ಮಧ್ಯಪ್ರದೇಶದಲ್ಲಿ ಆರ್ಎಸ್ಎಸ್ನ ಮಹಾಮಂಥನ: ಶತಮಾನೋತ್ಸವದ ಸಂಘಟನಾ ವಿಸ್ತರಣೆಯಿಂದ ಭವಿಷ್ಯದ ಕಾರ್ಯಯೋಜನೆ ರೂಪಿಸಲು ಸಿದ್ಧತೆ
ಇಂದೋರ್, 31 ಅಕ್ಟೋಬರ್ (ಹಿ.ಸ.): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಕೈಗೊಂಡ ಸಂಘಟನಾ ವಿಸ್ತರಣೆ, ಸಾಮಾಜಿಕ ಸಂಪರ್ಕ ಹಾಗೂ ಸೇವಾ ಚಟುವಟಿಕೆಗಳ ಅನುಭವಗಳನ್ನು ಆಧರಿಸಿ ಮುಂದಿನ ದಿನಗಳ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಂಘದ ಅಖಿಲ ಭಾರತ ಪ್ರಚಾರ
इंदौर में पत्रकारों को संबोधित करते हुए आरएसएस के अभा प्रचार प्रमुख सुनील आम्बेकर


ಇಂದೋರ್, 31 ಅಕ್ಟೋಬರ್ (ಹಿ.ಸ.):

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಕೈಗೊಂಡ ಸಂಘಟನಾ ವಿಸ್ತರಣೆ, ಸಾಮಾಜಿಕ ಸಂಪರ್ಕ ಹಾಗೂ ಸೇವಾ ಚಟುವಟಿಕೆಗಳ ಅನುಭವಗಳನ್ನು ಆಧರಿಸಿ ಮುಂದಿನ ದಿನಗಳ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್ ಆಂಬೇಕರ್ ತಿಳಿಸಿದ್ದಾರೆ.

ನವೆಂಬರ್ 2ರಿಂದ 4ರವರೆಗೆ ಮಧ್ಯಪ್ರದೇಶದ ಇಂದೋರ್‌ನ ಡೈಲಿ ಕಾಲೇಜು ಮೈದಾನದಲ್ಲಿ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ವಾರ್ಷಿಕ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಂಘದ ಹಿರಿಯ ನಾಯಕರು ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸುವ 408 ಪ್ರಮುಖ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಶತಮಾನೋತ್ಸವದ ಕಾರ್ಯಕ್ರಮಗಳ ಪರಿಶೀಲನೆ, ಸಂಘಟನೆಯ ವಿಸ್ತರಣೆ, ಹಿಂದೂ ಸಮ್ಮೇಳನಗಳು, ಮನೆಮನೆ ಸಂಪರ್ಕ ಅಭಿಯಾನ, ಸೇವಾ ಚಟುವಟಿಕೆಗಳಲ್ಲಿ ಸಮಾಜದ ಪಾಲ್ಗೊಳ್ಳುವಿಕೆ ಹಾಗೂ ಯುವಕರು ಮತ್ತು ಮಹಿಳೆಯರೊಂದಿಗೆ ಹೆಚ್ಚಿದ ಸಂಪರ್ಕದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಸಂಘಟನಾ ವ್ಯವಸ್ಥೆಯಲ್ಲಿ ಸಂಭವನೀಯ ಬದಲಾವಣೆಗಳು, ಜನಜಾಗೃತಿ, ಪಂಚಪರಿವರ್ತನೆ, ಮಾದಕ ವಸ್ತುಗಳ ಸವಾಲು, ಅಂತರ್ಜಾಲ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಷಯಗಳು, ಹೊರಗಿನ ಶಕ್ತಿಗಳ ಹಸ್ತಕ್ಷೇಪ ಹಾಗೂ ಜಾಗತಿಕ ವಿದ್ಯಮಾನಗಳ ಬಗ್ಗೆಯೂ ಚಿಂತನಮಂಥನ ನಡೆಯಲಿದೆ ಎಂದರು.

13 ಸಾವಿರ ಹೊಸ ಶಾಖೆಗಳ ಆರಂಭ

ಸಂಘಟನೆಯ ವಿಸ್ತರಣೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ವಿವರಿಸಿದ ಆಂಬೇಕರ್, ದೇಶಾದ್ಯಂತ ಸಂಘದ ದೈನಂದಿನ ಶಾಖೆಗಳ ಸಂಖ್ಯೆ 1,01,151ಕ್ಕೆ ತಲುಪಿದೆ. ವಾರದ, ಮಾಸಿಕ ಹಾಗೂ ಇತರ ಮಾದರಿಯ ಸಂಘಟನಾ ಸಭೆಗಳು 1,10,849 ಸ್ಥಳಗಳಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು.

2025ರ ಅಕ್ಟೋಬರ್‌ನಿಂದ ಈವರೆಗೆ ದೇಶಾದ್ಯಂತ 13 ಸಾವಿರ ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ಶತಮಾನೋತ್ಸವಕ್ಕೂ ಮುನ್ನ ಮೂರು ವರ್ಷಗಳ ಕಾಲ ಸಂಘಟನೆಯ ವಿಸ್ತರಣೆಗೆ ವಿಶೇಷ ಯೋಜನೆ ರೂಪಿಸಲಾಗಿತ್ತು. ಈ ಅವಧಿಯಲ್ಲಿ ವಿವಿಧ ಸಾಮಾಜಿಕ ವರ್ಗಗಳೊಂದಿಗೆ ಸಂಪರ್ಕ ಬೆಳೆಸುವುದು ಹಾಗೂ ಸ್ವಯಂಸೇವಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗಿತ್ತು. ಇದೀಗ ಈ ಕಾರ್ಯಗಳ ಅನುಭವಗಳನ್ನು ಪರಿಶೀಲಿಸಿ ಮುಂದಿನ ಆದ್ಯತೆಗಳನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.

65,660 ಹಿಂದೂ ಸಮ್ಮೇಳನಗಳ ಆಯೋಜನೆ

ಶತಮಾನೋತ್ಸವದ ಸಂದರ್ಭದಲ್ಲಿ ಸಾಮಾಜಿಕ ಸಂಪರ್ಕ ಚಟುವಟಿಕೆಗಳ ಭಾಗವಾಗಿ ದೇಶಾದ್ಯಂತ 65,660 ಹಿಂದೂ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ಗ್ರಾಮಗಳ ಸಮೂಹಗಳನ್ನು ಒಳಗೊಂಡ ಮಂಡಲಗಳು ಹಾಗೂ ನಗರ ಪ್ರದೇಶಗಳ ಬಡಾವಣೆಗಳ ಮಟ್ಟದಲ್ಲಿ ಈ ಸಮ್ಮೇಳನಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಈ ಸಮ್ಮೇಳನಗಳ ಮೂಲಕ ಸಮಾಜದ ವಿವಿಧ ವರ್ಗಗಳ ನಡುವೆ ಸಂವಾದ ಮತ್ತು ಸಹಭಾಗಿತ್ವ ಹೆಚ್ಚಿಸಲು ಪ್ರಯತ್ನಿಸಲಾಗಿದೆ. ಸಮ್ಮೇಳನಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಸಲಹೆಗಳು ಹಾಗೂ ಸಾಮಾಜಿಕ ಪ್ರತಿಕ್ರಿಯೆಗಳನ್ನು ಮುಂದಿನ ಚಟುವಟಿಕೆಗಳಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಯಲಿದೆ ಎಂದರು.

ಮನೆಮನೆ ಸಂಪರ್ಕ ಅಭಿಯಾನಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೇವಾ ಚಟುವಟಿಕೆಗಳನ್ನು ವಿಸ್ತರಿಸುವುದು ಹಾಗೂ ಸಾಮಾಜಿಕ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳೊಂದಿಗೆ ಸಹಕಾರ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಗುವುದು. ಹಲವು ಸಂಘಟನೆಗಳು ಸಂಘದೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಆಸಕ್ತಿ ವ್ಯಕ್ತಪಡಿಸಿದ್ದು, ಅಗತ್ಯಕ್ಕೆ ಅನುಗುಣವಾಗಿ ಸ್ವಯಂಸೇವಕರ ಸಹಕಾರದೊಂದಿಗೆ ಇಂತಹ ಪ್ರಯತ್ನಗಳನ್ನು ಮುಂದುವರಿಸುವ ಕುರಿತು ಚಿಂತನೆ ನಡೆಯಲಿದೆ ಎಂದು ತಿಳಿಸಿದರು.

ಮಹಿಳೆಯರು, ಯುವಕರ ಪಾಲ್ಗೊಳ್ಳುವಿಕೆ ಪರಿಶೀಲನೆ

ಶತಮಾನೋತ್ಸವದ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿತ್ತು. ಮನೆಮನೆ ಸಂಪರ್ಕ ಅಭಿಯಾನ, ಹಿಂದೂ ಸಮ್ಮೇಳನಗಳು ಹಾಗೂ ಇತರ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ನಗರಗಳು, ಗ್ರಾಮಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಯುವಕರಿಗಾಗಿ ಆಯೋಜಿಸಿದ ಕಾರ್ಯಕ್ರಮಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಪಾಲ್ಗೊಂಡಿದ್ದಾರೆ ಎಂದು ಆಂಬೇಕರ್ ಹೇಳಿದರು.

ಈ ಕಾರ್ಯಕ್ರಮಗಳ ಅನುಭವಗಳು, ಯುವಜನರಿಂದ ಬಂದ ಸಲಹೆಗಳು ಹಾಗೂ ಸಮಾಜದ ವಿವಿಧ ವರ್ಗಗಳ ನಿರೀಕ್ಷೆಗಳನ್ನು ಆಧರಿಸಿ ಮುಂದಿನ ಚಟುವಟಿಕೆಗಳ ರೂಪುರೇಷೆ ಸಿದ್ಧಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.

ಸಂಘಟನಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಚರ್ಚೆ

ಸಂಘದ ಸಂಘಟನಾ ರಚನೆಯಲ್ಲಿ ಸಂಭವನೀಯ ಬದಲಾವಣೆಗಳೂ ಸಭೆಯ ಪ್ರಮುಖ ಕಾರ್ಯಸೂಚಿಯಲ್ಲಿವೆ. ಈ ಕುರಿತು ಈ ಹಿಂದೆಯೇ ಚರ್ಚೆ ನಡೆದಿದ್ದು, ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮುಂದಿನ ಹಂತದ ಚರ್ಚೆ ನಡೆಯಲಿದೆ. ಪ್ರಸ್ತಾವಿತ ಹೊಸ ಸಂಘಟನಾ ವ್ಯವಸ್ಥೆಗೆ ಅನುಗುಣವಾಗಿ ಮುಂದಿನ ವರ್ಷದ ಮಾರ್ಚ್‌ನಿಂದ ಕಾರ್ಯಾರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜೀವನದಲ್ಲಿ ಎದುರಾಗುವ ವಿವಿಧ ವಿಚಾರಗಳ ಕುರಿತು ಜನರಲ್ಲಿ ಸರಿಯಾದ ಮಾಹಿತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು.

ಮಾದಕ ವಸ್ತುಗಳ ಸಮಸ್ಯೆಯಿಂದ ಅಂತರ್ಜಾಲ ವಿಷಯಗಳವರೆಗೆ ಚರ್ಚೆ

ಸಮಕಾಲೀನ ಸಾಮಾಜಿಕ ಸವಾಲುಗಳು ಹಾಗೂ ರಾಷ್ಟ್ರೀಯ ಮಹತ್ವದ ವಿಚಾರಗಳೂ ಸಭೆಯ ಕಾರ್ಯಸೂಚಿಯಲ್ಲಿವೆ. ಮಾದಕ ವಸ್ತುಗಳ ಹೆಚ್ಚುತ್ತಿರುವ ಸಮಸ್ಯೆ, ಹೊಸ ಅಂತರ್ಜಾಲ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಷಯಗಳು, ಹೊರಗಿನ ಶಕ್ತಿಗಳ ಹಸ್ತಕ್ಷೇಪ ಮತ್ತು ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

ವಿಜಯದಶಮಿ ಸಂದರ್ಭದಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಪ್ರಮುಖ ವಿಚಾರಗಳ ಬಗ್ಗೆಯೂ ಮುಂದಿನ ಕಾರ್ಯದಿಕ್ಕು ನಿರ್ಧರಿಸುವ ಕುರಿತು ಸಮಾಲೋಚನೆ ನಡೆಯಲಿದೆ. ಸಂಘದ ಪಂಚಪರಿವರ್ತನೆಗೆ ಸಂಬಂಧಿಸಿದ ವಿಷಯಗಳನ್ನೂ ಪರಿಶೀಲಿಸಿ ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಆಂಬೇಕರ್ ವಿವರಿಸಿದರು.

ಅಮೆರಿಕ, ಕೆನಡಾ, ಬ್ರಿಟನ್ ಪ್ರವಾಸಗಳ ಅನುಭವಗಳ ಪರಿಶೀಲನೆ

ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಈ ವರ್ಷ ಅಮೆರಿಕ, ಕೆನಡಾ ಹಾಗೂ ಬ್ರಿಟನ್‌ಗೆ ಕೈಗೊಂಡ ಪ್ರವಾಸಗಳ ಅನುಭವಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು.

ಈ ಪ್ರವಾಸಗಳ ಸಂದರ್ಭದಲ್ಲಿ ಹಿಂದೂತ್ವದ ಪರಿಕಲ್ಪನೆ, ಭಾರತದ ಪ್ರಗತಿ ಹಾಗೂ ವಿಶ್ವಶಾಂತಿಯಲ್ಲಿ ಭಾರತದ ಪಾತ್ರದ ಕುರಿತು ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದರು. ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳೊಂದಿಗೆ ನಡೆಸಿದ ಸಂವಾದದ ಅನುಭವಗಳನ್ನೂ ಪರಿಶೀಲಿಸಲಾಗುವುದು. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಂಪರ್ಕ ಮತ್ತು ಸಂವಾದವನ್ನು ವಿಸ್ತರಿಸುವ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯಲಿದೆ. ಸರಸಂಘಚಾಲಕರ ಮುಂದಿನ ವರ್ಷದ ವಿದೇಶ ಪ್ರವಾಸಗಳ ಯೋಜನೆಯೂ ಸಭೆಯ ಕಾರ್ಯಸೂಚಿಯಲ್ಲಿದೆ ಎಂದು ತಿಳಿಸಿದರು.

46 ಪ್ರಾಂತಗಳು, 11 ಕ್ಷೇತ್ರಗಳ ಪ್ರಮುಖರು ಭಾಗಿ

ಮೂರು ದಿನಗಳ ಸಭೆಯಲ್ಲಿ ಸಂಘದ ಎಲ್ಲ ಆರು ಸಹ ಸರಕಾರ್ಯವಾಹರು, ಅಖಿಲ ಭಾರತ ಕಾರ್ಯವಿಭಾಗಗಳ ಪ್ರಮುಖರು ಹಾಗೂ ಕಾರ್ಯಕಾರಿಣಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ದೇಶದ 46 ಪ್ರಾಂತಗಳ ಪ್ರಾಂತ ಸಂಘಚಾಲಕರು, ಪ್ರಾಂತ ಕಾರ್ಯವಾಹರು, ಪ್ರಾಂತ ಪ್ರಚಾರಕರು, ಸಹ ಪ್ರಚಾರಕರು ಹಾಗೂ ಅವರ ಸಹಾಯಕ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಘದ ಎಲ್ಲ 11 ಕ್ಷೇತ್ರಗಳ ಪ್ರಮುಖ ಪದಾಧಿಕಾರಿಗಳೂ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.

ಶತಮಾನೋತ್ಸವದ ಕಾರ್ಯಕ್ರಮಗಳು ಪೂರ್ಣಗೊಂಡ ಬಳಿಕ ನಡೆಯುತ್ತಿರುವ ಈ ಸಭೆಯು ಕಳೆದ ಒಂದು ವರ್ಷದ ಸಂಘಟನಾ ಚಟುವಟಿಕೆಗಳ ಪರಿಶೀಲನೆ ಹಾಗೂ ಮುಂದಿನ ವರ್ಷಗಳ ಆದ್ಯತೆಗಳನ್ನು ನಿರ್ಧರಿಸುವ ದೃಷ್ಟಿಯಿಂದ ಮಹತ್ವ ಪಡೆದಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್ ಆಂಬೇಕರ್ ಅವರೊಂದಿಗೆ ಮಾಳವ ಪ್ರಾಂತದ ಸಂಘಚಾಲಕ ಡಾ. ಪ್ರಕಾಶ ಶಾಸ್ತ್ರಿ ಉಪಸ್ಥಿತರಿದ್ದರು. ಅಖಿಲ ಭಾರತ ಸಹ ಪ್ರಚಾರ ಪ್ರಮುಖರಾದ ನರೇಂದ್ರ ಠಾಕೂರ್, ಪ್ರದೀಪ್ ಜೋಶಿ ಹಾಗೂ ಮಧ್ಯ ಕ್ಷೇತ್ರದ ಪ್ರಚಾರ ಪ್ರಮುಖ ಕೈಲಾಶಚಂದ್ರ ಉಪಸ್ಥಿತರಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande