ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸುವುದನ್ನು ಕ್ರೀಡೆ ಕಲಿಸುತ್ತದೆ: ಡಾ. ಜಿ. ಪರಮೇಶ್ವರ
ಬೆಂಗಳೂರು, 04 ಅಕ್ಟೋಬರ್ (ಹಿ.ಸ.): ಕ್ರೀಡೆಯು ಜೀವನದಲ್ಲಿ ಗೆಲುವು ಮತ್ತು ಸೋಲನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಮಹತ್ವದ ಪಾಠವನ್ನು ಕಲಿಸುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಹೇಳಿದರು. ಭಾನುವಾರ ಬೆಂಗಳೂರಿನ ಪಿಡಿಸಿಎಸ್‌ಇ ಡಾಲ್
ಕ್ರೀಡಾಪಟುಗಳು ಜೊತೆ ಡಿಸಿಎಂ


ಬೆಂಗಳೂರು, 04 ಅಕ್ಟೋಬರ್ (ಹಿ.ಸ.):

ಕ್ರೀಡೆಯು ಜೀವನದಲ್ಲಿ ಗೆಲುವು ಮತ್ತು ಸೋಲನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಮಹತ್ವದ ಪಾಠವನ್ನು ಕಲಿಸುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಹೇಳಿದರು.

ಭಾನುವಾರ ಬೆಂಗಳೂರಿನ ಪಿಡಿಸಿಎಸ್‌ಇ ಡಾಲ್ಫಿನ್ ಅಕ್ವಾಟಿಕ್ಸ್‌ನಲ್ಲಿ ಆಯೋಜಿಸಿದ್ದ 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ 2026 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಭಾಗವಹಿಸುವುದು ಕೇವಲ ಪದಕ ಗೆಲ್ಲುವುದಕ್ಕೆ ಸೀಮಿತವಲ್ಲ. ಶಿಸ್ತು, ಮಾನಸಿಕ ದೃಢತೆ ಹಾಗೂ ಹಿನ್ನಡೆಗಳನ್ನು ಸ್ವೀಕರಿಸಿ ಮುಂದುವರಿಯುವ ಮನೋಭಾವವನ್ನು ಕ್ರೀಡೆ ಬೆಳೆಸುತ್ತದೆ ಎಂದು ಅವರು ಹೇಳಿದರು.

ಗೆಲುವು ಮತ್ತು ಸೋಲು ಎರಡೂ ಜೀವನದ ಭಾಗ. ಸೋತಾಗಲೂ ಅದರಿಂದ ಕಲಿಯಬೇಕಾದ ಪಾಠವಿರುತ್ತದೆ. ಸೋಲನ್ನು ಸ್ವೀಕರಿಸಿ, ಅದರಿಂದ ಪಾಠ ಕಲಿತು ಮುಂದುವರಿಯುವುದನ್ನು ಕ್ರೀಡೆ ಕಲಿಸುತ್ತದೆ. ಆದ್ದರಿಂದ ಕ್ರೀಡಾಪಟುಗಳಾಗಿ ನಾವು ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಅಭಿನಂದಿಸಿದ ಡಾ. ಜಿ. ಪರಮೇಶ್ವರ ಅವರು, ಅವರ ಸಾಧನೆಯಲ್ಲಿ ತರಬೇತುದಾರರು, ಕೋಚ್‌ಗಳು ಮತ್ತು ವ್ಯವಸ್ಥಾಪಕರ ಪರಿಶ್ರಮವನ್ನೂ ಸ್ಮರಿಸಿದರು. ಭಾರತೀಯ ಕ್ರೀಡಾಪಟುಗಳು ಸುಮಾರು 85 ಪದಕಗಳನ್ನು ಗೆದ್ದಿದ್ದು, ಅದರಲ್ಲಿ 21 ಚಿನ್ನದ ಪದಕಗಳಿವೆ. ದೇಶದ ಒಟ್ಟು ಪದಕ ಗಳಿಕೆಗೆ ಕರ್ನಾಟಕದ ಕ್ರೀಡಾಪಟುಗಳೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕ್ರೀಡಾ ಸಾಧನೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಹಿಂದಿನ ಸಂದರ್ಭಗಳಿಗೆ ಹೋಲಿಸಿದರೆ ಪದಕ ವಿಜೇತ ಕ್ರೀಡಾಪಟುಗಳಿಗೆ ನೀಡಲಾಗುವ ಬಹುಮಾನ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ ಎಂದು ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದ ಈ ಚಾಂಪಿಯನ್‌ಶಿಪ್ ಆಯೋಜಿಸುವ ಜವಾಬ್ದಾರಿಯನ್ನು ಹೊತ್ತ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಕಾರ್ಯವನ್ನು ಶ್ಲಾಘಿಸಿದ ಡಾ. ಪರಮೇಶ್ವರ ಅವರು, ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್ ಅನ್ನು 33 ಬಾರಿ ಗೆದ್ದಿರುವುದು ಸಂಘದ ವಿಶಿಷ್ಟ ಸಾಧನೆಯಾಗಿದೆ ಎಂದು ಹೇಳಿದರು.

ಸಂಘದ ಸಾಧನೆಗೆ ಅಭಿನಂದನೆ ಸಲ್ಲಿಸಿದ ಅವರು, ಪ್ರತಿಷ್ಠಿತ ಈ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ಕರ್ನಾಟಕಕ್ಕೆ ನೀಡಿದ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾಗೆ ಕೃತಜ್ಞತೆ ಸಲ್ಲಿಸಿದರು.

ಭಾರತದ ವಿವಿಧ ಭಾಗಗಳ ಜೊತೆಗೆ ಏಷ್ಯಾದ ಹಲವು ದೇಶಗಳಿಂದ ಆಗಮಿಸಿರುವ ಸುಮಾರು 1,800 ಕ್ರೀಡಾಪಟುಗಳನ್ನು ಸ್ವಾಗತಿಸಿದ ಉಪ ಮುಖ್ಯಮಂತ್ರಿಗಳು, ಎಲ್ಲ ಸ್ಪರ್ಧಾಳುಗಳಿಗೂ ಶುಭ ಹಾರೈಸಿದರು. ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಇದು ಅಮೂಲ್ಯವಾದ ಕ್ರೀಡಾ ಅನುಭವವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಡಾ. ಜಿ. ಪರಮೇಶ್ವರ ಅವರು 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ 2026 ಅನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್, ಕ್ರೀಡಾ‌ ಮತ್ತು ಯುವ ಸಬಲೀಕರಣ‌ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್, ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲ್ ಹೊಸೂರ್, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಸಿ, ಹಿರಿಯ ಕ್ರೀಡಾ ಅಧಿಕಾರಿಗಳು, ಅಂತರರಾಷ್ಟ್ರೀಯ ಸ್ಪರ್ಧಾಳುಗಳು, ಕ್ರೀಡಾಪಟುಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande