ಗ್ರಾಮೀಣ ಅಭಿವೃದ್ಧಿಯಾಗದೆ ದೇಶದ ಸಮಗ್ರ ಅಭಿವೃದ್ಧಿ ಅಸಾಧ್ಯ: ನ್ಯಾ. ಸುಭಾಷ್ ಬಿ. ಆದಿ
ಗದಗ, 30 ಅಕ್ಟೋಬರ್ (ಹಿ.ಸ.) ಗ್ರಾಮೀಣ ಭಾಗದ ಅಭಿವೃದ್ಧಿಯಾಗದೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮಗಳ ನೈಜ ಸಮಸ್ಯೆಗಳನ್ನು ಗುರುತಿಸಿ, ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಹಾಗೂ ಮಾಜಿ ಉಪ ಲೋಕಾಯುಕ್ತ
ಫೋಟೋ


ಗದಗ, 30 ಅಕ್ಟೋಬರ್ (ಹಿ.ಸ.)

ಗ್ರಾಮೀಣ ಭಾಗದ ಅಭಿವೃದ್ಧಿಯಾಗದೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಮಗಳ ನೈಜ ಸಮಸ್ಯೆಗಳನ್ನು ಗುರುತಿಸಿ, ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಹಾಗೂ ಮಾಜಿ ಉಪ ಲೋಕಾಯುಕ್ತರಾದ ನ್ಯಾ. ಸುಭಾಷ್ ಬಿ. ಆದಿ ಹೇಳಿದರು.

ನಗರದ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಕೈಗೊಳ್ಳುತ್ತಿರುವ ಗುಣಮಟ್ಟದ ಸಂಶೋಧನಾ ಕಾರ್ಯಗಳನ್ನು ಶ್ಲಾಘಿಸಿದ ಅವರು, ಗ್ರಾಮಗಳ ನೈಜ ಅಗತ್ಯಗಳನ್ನು ಅರಿತುಕೊಂಡು ಆಯಾ ಪ್ರದೇಶಗಳ ಪರಿಸ್ಥಿತಿಗೆ ತಕ್ಕಂತೆ ಗ್ರಾಮೀಣ ಅಧ್ಯಯನ ನಡೆಸುವ ಅಗತ್ಯವಿದೆ ಎಂದರು.

ರೈತರು ಬೆಳೆದ ಕೃಷಿ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಆಗಿ ಗುರುತಿಸಿಕೊಳ್ಳಬೇಕು. ರೈತರು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಅರಿವು ಹೊಂದಿ ಆರ್ಥಿಕವಾಗಿ ಸಬಲರಾದಾಗ ಮಾತ್ರ ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ರೈತರು ಸುಧಾರಿತ ತಂತ್ರಜ್ಞಾನ ಮತ್ತು ಯಂತ್ರ ಆಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಕೃಷಿ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿಯೂ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ತಂತ್ರಜ್ಞಾನ ಆಧಾರಿತ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಿ ಸಂಶೋಧನೆ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರಿಗೆ ನಿರಂತರ ಪ್ರೋತ್ಸಾಹ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಇನ್ನಷ್ಟು ಪರಿಣಾಮಕಾರಿ ಸಂಶೋಧನೆ ಹಾಗೂ ಕಾರ್ಯಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸುರೇಶ್ ವಿ. ನಾಡಗೌಡರ್ ಅವರು ನ್ಯಾ. ಸುಭಾಷ್ ಬಿ. ಆದಿ ಅವರ ಭೇಟಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಜಿ. ಪಲ್ಲೇದ್, ಗದಗದ ವಕೀಲರಾದ ಜಿ.ಸಿ. ರೇಶ್ಮಿ, ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande