
ದಾವಣಗೆರೆ, 30 ಅಕ್ಟೋಬರ್ (ಹಿ.ಸ.):
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿ ಹಾಗೂ ಭದ್ರತಾ ಕಾರಣಗಳಿಂದಾಗಿ ವಿಮಾನ ಹಾರಾಟ ರದ್ದಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ ದಾವಣಗೆರೆಯ 45 ಉಮ್ರಾ ಯಾತ್ರಿಗಳು ಇಂದು ಸುರಕ್ಷಿತವಾಗಿ ತವರಿಗೆ ಮರಳಲಿದ್ದಾರೆ.
ದಾವಣಗೆರೆಯಿಂದ ಇದೇ ತಿಂಗಳ 12ರಂದು ಅಲ್ ಫಲ್ ಟೂರ್ ಅಂಡ್ ಟ್ರಾವೆಲ್ಸ್ ಮೂಲಕ ಉಮ್ರಾ ಯಾತ್ರೆಗೆ ತೆರಳಿದ್ದ 45 ಮಂದಿ, ವಿಮಾನ ಹಾರಾಟದಲ್ಲಿ ಉಂಟಾದ ವ್ಯತ್ಯಯದಿಂದಾಗಿ ಸೌದಿಯಲ್ಲಿ ಉಳಿಯುವಂತಾಗಿತ್ತು.
ಹೌತಿ ಬಂಡುಕೋರರ ದಾಳಿ ಹಾಗೂ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನ ಸಂಚಾರ ದಿಢೀರ್ ರದ್ದಾಗಿದ್ದರಿಂದ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ಹೋಟೆಲ್ ವಸತಿ ಹಾಗೂ ಊಟದ ವ್ಯವಸ್ಥೆಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಕುರಿತು ಜಿಲ್ಲಾಡಳಿತದ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದು, ವಿದೇಶಾಂಗ ಇಲಾಖೆಯ ಮೂಲಕ ಯಾತ್ರಿಕರಿಗೆ ಹೋಟೆಲ್ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಯಾತ್ರಿಕರು ತವರಿಗೆ ಮರಳಲು ವಿಮಾನದ ಟಿಕೆಟ್ ವ್ಯವಸ್ಥೆಯೂ ಆಗಿದೆ.
ಸೌದಿ ಅರೇಬಿಯಾದ ಜೆದ್ದಾ ವಿಮಾನ ನಿಲ್ದಾಣದಿಂದ ಹೊರಡಲಿರುವ ಯಾತ್ರಿಕರು ಬಹರೇನ್ ಮಾರ್ಗವಾಗಿ ಮತ್ತೊಂದು ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಇಂದು ರಾತ್ರಿ 9.15ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ನಿರೀಕ್ಷೆಯಿದೆ.
ವಿದೇಶಾಂಗ ಇಲಾಖೆಯ ನೆರವಿಗೆ ಕೃತಜ್ಞತೆ: ವಿಮಾನ ಹಾರಾಟದ ವ್ಯತ್ಯಯದಿಂದಾಗಿ ವಿದೇಶದಲ್ಲಿ ಅನಿರೀಕ್ಷಿತ ಸಂಕಷ್ಟ ಎದುರಿಸಿದ್ದ ಯಾತ್ರಿಕರಿಗೆ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಇಲಾಖೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ನೆರವಾಗಿದೆ.
ಇದೀಗ ಸುರಕ್ಷಿತವಾಗಿ ತವರಿಗೆ ಮರಳಲು ವಿಮಾನ ವ್ಯವಸ್ಥೆಯಾಗಿರುವುದರಿಂದ ಯಾತ್ರಿಕರು ಹಾಗೂ ಅವರ ಕುಟುಂಬಸ್ಥರು ನಿರಾಳರಾಗಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R