
ಕಠ್ಮಂಡು, 31 ಅಕ್ಟೋಬರ್ (ಹಿ.ಸ.):
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಹಲವು ಮಾಧ್ಯಮ ಸಂಸ್ಥೆಗಳ ಕಚೇರಿಗಳ ಮೇಲೆ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದ್ದು, ಸುಮಾರು ಅರ್ಧ ಡಜನ್ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಮೊದಲಿಗೆ ಅನಾಮನಗರದಲ್ಲಿರುವ ಆನ್ಲೈನ್ ಸುದ್ದಿ ತಾಣ ‘ದಿಯೋ ಪೋಸ್ಟ್’ ಕಚೇರಿಗೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಸುದ್ದಿ ತಾಣದ ಪ್ರಧಾನ ಸಂಪಾದಕ ಸುದೀಪ್ ಬಿಶ್ವಕರ್ಮ ಮತ್ತು ಸುದ್ದಿ ಸಂಯೋಜಕ ಮದನ್ ಢುಂಗಾನಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಸುದ್ದಿ ತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರೊಬ್ಬರ ಪ್ರಕಾರ, ಸಾಮಾನ್ಯ ಉಡುಪಿನಲ್ಲಿದ್ದ ನಾಲ್ವರು ಪೊಲೀಸರು ಕಚೇರಿಗೆ ಆಗಮಿಸಿದ್ದರು. ಬಿಶ್ವಕರ್ಮ ಮತ್ತು ಢುಂಗಾನಾ ಅವರನ್ನು ವಿಚಾರಣೆಗಾಗಿ ಕರೆದೊಯ್ಯಲು ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಶುಕ್ರವಾರ ಹಲವು ಮಾಧ್ಯಮ ಸಂಸ್ಥೆಗಳ ಕಚೇರಿಗಳಿಗೆ ಪೊಲೀಸರು ತೆರಳಿ ಪತ್ರಕರ್ತರನ್ನು ವಶಕ್ಕೆ ಪಡೆದಿರುವ ಘಟನೆಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
‘ನೇಪಾಳ್ ಪ್ರೆಸ್’ ಸಂಸ್ಥೆಯ ಕಚೇರಿಗೆ ದಾಳಿ ನಡೆಸಿದ ಪೊಲೀಸರು, ಅಲ್ಲಿನ ಸುದ್ದಿ ವಿಭಾಗದಿಂದ ಬಿಶ್ವಮಣಿ ಸುಬೇದಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ರೀತಿ, ಬಿಜುಲೀಬಜಾರ್ನಲ್ಲಿರುವ ಮಾಧ್ಯಮ ಸಂಸ್ಥೆಯೊಂದರ ಕಚೇರಿಗೆ ಸಾಮಾನ್ಯ ಉಡುಪಿನಲ್ಲಿ ಆಗಮಿಸಿದ ಪೊಲೀಸರು, ‘ಮೋಟಿವೇಟ್ ನ್ಯೂಸ್’ನ ಪತ್ರಕರ್ತ ಶೋಭರಾಜ್ ಬರಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
‘ಡಿಎನ್ಎ ಖಬರ್’ನ ಪ್ರಧಾನ ಸಂಪಾದಕ ಧೀರಜ್ ಬಸ್ನೇತ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸುದ್ದಿ ತಾಣದ ಪತ್ರಕರ್ತರೊಬ್ಬರು, ಮಧ್ಯಾಹ್ನ ಬಸ್ನೇತ್ ಅವರಿಗೆ ಕಠ್ಮಂಡು ಪೊಲೀಸ್ ಅಪರಾಧ ತನಿಖಾ ಕಚೇರಿಯಿಂದ ದೂರವಾಣಿ ಕರೆ ಬಂದಿತ್ತು. ಇ-ಸೇವಾಗೆ ಸಂಬಂಧಿಸಿದ ಆರೋಪಿತ ವಂಚನೆ ಪ್ರಕರಣದ ವಿಚಾರಣೆಗಾಗಿ ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು. ಅದರಂತೆ ಅವರು ಕಚೇರಿಗೆ ತೆರಳಿದಾಗ, ಅಲ್ಲಿಯೇ ಉಳಿಯಬೇಕೆಂದು ತಿಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಐವರು ಸಾಮಾನ್ಯ ಉಡುಪಿನ ಪೊಲೀಸರು ‘ನಯಾ ಪತ್ರಿಕಾ’ ದೈನಿಕದ ಕಚೇರಿಗೂ ತೆರಳಿದ್ದಾರೆ. ಅಲ್ಲಿನ ವರದಿಗಾರ ನವರಾಜ್ ಮೈನೇಲಿ ಅವರನ್ನು ತಮ್ಮೊಂದಿಗೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ಕುರಿತು ಪತ್ರಿಕೆಯ ಸಂಪಾದಕ ಖಗೇಂದ್ರ ಪಂತ್ ಮಾಹಿತಿ ನೀಡಿದ್ದು, ನವರಾಜ್ ಅವರನ್ನು ಸೈಬರ್ ವಿಭಾಗಕ್ಕೆ ಕರೆದೊಯ್ಯಬೇಕೆಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಬಂಧನದ ಆದೇಶಪತ್ರವನ್ನು ತೋರಿಸದೆ ಕಚೇರಿಯಿಂದ ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ, ‘ದಿಯೋ ಪೋಸ್ಟ್’ ಕಚೇರಿಗೂ ಪೊಲೀಸ್ ತಂಡ ತೆರಳಿರುವ ಬಗ್ಗೆ ವರದಿಯಾಗಿದೆ. ಮುಖ್ಯ ನ್ಯಾಯಮೂರ್ತಿಗೆ ಸಂಬಂಧಿಸಿದ ಸುದ್ದಿಯನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಬೆದರಿಕೆಗಳು ಬಂದಿವೆ ಎಂದು ಈ ಸುದ್ದಿ ತಾಣ ಈ ಹಿಂದೆ ಆರೋಪಿಸಿತ್ತು. ಇದೀಗ ಪೊಲೀಸರು ಸಂಪಾದಕ ಹಾಗೂ ಮತ್ತೊಬ್ಬ ಪತ್ರಕರ್ತನನ್ನು ವಶಕ್ಕೆ ಪಡೆದು ಸೈಬರ್ ವಿಭಾಗಕ್ಕೆ ಕರೆದೊಯ್ದಿದ್ದಾರೆ.
ಮಧ್ಯರಾತ್ರಿ ಪೊಲೀಸರು ನಡೆಸಿದ ಈ ಕಾರ್ಯಾಚರಣೆಗೆ ನೇಪಾಳದ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.