ರಾಜ್ಯದಲ್ಲಿ ಹಾಲು-ಮೊಸರು ದರ ಏರಿಕೆಗೆ ಪ್ರಹ್ಲಾದ್ ಜೋಶಿ ಆಕ್ರೋಶ
ಬೆಂಗಳೂರು, 31 ಅಕ್ಟೋಬರ್ (ಹಿ.ಸ.): ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ಭಾರಿ ಬೆಲೆ ಏರಿಕೆ ಮಾಡಲಾಗಿದ್ದು, ಕಾಂಗ್ರೆಸ್ ಸರ್ಕಾರ ಜನಸಾಮಾನ
Pralhad-Joshi-Slams-Karnataka-Government-Over-Nandini-Curd-Price-Hike


ಬೆಂಗಳೂರು, 31 ಅಕ್ಟೋಬರ್ (ಹಿ.ಸ.):

ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ಭಾರಿ ಬೆಲೆ ಏರಿಕೆ ಮಾಡಲಾಗಿದ್ದು, ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಜೋಶಿ, ಆರ್ಥಿಕ ದುರಾಡಳಿತ ಹಾಗೂ ಆಡಳಿತಾತ್ಮಕ ವೈಫಲ್ಯದಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲು ಸಾಧ್ಯವಾಗದ ಸರ್ಕಾರ, ತನ್ನ ರಾಜಕೀಯ ತಪ್ಪುಗಳ ಹೊರೆ ಬಡವರ ಮೇಲೆ ಹಾಕುತ್ತಿದೆ ಎಂದು ಟೀಕಿಸಿದ್ದಾರೆ.

ಒಂದು ಲೀಟರ್ ಮೊಸರಿನ ದರವನ್ನು ₹54ರಿಂದ ₹68ಕ್ಕೆ ಏರಿಸಲಾಗಿದ್ದು, ₹14 ಹೆಚ್ಚಳವಾಗಿದೆ. ಅಂದರೆ ಶೇ. 25.93ರಷ್ಟು ದರ ಏರಿಕೆಯಾಗಿದೆ. ಅದೇ ರೀತಿ ಅರ್ಧ ಲೀಟರ್ ಮೊಸರಿನ ದರ ₹28ರಿಂದ ₹34ಕ್ಕೆ ಹೆಚ್ಚಳವಾಗಿದ್ದು, ₹6 ಏರಿಕೆಯಾಗಿದೆ. ಇದು ಶೇ. 21.43ರಷ್ಟು ಹೆಚ್ಚಳವಾಗಿದೆ.

ಈಗಾಗಲೇ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8 ಹೆಚ್ಚಿಸಿರುವ ಸರ್ಕಾರ, ಇದೀಗ ಮೊಸರಿನ ದರವನ್ನೂ ಏಕಾಏಕಿ ಶೇ. 21ರಿಂದ 26ರಷ್ಟು ಹೆಚ್ಚಿಸಿರುವುದು ಬಡ ಹಾಗೂ ಕೆಳಮಧ್ಯಮ ವರ್ಗದ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಜೋಶಿ ಹೇಳಿದ್ದಾರೆ.

ಮೊಸರು ಐಷಾರಾಮಿ ವಸ್ತುವಲ್ಲ, ಅದು ಜನರ ದಿನನಿತ್ಯದ ಆಹಾರದ ಭಾಗವಾಗಿದೆ. ಇಂತಹ ಅಗತ್ಯ ವಸ್ತುವಿನ ಬೆಲೆ ಹೆಚ್ಚಿಸುವ ಮೂಲಕ ಕೆಳಮಧ್ಯಮ ವರ್ಗದ ಕುಟುಂಬಗಳ ಹೊಟ್ಟೆಯ ಮೇಲೆ ಸರ್ಕಾರ ಹೊಡೆತ ನೀಡಿದೆ. ತನ್ನ ಆರ್ಥಿಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಜನರಿಂದ ದಂಡ ವಸೂಲಿ ಮಾಡುತ್ತಿರುವುದು ಸಂಪೂರ್ಣ ಜನವಿರೋಧಿ ನೀತಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande