

ಸಾರಾಜೆವೊ (ಬೋಸ್ನಿಯಾ ಮತ್ತು ಹರ್ಜೆಗೋವಿನಾ), 30 ಅಕ್ಟೋಬರ್ (ಹಿ.ಸ.):
ಯುರೋಪಿಯನ್ ಒಕ್ಕೂಟದ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇಟಲಿಯ ಚಿನೂಕ್ ಸೇನಾ ಹೆಲಿಕಾಪ್ಟರ್ ಬೋಸ್ನಿಯಾದಲ್ಲಿ ಪತನಗೊಂಡಿದ್ದು, ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.
ಗುರುವಾರ ಸಂಜೆ ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿ ನಿಯಮಿತ ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ಯುರೋಪಿಯನ್ ಒಕ್ಕೂಟದ ಪಡೆ ತಿಳಿಸಿದೆ.
ಬೋಸ್ನಿಯಾ ಮತ್ತು ಹರ್ಜೆಗೋವಿನಾದ ಬಂಜಾ ಲುಕಾದಿಂದ ಪ್ರಕಟವಾಗುವ 'ಗ್ಲಾಸ್ ಸರ್ಪ್ಸ್ಕೆ' ಪತ್ರಿಕೆಯ ವರದಿಯ ಪ್ರಕಾರ, ಬ್ರಕೊ ಸಮೀಪದ ಗೋರಿಸ್ ವಲಯದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಮೃತಪಟ್ಟ ನಾಲ್ವರಲ್ಲಿ ಇಬ್ಬರು ಇಟಲಿ ಸಶಸ್ತ್ರ ಪಡೆಗಳ ಸಿಬ್ಬಂದಿಯಾಗಿದ್ದು, ಉಳಿದ ಇಬ್ಬರು ಇಟಲಿ ಸೇನಾ ರೆಡ್ಕ್ರಾಸ್ನ ಸದಸ್ಯರಾಗಿದ್ದಾರೆ.
ಗಾಯಗೊಂಡ 11 ಮಂದಿಯಲ್ಲಿ ಇಬ್ಬರನ್ನು ತುಜ್ಲಾ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಉಳಿದ ಒಂಬತ್ತು ಮಂದಿಗೆ ಬ್ರಕೊದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಯುರೋಪಿಯನ್ ಒಕ್ಕೂಟದ ಪಡೆ ತಿಳಿಸಿದೆ.
ಘಟನೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬರುವವರೆಗೆ ತಪ್ಪು ಹಾಗೂ ಆಧಾರರಹಿತ ಮಾಹಿತಿಗಳನ್ನು ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಮೃತಪಟ್ಟ ಯೋಧರ ಕುಟುಂಬಸ್ಥರು, ಸ್ನೇಹಿತರು ಹಾಗೂ ಬಂಧುಗಳಿಗೆ ಪಡೆ ತೀವ್ರ ಸಂತಾಪ ಸೂಚಿಸಿದೆ.
ಅಪಘಾತದ ಮಾಹಿತಿ ಲಭಿಸಿದ ತಕ್ಷಣ ಬೋಸ್ನಿಯಾ ಮತ್ತು ಹರ್ಜೆಗೋವಿನಾದ ಸ್ಥಳೀಯ ತುರ್ತು ವೈದ್ಯಕೀಯ ಸೇವೆಗಳ ಸಿಬ್ಬಂದಿ ಹಾಗೂ ಯುರೋಪಿಯನ್ ಒಕ್ಕೂಟದ ಪಡೆಯ ಸಂಪರ್ಕ ಮತ್ತು ಮೇಲ್ವಿಚಾರಣಾ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಬ್ರಕೊದ ವೈದ್ಯಕೀಯ ಕೇಂದ್ರಗಳಿಗೆ ಸಾಗಿಸಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಘಟನೆಯಲ್ಲಿ ಯಾವುದೇ ನಾಗರಿಕರಿಗೆ ಗಾಯವಾಗಿಲ್ಲ. ನಾಗರಿಕರ ಮೂಲಸೌಕರ್ಯ, ಆಸ್ತಿಪಾಸ್ತಿ ಅಥವಾ ವಾಹನಗಳಿಗೆ ಹಾನಿಯಾಗಿಲ್ಲ ಎಂದು ಯುರೋಪಿಯನ್ ಒಕ್ಕೂಟದ ಪಡೆಯ ಸಾರ್ವಜನಿಕ ಸಂಪರ್ಕ ಕಚೇರಿ ಸ್ಪಷ್ಟಪಡಿಸಿದೆ.
ಇಟಲಿ ಸರ್ಕಾರವು ಮೃತಪಟ್ಟವರ ಕುಟುಂಬಗಳಿಗೆ ಮಾಹಿತಿ ನೀಡಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಮತ್ತು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಟಲಿ ಸರ್ಕಾರದ ಸಂಪೂರ್ಣ ಬೆಂಬಲ ಮತ್ತು ಒಗ್ಗಟ್ಟನ್ನು ಪ್ರಕಟಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.