ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು–ತೂತುಕುಡಿ, ಕಣ್ಣೂರಿಗೆ ವಿಶೇಷ ರೈಲುಗಳ ಸಂಚಾರ
ಹಬ್ಬದ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ಬೆಂಗಳೂರಿನಿಂದ ತೂತುಕುಡಿ ಮತ್ತು ಕಣ್ಣೂರಿಗೆ ವಿಶೇಷ ರೈಲುಗಳನ್ನು ಘೋಷಿಸಿದೆ. ನವೆಂಬರ್ 6 ಮತ್ತು 7ರಂದು ವಿಶೇಷ ರೈಲುಗಳ ಸಂಚಾರ ನಡೆಯಲಿದ್ದು, ಪ್ರಯಾಣಿಕರಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
Diwali-Special-Trains-Bengaluru-Thoothukudi-Kannur


ಬೆಂಗಳೂರು, 31 ಅಕ್ಟೋಬರ್ (ಹಿ.ಸ.):

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ಇಲಾಖೆ ಬೆಂಗಳೂರಿನಿಂದ ತಮಿಳುನಾಡಿನ ತೂತುಕುಡಿ ಹಾಗೂ ಕೇರಳದ ಕಣ್ಣೂರಿಗೆ ವಿಶೇಷ ರೈಲುಗಳನ್ನು ಕಾರ್ಯಾಚರಣೆಗೊಳಿಸಲು ನಿರ್ಧರಿಸಿದೆ.

ಹಬ್ಬದ ಸಾಲು ರಜೆಗಳಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ವಿಶೇಷ ರೈಲು ಸೇವೆಗಳನ್ನು ಘೋಷಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಬೆಂಗಳೂರು–ತೂತುಕುಡಿ ವಿಶೇಷ ರೈಲು:

ರೈಲು ಸಂಖ್ಯೆ 06533 ನವೆಂಬರ್ 6ರಂದು ರಾತ್ರಿ 9.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಟು, ನವೆಂಬರ್ 7ರಂದು ಮಧ್ಯಾಹ್ನ 12.30ಕ್ಕೆ ತೂತುಕುಡಿ ತಲುಪಲಿದೆ.

ಹಿಂತಿರುಗುವ ರೈಲು ಸಂಖ್ಯೆ 06534 ನವೆಂಬರ್ 7ರಂದು ಮಧ್ಯಾಹ್ನ 3.30ಕ್ಕೆ ತೂತುಕುಡಿಯಿಂದ ಹೊರಟು, ನವೆಂಬರ್ 8ರಂದು ಬೆಳಿಗ್ಗೆ 5.30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.

ಬೆಂಗಳೂರು–ಕಣ್ಣೂರು ವಿಶೇಷ ರೈಲು:

ರೈಲು ಸಂಖ್ಯೆ 06545 ನವೆಂಬರ್ 7ರಂದು ಮಧ್ಯರಾತ್ರಿ 12.05ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಟು, ಅಂದೇ ಮಧ್ಯಾಹ್ನ 2 ಗಂಟೆಗೆ ಕಣ್ಣೂರು ತಲುಪಲಿದೆ.

ಹಿಂತಿರುಗುವ ರೈಲು ಸಂಖ್ಯೆ 06546 ನವೆಂಬರ್ 7ರಂದು ಸಂಜೆ 6.25ಕ್ಕೆ ಕಣ್ಣೂರಿನಿಂದ ಹೊರಟು, ನವೆಂಬರ್ 8ರಂದು ಬೆಳಿಗ್ಗೆ 9.45ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ.

ಹಬ್ಬದ ಸಂದರ್ಭದಲ್ಲಿ ರೈಲುಗಳಲ್ಲಿ ಉಂಟಾಗುವ ಸೀಟುಗಳ ಕೊರತೆ ಹಾಗೂ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಈ ವಿಶೇಷ ರೈಲು ಸೇವೆಗಳನ್ನು ಆರಂಭಿಸಲಾಗುತ್ತಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಯಾಣಿಕರು ವಿಶೇಷ ರೈಲುಗಳ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಆಪ್ಗಳನ್ನು ಸಂಪರ್ಕಿಸುವಂತೆ ನೈಋತ್ಯ ರೈಲ್ವೆ ಇಲಾಖೆ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande