
ನವದೆಹಲಿ, 31 ಅಕ್ಟೋಬರ್ (ಹಿ.ಸ.):
ಕನ್ನಡ ರಾಜ್ಯೋತ್ಸವದ ಸ್ಮರಣಾರ್ಥವಾಗಿ ಎಚ್ಎಂಟಿ ಸಂಸ್ಥೆಯು ನಾಲ್ಕು ಹೊಸ ಮಾದರಿಯ 'ಕನ್ನಡಿಗ' ವಾಚ್ಗಳನ್ನು ಬಿಡುಗಡೆ ಮಾಡಲಿದೆ.
ನವೆಂಬರ್ 1ರಂದು ಬೆಂಗಳೂರಿನಲ್ಲಿ ವಾಚ್ಗಳನ್ನು ಅನಾವರಣಗೊಳಿಸಲಾಗುವುದು ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಎಚ್ಎಂಟಿ ವಾಚ್ಗಳಿಗೂ ಕನ್ನಡಿಗರಿಗೂ ಹಿಂದಿನಿಂದಲೂ ಭಾವನಾತ್ಮಕ ಸಂಬಂಧವಿದೆ. ಹಿಂದೆ ಎಚ್ಎಂಟಿ ವಾಚ್ಗಳನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದರು. ಅದೇ ರೀತಿಯ ಜನಪ್ರಿಯತೆ ಮತ್ತು ಭಾವನಾತ್ಮಕ ಸಂಬಂಧವನ್ನು ಮತ್ತೆ ಬೆಳೆಸುವ ಉದ್ದೇಶದಿಂದ ಹೊಸ ಮಾದರಿಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹೊಸ ವಿನ್ಯಾಸ ಹಾಗೂ ಆವಿಷ್ಕಾರಗಳೊಂದಿಗೆ ವಾಚ್ಗಳನ್ನು ಮಾರುಕಟ್ಟೆಗೆ ತರಲಾಗುತ್ತಿದೆ. ಸಾಮಾನ್ಯ ಜನರೂ ಖರೀದಿಸಬಹುದಾದ ದರದಲ್ಲಿ ಬ್ರಾಂಡೆಡ್ ವಾಚ್ಗಳನ್ನು ತಯಾರಿಸಿ ಬಿಡುಗಡೆ ಮಾಡಲಾಗುತ್ತಿದೆ. ₹1,800ರಿಂದ ₹3,500ರವರೆಗಿನ ದರದಲ್ಲಿ ವಾಚ್ಗಳು ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಚ್ಎಂಟಿ ವಾಚ್ಗಳನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಾಚ್ಗಳನ್ನು ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೊಸ ಮಾದರಿಗಳನ್ನು ಪರಿಚಯಿಸಲಾಗುತ್ತಿದೆ.
ಇದರೊಂದಿಗೆ ದೇಶೀಯ ಕೈಗಾರಿಕೆಗಳ ಅಭಿವೃದ್ಧಿ, 'ಮೇಕ್ ಇನ್ ಇಂಡಿಯಾ' ಯೋಜನೆಗೆ ಉತ್ತೇಜನ ಹಾಗೂ ಕರ್ನಾಟಕದಲ್ಲಿ ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R