
ಭೋಪಾಲ್, 30 ಅಕ್ಟೋಬರ್ (ಹಿ.ಸ.):
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ತಾಯಿ ಕಾಶಿಬಾಯಿ (76) ಶುಕ್ರವಾರ ಬೆಳಗ್ಗೆ ಭೋಪಾಲ್ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಶಿಬಾಯಿ ಅವರನ್ನು ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ನಿಧನದ ಸುದ್ದಿ ಕುಟುಂಬದ ಸದಸ್ಯರು ಹಾಗೂ ಆಪ್ತರಲ್ಲಿ ತೀವ್ರ ದುಃಖ ಮೂಡಿಸಿದೆ.
ಕಾಶಿಬಾಯಿ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯ ಅವರ ಸ್ವಗ್ರಾಮ ಜೈತ್ನಲ್ಲಿ ನಡೆಯಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಭೋಪಾಲ್ನ ಸಾಕೇತ್ ನಗರದಲ್ಲಿರುವ ಅವರ ನಿವಾಸ 9-ಬಿ ಯಲ್ಲಿ ಸಾರ್ವಜನಿಕರು ಹಾಗೂ ಕುಟುಂಬದ ಆಪ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ.
ತಾಯಿಯ ನಿಧನದ ಹಿನ್ನೆಲೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಎಲ್ಲ ಪೂರ್ವನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕುಟುಂಬಕ್ಕೆ ಇದು ಅತ್ಯಂತ ದುಃಖದ ದಿನವಾಗಿದೆ. ತಾಯಿಯ ಅಗಲಿಕೆಯಿಂದ ಜೀವನದಲ್ಲಿ ಎಂದಿಗೂ ತುಂಬಲಾಗದ ಶೂನ್ಯ ಉಂಟಾಗಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಮೃತ ತಾಯಿಗೆ ದೇವರು ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ರೈಸೇನ್ನಲ್ಲಿ ರೈತ ಸಮಾವೇಶ ರದ್ದು
ಕಾಶಿಬಾಯಿ ಅವರ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ರೈಸೇನ್ನಲ್ಲಿ ನಡೆಯಬೇಕಿದ್ದ ರೈತ ಸಮಾವೇಶದಲ್ಲೂ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸುತ್ತಿಲ್ಲ. ಸಚಿವರ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಅವರ ನಿಧನಕ್ಕೆ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಹಾಗೂ ರಾಜ್ಯ ಸಚಿವ ರಾಕೇಶ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕುಟುಂಬದ ಜವಾಬ್ದಾರಿ ಹೊತ್ತಿದ್ದ ಕಾಶಿಬಾಯಿ
ಶಿವರಾಜ್ ಸಿಂಗ್ ಚೌಹಾಣ್ ಅವರ ಜೀವನದಲ್ಲಿ ಕಾಶಿಬಾಯಿ ವಿಶೇಷ ಸ್ಥಾನ ಹೊಂದಿದ್ದರು. ಅವರ ಜನ್ಮತಾಯಿ ಸುಂದರಬಾಯಿ ಚೌಹಾಣ್ ಅವರು ಬಾಲ್ಯದಲ್ಲೇ ನಿಧನರಾಗಿದ್ದರು. ಬಳಿಕ ತಂದೆ ಪ್ರೇಮ್ ಸಿಂಗ್ ಚೌಹಾಣ್ ಅವರು ಮಕ್ಕಳ ಪಾಲನೆ ಮತ್ತು ಕುಟುಂಬದ ನಿರ್ವಹಣೆಗಾಗಿ ಕಾಶಿಬಾಯಿ ಅವರನ್ನು ವಿವಾಹವಾಗಿದ್ದರು. ಕಾಶಿಬಾಯಿ ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸುಂದರಬಾಯಿ ಅವರ ಮಕ್ಕಳಾದ ಶಿವರಾಜ್ ಸಿಂಗ್ ಚೌಹಾಣ್, ನರೇಂದ್ರ ಸಿಂಗ್, ರೋಹಿತ್ ಸಿಂಗ್ ಹಾಗೂ ಪುತ್ರಿ ಶಶಿ ಅವರ ಕುಟುಂಬದ ನಿರ್ವಹಣೆಯಲ್ಲಿ ಕಾಶಿಬಾಯಿ ಮಹತ್ವದ ಪಾತ್ರ ವಹಿಸಿದ್ದರು. ಕಾಶಿಬಾಯಿ ಅವರ ಪುತ್ರ ವರುಣ್ ಸಿಂಗ್ ಚೌಹಾಣ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ.
ಹೇಮಂತ್ ಖಂಡೇಲ್ವಾಲ್ ಸಂತಾಪ
ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಅವರು ಕಾಶಿಬಾಯಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಾಯಿಯ ಅಗಲಿಕೆ ಪ್ರತಿಯೊಬ್ಬರ ಜೀವನದಲ್ಲೂ ತುಂಬಲಾರದ ನಷ್ಟ. ಈ ದುಃಖದ ಸಂದರ್ಭದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅವರ ಕುಟುಂಬದೊಂದಿಗೆ ತಮ್ಮ ಸಂವೇದನೆಗಳಿವೆ ಎಂದು ತಿಳಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಸಚಿವ ರಾಕೇಶ್ ಸಿಂಗ್ ಶೋಕ
ಮಧ್ಯಪ್ರದೇಶದ ಸಚಿವ ರಾಕೇಶ್ ಸಿಂಗ್ ಕೂಡ ಕಾಶಿಬಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತಾಯಿಯ ಅಗಲಿಕೆಯ ನೋವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅವರ ಕುಟುಂಬದ ದುಃಖದಲ್ಲಿ ತಾವು ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.