ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಅ.10ರಂದು ಬೆಂಗಳೂರಿನಲ್ಲಿ ಧರಣಿ
ಬೇಡ್ತಿ–ಅಘನಾಶಿನಿ ನದಿ ತಿರುವು ಹಾಗೂ ಜೋಡಣೆ ಯೋಜನೆ ವಿರೋಧಿಸಿ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ ಆಯೋಜಿಸಲಾಗಿದೆ. ಪರಿಸರ, ನದಿಗಳ ಸ್ವಾಭಾವಿಕ ಹರಿವು ಮತ್ತು ಸ್ಥಳೀಯ ಜನಜೀವನ ರಕ್ಷಣೆಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ.
ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಅ.10ರಂದು ಬೆಂಗಳೂರಿನಲ್ಲಿ ಧರಣಿ


ಬೆಂಗಳೂರು, 03 ಅಕ್ಟೋಬರ್ (ಹಿ.ಸ.):

ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ–ಅಘನಾಶಿನಿ ನದಿ ತಿರುವು ಹಾಗೂ ಜೋಡಣೆ ಯೋಜನೆ ವಿರೋಧಿಸಿ ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ.

ಬೆಳಿಗ್ಗೆ 10 ಗಂಟೆಯಿಂದ ಧರಣಿ ನಡೆಯಲಿದ್ದು, ರೈತರು, ಪರಿಸರ ಹೋರಾಟಗಾರರು, ಮಹಿಳಾ ಸಂಘಟನೆಗಳು, ಯುವಜನರು ಸೇರಿದಂತೆ ವಿವಿಧ ವರ್ಗದವರು ಭಾಗವಹಿಸುವಂತೆ ‘ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ’ ಮನವಿ ಮಾಡಿದೆ.

ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಉತ್ತರ ಕನ್ನಡ ಹಾಗೂ ಕರಾವಳಿ ಭಾಗದ ಜನಜೀವನಕ್ಕೆ ಪ್ರಮುಖವಾಗಿರುವ ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳ ಸ್ವಾಭಾವಿಕ ಹರಿವನ್ನು ಸಂರಕ್ಷಿಸುವುದು ಧರಣಿಯ ಪ್ರಮುಖ ಉದ್ದೇಶವಾಗಿದೆ.

ನದಿ ತಿರುವು ಮತ್ತು ಜೋಡಣೆ ಯೋಜನೆಯಿಂದ ಪಶ್ಚಿಮ ಘಟ್ಟದ ಪರಿಸರ, ಜೀವವೈವಿಧ್ಯ, ಕೃಷಿ ಹಾಗೂ ಮೀನುಗಾರಿಕೆ ಮೇಲೆ ಪರಿಣಾಮ ಬೀರಬಹುದು ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಸುಮಾರು ₹10 ಸಾವಿರ ಕೋಟಿ ವೆಚ್ಚದ ಯೋಜನೆಯಲ್ಲಿ ಬೇಡ್ತಿ ನದಿಯ ನೀರನ್ನು ವರದಾ ನದಿಗೆ ಹರಿಸುವ ಉದ್ದೇಶವಿದೆ. ಯೋಜನೆಯಿಂದ ಹಾವೇರಿ, ಗದಗ, ಕೊಪ್ಪಳ ಹಾಗೂ ರಾಯಚೂರು ಭಾಗಗಳಿಗೆ ಕುಡಿಯುವ ಮತ್ತು ಕೃಷಿ ನೀರು ದೊರೆಯಲಿದೆ ಎಂಬುದು ಯೋಜನೆ ಪ್ರತಿಪಾದಕರ ವಾದವಾಗಿದೆ.

ಆದರೆ, ಯೋಜನೆಯಿಂದ ಅರಣ್ಯ, ನದಿಯ ಪರಿಸರ ವ್ಯವಸ್ಥೆ ಮತ್ತು ಸ್ಥಳೀಯ ಜನಜೀವನಕ್ಕೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

“ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳ ಸ್ವಾಭಾವಿಕ ಹರಿವಿಗೆ ಧಕ್ಕೆ ತರುವ ಯೋಜನೆಗಳನ್ನು ತಡೆಯಲು ಜನಾಂದೋಲನ ಅಗತ್ಯ.

ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕನ್ನಡ, ಮಲೆನಾಡು ಹಾಗೂ ಕರಾವಳಿ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿಯಲ್ಲಿ ಭಾಗವಹಿಸಬೇಕು” ಎಂದು ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande