ಹಲಸೂರು ಹಬ್ಬ ಈ ಬಾರಿ ಅಭಿವೃದ್ಧಿ ಸಂಭ್ರಮಕ್ಕೆ ಸಾಕ್ಷಿ
ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ; ಕನ್ವೆನ್ಷನ್ ಸೆಂಟರ್, ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟನೆ
ಹಲಸೂರು ಹಬ್ಬ ಈ ಬಾರಿ ಅಭಿವೃದ್ಧಿ ಸಂಭ್ರಮಕ್ಕೆ ಸಾಕ್ಷಿ


ಬೆಂಗಳೂರು, 31 ಅಕ್ಟೋಬರ್ (ಹಿ.ಸ.):

ನಗರದ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾದ ಹಲಸೂರಿನಲ್ಲಿ ಈ ಬಾರಿ ನಡೆಯಲಿರುವ ‘ಹಲಸೂರು ಹಬ್ಬ’ ಸಾಂಸ್ಕೃತಿಕ ಸಂಭ್ರಮದ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ವೇದಿಕೆಯಾಗಲಿದೆ.

ಎರಡು ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಜತೆಗೆ ಸಮಾವೇಶ ಕೇಂದ್ರ (ಕನ್ವೆನ್ಷನ್ ಸೆಂಟರ್) ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಾಗುವುದು.

ಈ ಹಿಂದಿನ ವರ್ಷಗಳಲ್ಲಿ ಫುಟ್ಬಾಲ್ ಪಂದ್ಯಾವಳಿ, ಚಿತ್ರಕಲೆ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಸಾಮುದಾಯಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿತ್ತು.

ಆದರೆ, ಈ ಬಾರಿ ಹಲಸೂರು ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಹಬ್ಬವನ್ನು ‘ಅಭಿವೃದ್ಧಿ ಹಬ್ಬ’ವಾಗಿ ರೂಪಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್, ಹಲಸೂರು ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದ್ದು, ಸಮಗ್ರ ಅಭಿವೃದ್ಧಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

“ನಮ್ಮ ವಿಧಾನಸಭಾ ಕ್ಷೇತ್ರದಾದ್ಯಂತ ಕುಡಿಯುವ ನೀರು ಮತ್ತು ಒಳಚರಂಡಿ ಕೊಳವೆಗಳ ಬದಲಾವಣೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದೇವೆ.

ಈ ಬಾರಿಯ ಹಲಸೂರು ಹಬ್ಬವು ಅಭಿವೃದ್ಧಿ ಹಬ್ಬವಾಗಿದೆ. ಸಂಸ್ಕೃತಿಯ ಮೂಲಕ ಅಭಿವೃದ್ಧಿಯನ್ನು ಸಂಭ್ರಮಿಸಲು ಜನರು ಒಂದೆಡೆ ಸೇರುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಹಬ್ಬದ ಅಂಗವಾಗಿ ಆರು ಜನರ ತಂಡಗಳ ನಡುವೆ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.

ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ನೀಡಲಾಗುತ್ತಿದ್ದು, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.

ಸಾರ್ವಜನಿಕರಿಗಾಗಿ ವಿವಿಧ ಆಹಾರ ಮಳಿಗೆಗಳನ್ನು ತೆರೆಯಲಾಗಿದ್ದು, ಸುಮಾರು 5 ಸಾವಿರ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.

ಒಟ್ಟಾರೆ, ಹಲಸೂರು ಹಬ್ಬವು ಈ ಬಾರಿ ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಕ್ರೀಡೆಗಳ ಸಂಭ್ರಮದ ಜತೆಗೆ ಆರೋಗ್ಯ, ಕೌಶಲ್ಯಾಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಸಂದೇಶ ಸಾರುವ ವೇದಿಕೆಯಾಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande