
ವಿಜಯಪುರ, 31 ಅಕ್ಟೋಬರ್ (ಹಿ.ಸ.)
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ವಿಜಯಪುರ ತಾಲೂಕಿನ ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಖಂಡಕಿ ಸಮೀಪದ ಅಗಸನಹಳ್ಳಿಯಲ್ಲಿ ರಸ್ತೆ ಸುಧಾರಣಾ ಕಾಮಗಾರಿಗೆ ಸಚಿವ ಎಂ.ಬಿ. ಪಾಟೀಲ ಅವರು ಭೂಮಿಪೂಜೆ ನೆರವೇರಿಸಿದರು.
ಅಗಸನಹಳ್ಳಿ ಗಾಂಧಿ ವೃತ್ತದಿಂದ ಯಕ್ಕುಂಡಿ–ಸಂಗಾಪುರ, ಶೇಗುಣಸಿ ಹಾಗೂ ಕಾಖಂಡಕಿ ಮಾರ್ಗವಾಗಿ ಹರಳಯ್ಯನ ಗುಂಡಿವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಲವು ಗ್ರಾಮಗಳ ಜನರು ಹಾಗೂ ವಾಹನ ಸವಾರರು ದಿನನಿತ್ಯ ಸಂಚರಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿಗೆ ಮಹತ್ವ ನೀಡಲಾಗಿದೆ.
ರಸ್ತೆಯ ಹದಗೆಟ್ಟ ಭಾಗಗಳ ಸುಧಾರಣೆ, ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಮೇಲ್ಮೈ ಅಭಿವೃದ್ಧಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ಈ ಭಾಗದ ಗ್ರಾಮಗಳ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗುವುದರ ಜೊತೆಗೆ, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರ ಸುರಕ್ಷತೆ ಹೆಚ್ಚುವುದಲ್ಲದೆ, ಗ್ರಾಮೀಣ ಪ್ರದೇಶಗಳ ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಅಗಸನಹಳ್ಳಿ, ಯಕ್ಕುಂಡಿ, ಸಂಗಾಪುರ, ಶೇಗುಣಸಿ ಹಾಗೂ ಕಾಖಂಡಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಈ ರಸ್ತೆ ಸಂಪರ್ಕ ಪ್ರಮುಖವಾಗಿದ್ದು, ರಸ್ತೆ ಅಭಿವೃದ್ಧಿಯಿಂದ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ವ್ಯಾಪಾರಸ್ಥರು ಸೇರಿದಂತೆ ನಿತ್ಯ ಸಂಚರಿಸುವ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿದೆ.
ರಸ್ತೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದರೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಸಾರ್ವಜನಿಕರಿಗೆ ದೀರ್ಘಕಾಲಿಕವಾಗಿ ಉಪಯೋಗವಾಗುವ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande