ಶೀಘ್ರ ಹಾಸನ ವಿಮಾನ ನಿಲ್ದಾಣ ಉದ್ಘಾಟಿಸುವ ಗುರಿ: ಕೆ. ಎಂ. ಶಿವಲಿಂಗೇಗೌಡ
ಹಾಸನ, 31 ಅಕ್ಟೋಬರ್ (ಹಿ.ಸ.): ಹಾಸನ ಜಿಲ್ಲೆಯ ಜನರ ಬಹುದಿನಗಳ ಕನಸಾಗಿರುವ ಬೂವನಹಳ್ಳಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಯೋಜನೆಯ ಬಾಕಿ ಕಾಮಗಾರಿಗಳು, ಹೆಚ್ಚುವರಿ ಭೂಸ್ವಾಧೀನ, ರನ್‌ವೇ ವಿಸ್ತರಣೆ ಹಾಗೂ ಇತರ ಮೂಲಸೌಕರ
ಹಾಸನ ಜಿಲ್ಲೆಯ ಬೂವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಸಚಿವ ಕೆ.ಎಂ.ಶಿವಲಿಂಗೇಗೌಡ


ಹಾಸನ, 31 ಅಕ್ಟೋಬರ್ (ಹಿ.ಸ.):

ಹಾಸನ ಜಿಲ್ಲೆಯ ಜನರ ಬಹುದಿನಗಳ ಕನಸಾಗಿರುವ ಬೂವನಹಳ್ಳಿ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಯೋಜನೆಯ ಬಾಕಿ ಕಾಮಗಾರಿಗಳು, ಹೆಚ್ಚುವರಿ ಭೂಸ್ವಾಧೀನ, ರನ್‌ವೇ ವಿಸ್ತರಣೆ ಹಾಗೂ ಇತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಂದಾಜು ₹600 ಕೋಟಿ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಈ ಸಂಬಂಧ ಸಮಗ್ರ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ಮಂಡಿಸುವ ಮೂಲಕ ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.

ಹಾಸನ ಜಿಲ್ಲೆಯ ಬೂವನಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ವಿಮಾನ ನಿಲ್ದಾಣದ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಯೋಜನೆ ಪೂರ್ಣಗೊಳ್ಳಲು ಎದುರಾಗಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಭೇಟಿ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು ಎಂದು ವಿವರಿಸಿದರು.

*₹200 ಕೋಟಿ ವೆಚ್ಚ; ರನ್‌ವೇ ವಿಸ್ತರಣೆಗೆ ಹೆಚ್ಚುವರಿ ಭೂಮಿ ಅಗತ್ಯ*

ಹಾಸನ ವಿಮಾನ ನಿಲ್ದಾಣ ಯೋಜನೆಗಾಗಿ ಈಗಾಗಲೇ ಸುಮಾರು ₹200 ಕೋಟಿ ವೆಚ್ಚ ಮಾಡಲಾಗಿದೆ. ಈವರೆಗೆ 536 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಬದಲಾದ ಅಗತ್ಯಗಳಿಗೆ ಅನುಗುಣವಾಗಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಲು ಇನ್ನೂ 92 ಎಕರೆ ಹೆಚ್ಚುವರಿ ಭೂಮಿಯ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ಆರಂಭದಲ್ಲಿ ರೂಪಿಸಲಾಗಿದ್ದ ಯೋಜನೆಯ ಸ್ವರೂಪ ಹಾಗೂ ಪ್ರಸ್ತುತ ಅಗತ್ಯಗಳ ನಡುವೆ ಸಾಕಷ್ಟು ಬದಲಾವಣೆಗಳಾಗಿವೆ. ರನ್‌ವೇ ಉದ್ದವನ್ನು ಹೆಚ್ಚಿಸಬೇಕಾಗಿರುವುದರಿಂದ ಹೆಚ್ಚುವರಿ ಭೂಸ್ವಾಧೀನ ಅನಿವಾರ್ಯವಾಗಿದೆ. ಇದರೊಂದಿಗೆ ಇತರ ಮೂಲಸೌಕರ್ಯ ಕಾಮಗಾರಿಗಳನ್ನೂ ಕೈಗೊಳ್ಳಬೇಕಾಗಿರುವುದರಿಂದ ಯೋಜನೆಯ ಒಟ್ಟಾರೆ ವೆಚ್ಚ ಹೆಚ್ಚಳವಾಗಿದೆ ಎಂದು ಹೇಳಿದರು.

*ಬೈಲಾಪುರ ಜನರಿಗೆ ಪರ್ಯಾಯ ದ್ವಿಪಥ ರಸ್ತೆ*

ವಿಮಾನ ನಿಲ್ದಾಣದ ನಿರ್ಮಾಣದಿಂದ ಬೈಲಾಪುರ ಭಾಗದ ಜನರು ಬಿ.ಎಂ. ರಸ್ತೆಗೆ ಸಂಪರ್ಕ ಹೊಂದಲು ಬಳಸುತ್ತಿದ್ದ ಮಾರ್ಗಕ್ಕೆ ಅಡಚಣೆ ಉಂಟಾಗಿದೆ. ಸ್ಥಳೀಯ ನಿವಾಸಿಗಳು ತಮ್ಮ ಸಂಚಾರಕ್ಕೆ ಪರ್ಯಾಯವಾಗಿ ದ್ವಿಪಥ ರಸ್ತೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಸಮಸ್ಯೆಯೂ ಕಾಮಗಾರಿಯ ಪ್ರಗತಿಗೆ ಅಡ್ಡಿಯಾಗಿರುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣದ ಅಭಿವೃದ್ಧಿಯ ಜೊತೆಗೆ ಸ್ಥಳೀಯ ಜನರ ಹಿತಾಸಕ್ತಿಯನ್ನೂ ಕಾಪಾಡಬೇಕಾಗಿದೆ. ಗ್ರಾಮಸ್ಥರ ದೈನಂದಿನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಿಮಾನ ನಿಲ್ದಾಣಕ್ಕಾಗಿ ರಸ್ತೆ ಸಂಪರ್ಕ ಕಳೆದುಕೊಳ್ಳುವ ಜನರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

*ವಿದ್ಯುತ್ ಮಾರ್ಗ ಸ್ಥಳಾಂತರಕ್ಕೂ ಹೆಚ್ಚುವರಿ ಅನುದಾನ*

ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಹಾದುಹೋಗಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ಈ ಹಿಂದೆ ಸರ್ಕಾರ ₹16 ಕೋಟಿ ಬಿಡುಗಡೆ ಮಾಡಿತ್ತು. ಆದರೆ, ಭೂಮಿಯ ದರ ಹೆಚ್ಚಳ ಹಾಗೂ ಭೂಮಾಲೀಕರ ಪರಿಹಾರಕ್ಕೆ ಸಂಬಂಧಿಸಿದ ಬೇಡಿಕೆಗಳಿಂದ ಹೆಚ್ಚುವರಿ ಅನುದಾನದ ಅಗತ್ಯ ಎದುರಾಗಿದೆ ಎಂದು ಸಚಿವರು ವಿವರಿಸಿದರು.

ಭೂಸ್ವಾಧೀನ, ರನ್‌ವೇ ವಿಸ್ತರಣೆ, ವಿದ್ಯುತ್ ಮಾರ್ಗ ಸ್ಥಳಾಂತರ, ಪರ್ಯಾಯ ರಸ್ತೆ ನಿರ್ಮಾಣ ಹಾಗೂ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಇತರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒಟ್ಟಾರೆ ಅಂದಾಜು ₹600 ಕೋಟಿ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಕೇವಲ ಭೂಸ್ವಾಧೀನಕ್ಕೆ ಬೇಕಾಗಿರುವ ಮೊತ್ತವಲ್ಲ. ಯೋಜನೆಯ ಎಲ್ಲ ಬಾಕಿ ಕಾಮಗಾರಿಗಳನ್ನು ಒಳಗೊಂಡ ಅಂದಾಜು ವೆಚ್ಚವಾಗಿದೆ ಎಂದು ಸ್ಪಷ್ಟಪಡಿಸಿದರು.

*ರೈತರೊಂದಿಗೆ ಮಾತುಕತೆ ನಡೆಸಿ ಭೂಸ್ವಾಧೀನ*

ಹೆಚ್ಚುವರಿ 92 ಎಕರೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಮಾಲೀಕರು ಮತ್ತು ರೈತರೊಂದಿಗೆ ಮಾತುಕತೆ ನಡೆಸಲಾಗುವುದು. ಪ್ರಸ್ತುತ ನಿಗದಿಪಡಿಸಿರುವ ಪರಿಹಾರದ ದರದಂತೆ ಭೂಮಿ ನೀಡುವಂತೆ ರೈತರ ಮನವೊಲಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದರು.

ರೈತರು ಒಪ್ಪಿಗೆ ನೀಡದಿದ್ದಲ್ಲಿ ಕಾನೂನಿನ ಪ್ರಕಾರ 1:4 ಅನುಪಾತದಲ್ಲಿ ಪರಿಹಾರ ನೀಡುವ ಮೂಲಕ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸುವ ಬಗ್ಗೆ ಪರಿಶೀಲಿಸಲಾಗುವುದು. ಯೋಜನೆಗೆ ಅಗತ್ಯವಿರುವ ಪ್ರದೇಶದಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದಲ್ಲಿ ಅದನ್ನು ಬಳಸಿಕೊಳ್ಳುವ ಸಾಧ್ಯತೆಯನ್ನೂ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಯೋಜನೆ ಪೂರ್ಣಗೊಳಿಸುವ ಸಂದರ್ಭದಲ್ಲಿ ರೈತರ ಹಿತಾಸಕ್ತಿ ಹಾಗೂ ಸ್ಥಳೀಯರ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಾತುಕತೆಯ ಮೂಲಕ ಬಗೆಹರಿಸುವ ಉದ್ದೇಶವಿದೆ ಎಂದು ತಿಳಿಸಿದರು.

*ಗುತ್ತಿಗೆದಾರರು ಕಾಮಗಾರಿ ಮುಂದುವರಿಸಲು ಸಿದ್ಧ*

ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಸ್ಥಳದಲ್ಲಿಯೇ ಇದ್ದು, ಕೆಲಸ ಮುಂದುವರಿಸಲು ಸಿದ್ಧರಾಗಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಅಗತ್ಯ ಭೂಮಿಯನ್ನು ತೆರವುಗೊಳಿಸಿ ಹಸ್ತಾಂತರಿಸಿದರೆ ಕಾಮಗಾರಿಯನ್ನು ಮುಂದುವರಿಸಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಚಿವರು ಹೇಳಿದರು.

ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಆಡಳಿತಾತ್ಮಕ ಹಾಗೂ ಭೂಸ್ವಾಧೀನ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವುದು ಈಗಿನ ಆದ್ಯತೆಯಾಗಿದೆ. ಅಗತ್ಯ ಹಣಕಾಸಿನ ಮಂಜೂರಾತಿ ಪಡೆದು, ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಯೋಜನೆಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ಸಾಕಷ್ಟು ಹಣ ವೆಚ್ಚವಾಗಿರುವುದರಿಂದ ಯೋಜನೆಯನ್ನು ಮತ್ತಷ್ಟು ವಿಳಂಬ ಮಾಡುವುದು ಸರಿಯಲ್ಲ. ಬಾಕಿ ಉಳಿದಿರುವ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಿ ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

*ಒಂದು ವರ್ಷದೊಳಗೆ ಯೋಜನೆ ಪೂರ್ಣಗೊಳಿಸಲು ಪ್ರಯತ್ನ*

ಹಾಸನ ವಿಮಾನ ನಿಲ್ದಾಣ ಯೋಜನೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಯಾಗಿದೆ. ಈ ಯೋಜನೆ ಪೂರ್ಣಗೊಂಡರೆ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ. ಹಾಸನದ ಜನರ ಕನಸಾಗಿರುವ ವಿಮಾನ ನಿಲ್ದಾಣವನ್ನು ಕಾರ್ಯರೂಪಕ್ಕೆ ತರುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದರು.

ಯೋಜನೆಗೆ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಿಸಿಕೊಂಡು, ಬಾಕಿ ಉಳಿದಿರುವ ಭೂಸ್ವಾಧೀನ ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ಒಂದು ವರ್ಷದೊಳಗೆ ವಿಮಾನ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಬೆಂಗಳೂರಿನಲ್ಲಿ ಕುಳಿತು ಚರ್ಚಿಸುವುದಕ್ಕಿಂತ ನೇರವಾಗಿ ಸ್ಥಳಕ್ಕೆ ಬಂದು ಪರಿಶೀಲಿಸಿದರೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆ. ಯಾವ ಕಾಮಗಾರಿ ಬಾಕಿಯಿದೆ, ಯಾವ ಸಮಸ್ಯೆಗೆ ಯಾವ ಇಲಾಖೆಯಿಂದ ಪರಿಹಾರ ಬೇಕಾಗಿದೆ ಎಂಬುದನ್ನು ಸ್ಥಳದಲ್ಲಿಯೇ ನಿರ್ಧರಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಹೇಳಿದರು.

*ಎರಡ್ಮೂರು ತಿಂಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ*

ಆಸ್ಪತ್ರೆಯ ಬಹುತೇಕ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದಿರುವ ಸಣ್ಣಪುಟ್ಟ ಕೆಲಸಗಳನ್ನು ತ್ವರಿತವಾಗಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆಸ್ಪತ್ರೆ ಕಾಮಗಾರಿಗೆ ಅಗತ್ಯವಿರುವ ಹಣಕಾಸಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಮುಂದಿನ ಎರಡು ಮೂರು ತಿಂಗಳೊಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande