ಉದ್ಯೋಗಿಗಳಾಗದೇ ಉದ್ಯಮಿಗಳಾಗಿ: ಸಿಎಂ ಡಿ ಕೆ ಶಿವಕುಮಾರ್ ಕರೆ
ಬೆಂಗಳೂರು, 04 ಅಕ್ಟೋಬರ್ (ಹಿ.ಸ.): “ಕರಾವಳಿ ಹಾಗೂ ಮಲೆನಾಡಿನ ಜನರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗುವುದಕ್ಕಿಂತ, ನಿಮ್ಮಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ನಿಮ್ಮ ಊರುಗಳಲ್ಲೇ ಉದ್ಯಮಗಳನ್ನು ಆರಂಭಿಸಿ. ನಿಮಗೆ ಶಕ್ತಿ ತುಂಬುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕರಾವಳಿ ಹಾಗೂ ಮಲೆನಾಡು ಪ್ರವ
ಕೈಲ್ ಮುಹೂರ್ತ ಜಂಬರ 2026 ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ


ಬೆಂಗಳೂರು, 04 ಅಕ್ಟೋಬರ್ (ಹಿ.ಸ.):

“ಕರಾವಳಿ ಹಾಗೂ ಮಲೆನಾಡಿನ ಜನರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗುವುದಕ್ಕಿಂತ, ನಿಮ್ಮಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ನಿಮ್ಮ ಊರುಗಳಲ್ಲೇ ಉದ್ಯಮಗಳನ್ನು ಆರಂಭಿಸಿ. ನಿಮಗೆ ಶಕ್ತಿ ತುಂಬುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ನೀತಿ ರೂಪಿಸಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು.

ಬೆಂಗಳೂರಿನ ಉಳ್ಳಾಲದಲ್ಲಿರುವ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ ಕೈಲ್ ಮುಹೂರ್ತ ಜಂಬರ 2026 ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ನೀವೆಲ್ಲರೂ ಕೊಡಗಿನಿಂದ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಿ. ನೀವು ನಿಮ್ಮ ಮೂಲ ಮರೆತರೆ ಯಶಸ್ಸು ಸಿಗುವುದಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಮುಖ್ಯ. ನಿಮ್ಮ ಸಂಸ್ಕೃತಿ, ಊರು, ಪರಂಪರೆ, ಸಮಾಜ ಎಲ್ಲವನ್ನು ಒಗ್ಗೂಡಿಸಿ ಇಲ್ಲಿ ಇಂತಹ ಭವ್ಯ ಕಟ್ಟ ನಿರ್ಮಿಸಿ, ನೀವೆಲ್ಲರೂ ಸೇರುತ್ತಿರುವುದು ಬಹಳ ಸಂತೋಷ ತಂದಿದೆ. ಇದಕ್ಕೆ ಶ್ರಮಿಸಿ, ಪ್ರೋತ್ಸಾಹ ನೀಡುತ್ತಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

*ಕೊಡಗು ಶೌರ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ಇತಿಹಾಸ ಹೊಂದಿದೆ*

“ಕೊಡಗು ಶೌರ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ಇತಿಹಾಸ ಹೊಂದಿದೆ. ಪ್ರತಿ ಮನೆಯಲ್ಲಿ ವೀರರನ್ನು ತಯಾರು ಮಾಡಿರುವ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ. ನಮ್ಮೆಲ್ಲರ ತಾಯಿ ಕಾವೇರಿ ಇಲ್ಲೇ ಹುಟ್ಟಿ, ಪಾಂಡಿಚೆರಿವರೆಗೂ ಈ ತಾಯಿ ಮೇಲೆ ಅವಲಂಬಿತವಾಗಿದ್ದೇವೆ. ಈ ಬಾರಿ ಭೀಕರ ಬರಗಾಲವಾಗಿದೆ. ಮಲೆನಾಡಿನಲ್ಲೇ ಈ ವರ್ಷ ಮಳೆ ಇಲ್ಲವಾಗಿದೆ. ಕೆರೆ, ಕೆಆರ್ ಎಸ್ ಅಣೆಕಟ್ಟು ತುಂಬುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದೇನೆ” ಎಂದು ತಿಳಿಸಿದರು.

“ನಾನು ಪ್ರತಿ ವರ್ಷ ಕಾವೇರಿ ಆರತಿ ನಡೆಸಲು ತೀರ್ಮಾನಿಸಿದ್ದು, ದಸರಾ ಸಂದರ್ಭದಲ್ಲಿ ಈ ಬಾರಿಯೂ ಆಚರಿಸಲು ನಿರ್ದೇಶನ ನೀಡಲಾಗಿದೆ. ಕೊಡಗು ಜಿಲ್ಲೆ ಕರ್ನಾಟಕದ ಕಾಶ್ಮೀರ. ಇಡೀ ವಿಶ್ವ ಈ ಭಾಗಕ್ಕೆ ಆಕರ್ಷಿತವಾಗಿದೆ. ನಿಮ್ಮ ಪರಂಪರೆ ಉಳಿಸಿಕೊಳ್ಳಿ. ಇದು ಮನುಷ್ಯತ್ವದ ದೊಡ್ಡ ಗುಣ. ನನ್ನದೇ ಆದ ಅನುಭವದಲ್ಲಿ ಹಳ್ಳಿಯಿಂದ ನಗರಕ್ಕೆ ವಲಸೆ ಬರುವವರು ಶಿಕ್ಷಣ, ವಿದ್ಯಾಭ್ಯಾಸ ಹಾಗೂ ಬದುಕಿಗೆ. ಹಳ್ಳಿಗಳಲ್ಲೇ ಶಿಕ್ಷಣ ಹಾಗೂ ಉದ್ಯೋಗ ಸಿಕ್ಕಿದ್ದರೆ ನೀವು ಇಲ್ಲಿಗೆ ಬರುತ್ತಿರಲಿಲ್ಲ. ನೀವು ಸಂಘಟಿತರಾಗಿ ಹಳ್ಳಿ ಜನರಿಗೆ ಒಳ್ಳೆಯದಾಗಬೇಕು ಎಂದು ಪ್ರಯತ್ನಿಸುತ್ತಿದ್ದು, ನನಗೆ ಅನೇಕ ಬೇಡಿಕೆ ಇಟ್ಟಿದ್ದೀರಿ” ಎಂದರು.

*ನಿಮ್ಮ ಊರುಗಳಲ್ಲೇ ಉದ್ಯಮ ಕಟ್ಟಿಕೊಳ್ಳಿ*

“ನಾವು ಇತ್ತೀಚೆಗೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿದೆ. ಅಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ಪ್ರತೇಕ ನೀತಿ ರೂಪಿಸಲಾಗಿದೆ. ಈ ಭಾಗದ ಜನರ ಪ್ರತಿಭೆ ಗುರುತಿಸುವಂತಾಗಬೇಕು. ಈ ಜಿಲ್ಲೆಯ ಜನ ಕ್ರೀಡೆ, ರಕ್ಷಣಾ ಕ್ಷೇತ್ರದಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ಕರಾವಳಿ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು,. ಬ್ಯಾಂಕುಗಳು ನಿರ್ಮಾಣವಾಗಿದೆ. ಈಗ ಅವುಗಳು ನಶಿಸಿವೆ. ಇವುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ. 327 ಕಿ.ಮೀ ಉದ್ದದ ಕರಾವಳಿ ಭಾಗವನ್ನು ಗೋವಾ ಹಾಗೂ ಕೇರಳದಂತೆ ಪ್ರವಾಸೋದ್ಯಮಕ್ಕೆ ಬಳಸಿದಂತೆ ಬಳಸಲು ತೀರ್ಮಾನಿಸಲಾಗಿದೆ” ಎಂದರು.

“ಮಂಗಳೂರು, ಉಡುಪಿ, ಕಾರವಾರ ನೋಡಿದರೆ ಒಂದು ಪಂಚತಾರಾ ಹೊಟೇಲ್ ಇಲ್ಲಿ. ಇದು ಯಾಕೆ ಎಂದು ರಾಜಕಾರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನಮ್ಮ ಅವಧಿಯಲ್ಲಿ ಏನಾದರೂ ಕೊಡುಗೆ ಬಿಟ್ಟುಹೋಗಬೇಕು ಎಂಬುದು ನಮ್ಮ ಬಯಕೆ. ನಾವು ರಾಜಕಾರಣದಲ್ಲಿ ಶಾಶ್ವತವಲ್ಲ. ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ” ಎಂದು ತಿಳಿಸಿದರು.

“ತಿರುಪತಿ ದೇವಾಲಯ ಟ್ರಸ್ಟ್ ನವರು ನಮಗೆ ಜಾಗ ಕೊಡಿ ಒಳ್ಳೆಯ ದೇವಾಲಯ ನಿರ್ಮಿಸುತ್ತೇವೆ ಎಂದರು. ಅದಕ್ಕಾಗಿ ಮಂಗಳೂರಿನಲ್ಲಿ 10 ಎಕರೆ ಜಾಗವನ್ನು ಟಿಟಿಡಿ ಮಂಡಳಿಯವರಿಗೆ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಆ ಭಾಗದಲ್ಲಿ ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮುಖಾಂಬಿಕೆ, ಕಟೀಲು, ಧರ್ಮಸ್ಥಳ ದೇವಾಲಯಗಳಿವೆ. ಅವುಗಳ ಜತೆಗೆ ತಿರುಪತಿಗೆ ತೆರಳಲು ಆಗದವರು ವೆಂಕಟರಮಣ ದೇವಾಲಯಕ್ಕೆ ಹೋಗಲು ಅನುಕೂಲವಾಗಲಿ ಎಂದು ಈ ತೀರ್ಮಾನ ಮಾಡಲಾಗಿದೆ” ಎಂದು ಹೇಳಿದರು.

“ತುಳು ಭಾಷೆ ಬಗ್ಗೆ ನಮ್ಮ ತೀರ್ಮಾನವನ್ನು ವಿಶ್ವದಲ್ಲೇ ಚರ್ಚೆಯಾಗಿದೆ. ಅದು ಸ್ವಾಭಿಮಾನದ ಸಂಕೇತ. ಕರಾವಳಿ ಹಾಗೂ ಮಲೆನಾಡು ಸೇರಿ ವಿಶೇಷ ಪ್ರವಾಸೋದ್ಯಮ ನೀತಿ ರೂಪಿಸಿದ್ದೇವೆ. ಈ ಭಾಗದ ಜನ ಉದ್ಯೋಗಕ್ಕೆ ಹೊರಗೆ ಹೋಗುವುದಕ್ಕಿಂತ ನಿಮ್ಮ ಊರಿನಲ್ಲೇ ಮನೆ ಬಾಗಿಲಲ್ಲಿ ಉದ್ಯಮ ಕಟ್ಟಿಕೊಳ್ಳಲು ಅನುಕೂಲವಾಗಬೇಕು. ನೀವು ಉದ್ಯೋಗಿಗಳಾಗುವುದಕ್ಕಿಂತ, ಉದ್ಯಮಿಗಳಾಗಬೇಕು ಎಂದು ಈ ತೀರ್ಮಾನಕ್ಕೆ ಬಂದಿದ್ದೇವೆ. ನಿಮ್ಮ ಕಾಫಿ, ಮಸಾಲೆ ಪ್ರದಾರ್ಥ, ಸಂಸ್ಕೃತಿ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ಉಳಿಸಲು ಈ ಪ್ರವಾಸೋದ್ಯಮ ನೀತಿಯಲ್ಲಿ ಈ ಭಾಗದಲ್ಲಿ ಮೂಲಸೌಕರ್ಯ ನೀತಿ ಮಾಡಿದ್ದು, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉದ್ಯಮ ಆರಂಭಿಸಿದರೆ, ಬ್ಯಾಂಕ್ ಗಳಲ್ಲಿ ನೀಡುವ 5-6 ವರ್ಷಗಳ ಸಾಲವನ್ನು, 20 ವರ್ಷಗಳ ವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಉದ್ಯಮ ಆರಂಭಿಸುವರಿಗೆ ಆರ್ಥಿಕ ಶಕ್ತಿ ನೀಡಬೇಕು” ಎಂದು ವಿವರಿಸಿದರು.

*ಉದ್ಯಮಿಗಳೊಂದಿಗೆ ಸಧ್ಯದಲ್ಲೇ ಮಂಗಳೂರಿನಲ್ಲಿ ಸಭೆ*

“ನಾನು ಮತ್ತೆ ಮಂಗಳೂರಿಗೆ ಹೋಗಿ, ಎಲ್ಲ ಉದ್ಯಮಿಗಳ ಜತೆ ಕೂತು ಚರ್ಚೆ ಮಾಡುತ್ತೇವೆ. ನಿಮಗೂ ಆಹ್ವಾನ ನೀಡುತ್ತೇನೆ. ನೀವು ಭಾಗವಹಿಸಿ. ಹೊರಗಿನವರು ಇಲ್ಲಿ ಬಂದು ಉದ್ಯಮ ಆರಂಭಿಸುವುದಕ್ಕಿಂತ, ನೀವೇ ಉದ್ಯಮ ಆರಂಭಿಸಿ, ಆಸ್ತಿಯನ್ನಾಗಿ ಮಾಡಿ. ಇದಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ” ಎಂದು ಮಾಹಿತಿ ನೀಡಿದರು.

*ಪೊನ್ನಣ್ಣ ಹಾಗೂ ಮಂಥರ್ ಕೊಡಗಿನ ಎರಡು ಕಣ್ಣುಗಳಿದ್ದಂತೆ, ಕಾಪಾಡಿಕೊಳ್ಳಿ*

“ನನ್ನ ಬಗ್ಗೆ ವಿಶೇಷ ಅಭಿಮಾನ ಇಟ್ಟುಕೊಂಡಿದ್ದು, ನಾನು ಜಾತಿಗಿಂತ ನೀತಿ ಮೇಲೆ ವಿಶ್ವಾಸವಿಟ್ಟು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾವು ಮಾನವೀಯತೆಯಿಂದ ಯಾರ ಮನಸ್ಸಿಗೂ ನೋವಾಗದಂತೆ ನಮ್ಮ ರಾಷ್ಟ್ರಕವಿ ಕುವೆಂಪು ಅವರು ನಾಡ ಗೀತೆಯಲ್ಲಿ ನೀಡಿರುವ ಸಂದೇಶವನ್ನು ನಾವು ಪಾಲಿಸಬೇಕು. ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಇದಕ್ಕೆ ನಾವು ನೀವು ಒಟ್ಟಾಗಿ ಕೆಲಸ ಮಾಡೋಣ. ಮೈಸೂರಿನವರು ಜಾಗದ ಬಗ್ಗೆ ಮನವಿ ನೀಡಿದ್ದು, ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಮಂಡಿಸುವಂತೆ ಪೊನ್ನಣ್ಣ ಹಾಗೂ ಮಂಥರ್ ಗೌಡ ಅವರಿಗೆ ತಿಳಿಸಿರುವೆ. ನನ್ನ ಕೈಯಲ್ಲಿ ಸಾಧ್ಯವಾದ ನೆರವು ನೀಡುತ್ತೇನೆ. ಉಳಿದ ಬೇಡಿಕೆಗಳನ್ನು ಪರಿಶೀಲಿಸಿ ಸಹಾಯ ಮಾಡಲಾಗುವುದು” ಎಂದು ಭರವಸೆ ನೀಡಿದರು.

“ನಾನು ಕಷ್ಟಕಾಲದಲ್ಲಿದ್ದಾಗ ನೀವೆಲ್ಲರೂ ನನ್ನ ಬೆಂಬಲವಾಗಿ ನಿಂತು ಪ್ರಾರ್ಥನೆ, ಹೋರಾಟ ಮಾಡಿದ್ದೀರಿ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಹೇಳಿದ್ದೆ. ನೀವೆಲ್ಲರೂ ಈ ಡಿ ಕೆ ಶಿವಕುಮಾರ್ ಇನ್ನಷ್ಟು ಸುದೀರ್ಖ ಕಾಲ ಇದ್ದು ರಾಜ್ಯಕ್ಕೆ ಸೇವೆ ಮಾಡಬೇಕು ಎಂದು ನೀವು ಆಶಯ ವ್ಯಕ್ತಪಡಿಸಿದ್ದೀರಿ. ನಿಮ್ಮ ಭಾವನೆ, ಚಿಂತನೆ, ಗೌರವಕ್ಕೆ ಧಕ್ಕೆ ಬಾರದಂತೆ ನಾನು ಆಡಳಿತ ನಡೆಸುವೆ. ಈ ಡಿ ಕೆ ಶಿವಕುಮಾರ್ ನಿಮ್ಮ ಮನೆ ಮಗ. ನಿಮ್ಮ ಮಕ್ಕಳನ್ನು ಕಾಪಾಡುವಂತೆ ನನ್ನನ್ನು ಕಾಪಾಡಿ. ಇಬ್ಬರು ಶಾಸಕರು ಇದ್ದಾರೆ. ಮಂಥರ್ ಹಾಗೂ ಪೊನ್ನಣ್ಣ ಅವರು ಕೊಡಗು ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ. ಅವರಿಗೂ ಶಕ್ತಿ ನೀಡಿ. ಇವರು ಕ್ರಿಯಾಶೀಲ ಶಾಸಕರು. ಯುವಕರು, ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಇವರು ಬೆಳವಣಿಗೆ ಕಾಣುತ್ತಿದ್ದಾರೆ ಎಂದು ಕೆಲವರು ಅಸೂಯೆ ಪಡುತ್ತಾರೆ. ಅಸೂಯೆಗೆ ಮದ್ದಿಲ್ಲ. ಶಕ್ತಿಶಾಲಿಯಾಗಿರುವವರು ಚೆನ್ನಾಗಿ ಕೆಲಸ ಮಾಡುವವರಿಗೆ ಟೀಕೆಗಳು, ಶತ್ರುಗಳು ಇರುತ್ತಾರೆ” ಎಂದು ತಿಳಿಸಿದರು.

*ನಿಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಿ*

“ನಾವು ಹೆಚ್ಚು ಬಲಿಷ್ಠವಾಗಿದ್ದರೆ, ಹೆಚ್ಚು ಶತ್ರುಗಳು, ಕಡಿಮೆ ಬಲಿಷ್ಠರಾಗಿದ್ದರೆ, ಕಡಿಮೆ ಶತ್ರುಗಳು, ಬಲಿಷ್ಟರಲ್ಲದೇ ಇದ್ದರೆ ಶತ್ರುಗಳೇ ಇರುವುದಿಲ್ಲ. ಯಾರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ ಅವರ ಬಗ್ಗೆ ಅಸೂಯೆ ಇರುತ್ತದೆ. ಹೀಗಾಗಿ ನೀವು ಈ ಇಬ್ಬರು ಶಾಸಕರನ್ನು ಉಳಿಸಿಕೊಳ್ಳಬೇಕು. ಅವರನ್ನು ಉಳಿಸಿಕೊಂಡರೆ ನನ್ನನ್ನು ಉಳಿಸಿಕೊಂಡಂತೆ. ನನಗೆ ಶಕ್ತಿ ನೀಡಿದಂತೆ. ನೀವು ನಿಮ್ಮ ಮತಗಳನ್ನು ಕಾಪಾಡಿಕೊಳ್ಳಿ. ನೀವೇ ನೋಡುತ್ತಿದ್ದೀರಿ. ನಿಮ್ಮ ಮತದಾನದ ಹಕ್ಕು ರಕ್ಷಿಸಲು ನಾವು ಹಗಲು ರಾತ್ರಿ ಹೋರಾಟ ಮಾಡುತ್ತಿದ್ದೇವೆ. ಈಗ ಚುನಾವಣಾ ಆಯೋಗದವರು ಅನಾವಶ್ಯಕವಾಗಿ ಯಾರ ಹೆಸರನ್ನು ಮತಪಟ್ಟಿಯಿಂದ ತೆಗೆಯಬಾರದು ಎಂದು ನಿರ್ದೇಶನ ನೀಡಿದೆ.

“ಒಂದಕ್ಕಿಂತ ಹೆಚ್ಚು ಮತ ಹೊಂದಿರುವವರು, ಮೃತಪಟ್ಟಿರುವವರ ಹೆಸರನ್ನು ಪರಿಷ್ಕರಣೆ ಮಾಡಲಿ. ನ್ಯಾಯಬದ್ಧವಾದ ಅರ್ಹ ಮತದಾರರ ಹಕ್ಕನ್ನು ಉಳಿಸಬೇಕು. ಮತದಾನದ ಹಕ್ಕು ಎಂದರೆ ಬದುಕಿನ ಹಕ್ಕು. ಸಂವಿಧಾನ ನೀಡಿರುವ ಶಕ್ತಿ” ಎಂದರು

*ಈ ಬಾರಿ ವಿಭಿನ್ನವಾಗಿ ದಸರಾ ಆಚರಣೆ*

“ನೀವು ಬಹಳ ಸಂತೋಷದಿಂದ ಆಯುಧ ಪೂಜೆ ನಡೆಸಿದ್ದು, ಕೊಡಗಿನ ಇತಿಹಾಸ, ಗೌಡರ ಪರಂಪರೆಗೆ ನೀಡಬೇಕಾದ ಗೌರವ ನೀಡುತ್ತೇವೆ. ಕೃಷಿ ಹಾಗೂ ಸಾಂಸ್ಕೃತಿಕ ಆಚರಣೆಯನ್ನು ಉಳಿಸಿಕೊಂಡು ಹೋಗುತ್ತಿದ್ದೀರಿ. ನಮ್ಮ ಸಂಸ್ಕೃತಿ ದೇಶದ ಆಸ್ತಿ. ಈ ಬಾರಿ ದಸರಾವನ್ನು ವಿಭಿನ್ನವಾಗಿ ಆಚರಿಸಲು ಪ್ರಯತ್ನಿಸುತ್ತಿದ್ದು, ದೇಶಕ್ಕೆ ಕೊಡುಗೆ ನೀಡಿರುವ ಯೋಧರಿಗೆ ದಸರಾ ಮೆರವಣಿಗೆಯ್ಲಿ ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಯ ಪಡೆಗಳು ಭಾಗವಹಿಸಬೇಕು. ನಮ್ಮ ವಿವಿಧ ಭಾಗಗಳ ಕಲಾವಿದರು, ಸಿನಿಮಾ ರಂಗದವರು, ಎಲ್ಲಾ ಸಮುದಾಯದವರು ಇರಬೇಕು ಎಂದು ಬದಲಾವಣೆ ತಂದು ಶಿಸ್ತಿನಿಂದ ಕಾರ್ಯಕ್ರಮ ಆಚರಣೆಗೆ ಮುಂದಾಗಿದ್ದೇವೆ” ಎಂದು ತಿಳಿಸಿದರು.

*ನಾನು ನಿಮ್ಮ ಜತೆ ಇದ್ದೇನೆ, ನೀವು ನಮ್ಮ ಜತೆ ಇರಿ*

“ಮಹಾರಾಜರ ಕಾಲದಲ್ಲಿ ಆರಂಭವಾಗಿ ನಡೆದುಕೊಂಡು ಬಂದ ಈ ಪರಂಪರೆಗೆ ಅನೇಕ ರಾಷ್ಟ್ರಗಳ ರಾಯಭಾರಿಗಳು, ಬೇರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ. ಮೆರವಣಿಗೆಯಲ್ಲಿ ನಿಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಗೂ ಅವಕಾಶ ಕಲ್ಪಿಸಲಾಗಿದೆ. ಈ ಡಿ ಕೆ ಶಿವಕುಮಾರ್ ಎಲ್ಲಾ ಸಂದರ್ಭದಲ್ಲಿ ನಿಮ್ಮ ಜತೆ ಇರುತ್ತಾನೆ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನನ್ನನ್ನು ಉಪಯೋಗಿಸಿಕೊಳ್ಳಿ. ನಿಮಗೆ ಒಳ್ಳೆಯದಾಗಲಿ. ನಾನು ನಿಮ್ಮ ಜತೆ ಇದ್ದೇನೆ, ನೀವು ನಮ್ಮ ಜತೆ ಇರಿ” ಎಂದು ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande