಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಬಿಜೆಪಿ ಹೇಳಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande