
ಹಾಸನ, 04 ಅಕ್ಟೋಬರ್ (ಹಿ.ಸ.):
ಹಾಸನ ಸೇರಿದಂತೆ ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಪರಿಗಣಿಸಿ, ಕೇಂದ್ರ ಸರ್ಕಾರ ಯಾವುದೇ ವಿಳಂಬ ಮಾಡದೆ ರಾಜ್ಯಕ್ಕೆ ಬರ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಒತ್ತಾಯಿಸಿದರು.
ಹಾಸನ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಲು ಆಗಮಿಸಿರುವ ಕೇಂದ್ರದ ಅಂತರ್-ಸಚಿವಾಲಯ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ವಾಸ್ತವ ಪರಿಸ್ಥಿತಿಯನ್ನು ಸಚಿವರು ವಿವರಿಸಿದರು. ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಉಪ ಆಯುಕ್ತರಾದ ಡಾ. ಸುದಾಮ್ ಬಾಗ್ ಅವರ ನೇತೃತ್ವದ ತಂಡವು ರಾಜ್ಯದ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ, ನೀರಿನ ಲಭ್ಯತೆ ಹಾಗೂ ರೈತರ ಸಂಕಷ್ಟವನ್ನು ಪರಿಶೀಲಿಸುತ್ತಿದೆ. ಹಾಸನ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳು ತಂಡದ ಪರಿಶೀಲನಾ ವ್ಯಾಪ್ತಿಯಲ್ಲಿವೆ.
ಕೇಂದ್ರ ತಂಡಕ್ಕೆ ಮಾಹಿತಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವಲಿಂಗೇಗೌಡ ಅವರು, “ನಮ್ಮ ಕಾಲದಲ್ಲಿ ನಾವು ಕಂಡ ಅತ್ಯಂತ ತೀವ್ರವಾದ ಬರಗಾಲಗಳಲ್ಲಿ ಇದೂ ಒಂದಾಗಿದೆ. ಅನೇಕ ಕಡೆಗಳಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆದು ಎರಡು ಎಲೆಗಳು ಬರುವಷ್ಟರಲ್ಲೇ ಒಣಗಿ ಹೋಗಿವೆ. ಮಳೆ ಬಂದಾಗ ರೈತರು ಮತ್ತೆ ಬಿತ್ತನೆ ಮಾಡಿದರು. ಆದರೆ ಎರಡನೇ ಬಾರಿಯೂ ಬೆಳೆ ಕೈಕೊಟ್ಟಿದೆ. ಇಂದು ಹೊಲಗಳಿಗೆ ಭೇಟಿ ನೀಡಿದರೆ ಅನೇಕ ಕಡೆಗಳಲ್ಲಿ ಬೆಳೆ ಉಳಿದಿಲ್ಲ ಎಂಬ ವಾಸ್ತವ ಪರಿಸ್ಥಿತಿ ಕಾಣುತ್ತದೆ” ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸಕ್ತ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಮಳೆ ಕೊರತೆಯ ಪರಿಣಾಮ ಕೃಷಿ ಮಾತ್ರವಲ್ಲದೆ ಕುಡಿಯುವ ನೀರು, ಜಲಾಶಯಗಳ ನೀರಿನ ಒಳಹರಿವು, ಮೇವು ಲಭ್ಯತೆ ಹಾಗೂ ಗ್ರಾಮೀಣ ಜನರ ಜೀವನೋಪಾಯದ ಮೇಲೂ ಪರಿಣಾಮ ಬೀರಿದೆ. ರಾಜ್ಯ ಸರ್ಕಾರದ ಇತ್ತೀಚಿನ ಅಂದಾಜಿನ ಪ್ರಕಾರ, 177 ಬರಪೀಡಿತ ತಾಲೂಕುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅಂದಾಜು ಆರ್ಥಿಕ ನಷ್ಟ ₹46,324.50 ಕೋಟಿಯಷ್ಟಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಮಾನದಂಡಗಳಡಿ ಕೇಂದ್ರದಿಂದ ₹7,142.64 ಕೋಟಿ ನೆರವನ್ನು ರಾಜ್ಯ ಸರ್ಕಾರ ಕೋರಿದೆ.
“ನಾವು ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅಥವಾ ವಿಶೇಷವಾದ ಯಾವುದೇ ನೆರವನ್ನು ಕೇಳುತ್ತಿಲ್ಲ. ರಾಜ್ಯದಲ್ಲಿ ಉಂಟಾಗಿರುವ ನೈಜ ನಷ್ಟವನ್ನು ನ್ಯಾಯಯುತವಾಗಿ ಮೌಲ್ಯಮಾಪನ ಮಾಡಿ, ನಿಯಮಾನುಸಾರ ಕರ್ನಾಟಕಕ್ಕೆ ಸಲ್ಲಬೇಕಾದ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಮನವಿ. ಕೇಂದ್ರದ ಅಧ್ಯಯನ ತಂಡವು ರೈತರ ಹೊಲಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದು ಸ್ವಾಗತಾರ್ಹ. ತಂಡ ನೀಡುವ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಸಚಿವರು ಹೇಳಿದರು.
ಇತ್ತೀಚಿನ ಕೆಲವು ದಿನಗಳ ಮಳೆಯಿಂದ ಈಗಾಗಲೇ ಹಾನಿಗೊಳಗಾಗಿರುವ ಬೆಳೆಗಳನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉಂಟಾದ ಮಳೆ ಕೊರತೆ ಹಾಗೂ ಅದರಿಂದ ಸಂಭವಿಸಿರುವ ಬೆಳೆ ನಷ್ಟವನ್ನೇ ಬರ ಪರಿಸ್ಥಿತಿಯ ಮೌಲ್ಯಮಾಪನದ ಪ್ರಮುಖ ಆಧಾರವಾಗಿಸಬೇಕು ಎಂಬುದು ರಾಜ್ಯ ಸರ್ಕಾರದ ನಿಲುವಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆ ಮುಂದುವರಿದಿದ್ದು, ಇತ್ತೀಚಿನ ಮಳೆಯು ಕುಡಿಯುವ ನೀರಿನ ಸಮಸ್ಯೆಯನ್ನೂ ಸಂಪೂರ್ಣವಾಗಿ ಪರಿಹರಿಸಿಲ್ಲ.
“ಬರ, ಪ್ರವಾಹ ಸೇರಿದಂತೆ ಯಾವುದೇ ನೈಸರ್ಗಿಕ ವಿಕೋಪ ಸಂಭವಿಸಿದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಭೇದಭಾವ ಮರೆತು ಜನರ ನೆರವಿಗೆ ನಿಲ್ಲಬೇಕು. ಒಂದು ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗ ಆ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರವಿದೆ ಎಂಬುದನ್ನು ನೋಡದೆ, ಅಲ್ಲಿನ ರೈತರು ಮತ್ತು ಜನರ ಸಂಕಷ್ಟವನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸುವುದು ಮುಖ್ಯ. ಕುಡಿಯುವ ನೀರು, ಮೇವು, ಬೆಳೆ ನಷ್ಟ ಹಾಗೂ ಜೀವನೋಪಾಯದ ಸಮಸ್ಯೆಗಳನ್ನು ರಾಜ್ಯ ಸರ್ಕಾರವೊಂದೇ ನಿಭಾಯಿಸುವುದು ಕಷ್ಟ. ಆದ್ದರಿಂದ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕಕ್ಕೆ ನ್ಯಾಯಯುತವಾದ ಬರ ಪರಿಹಾರವನ್ನು ಬಿಡುಗಡೆ ಮಾಡಬೇಕು” ಎಂದು ಕೆ. ಎಂ. ಶಿವಲಿಂಗೇಗೌಡ ಅವರು ಆಗ್ರಹಿಸಿದರು.
ಕೇಂದ್ರದ ಅಧ್ಯಯನ ತಂಡವು ತನ್ನ ಪರಿಶೀಲನೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಲಭ್ಯವಿರುವ ಅಂಕಿಅಂಶಗಳು, ಬೆಳೆ ಹಾನಿ, ನೀರಿನ ಲಭ್ಯತೆ, ಮೇವು ಹಾಗೂ ರೈತರ ಪರಿಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲಿದೆ. ಕೇಂದ್ರ ತಂಡದ ವರದಿ ಆಧರಿಸಿ ರಾಜ್ಯಕ್ಕೆ ಶೀಘ್ರವಾಗಿ ನೆರವು ದೊರೆಯುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.