ಬಳ್ಳಾರಿಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ: ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣ ಹೊರತೆಗೆದ ವೈದ್ಯರು
ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಕಾಣಿಸಿಕೊಳ್ಳುವ ಅಪರೂಪದ ಜನ್ಮಜಾತ ಸಮಸ್ಯೆ ಪತ್ತೆ; ಶಸ್ತ್ರಚಿಕಿತ್ಸೆ ಬಳಿಕ ಮಗು ಆರೋಗ್ಯ
ಬಳ್ಳಾರಿ:ಎರಡು ತಿಂಗಳ ಕಂದಮ್ಮನ ಹೊಟ್ಟೆಯೊಳಗೆ ಭ್ರೂಣ ಪತ್ತೆ


ಬಳ್ಳಾರಿ:ಎರಡು ತಿಂಗಳ ಕಂದಮ್ಮನ ಹೊಟ್ಟೆಯೊಳಗೆ ಭ್ರೂಣ ಪತ್ತೆ


ಬಳ್ಳಾರಿ, 29 ಅಕ್ಟೋಬರ್ (ಹಿ.ಸ.)

ವೈದ್ಯಕೀಯ ಲೋಕದಲ್ಲಿ ಅತ್ಯಂತ ಅಪರೂಪವೆಂದು ಪರಿಗಣಿಸಲಾದ ‘ಭ್ರೂಣದೊಳಗಿನ ಭ್ರೂಣ’ ಸಮಸ್ಯೆಗೆ ಬಳ್ಳಾರಿಯ ಬಿಎಂಸಿಆರ್ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಪರಿಹಾರ ಒದಗಿಸಿದೆ. ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಮತ್ತೊಂದು ಭ್ರೂಣವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದ್ದು, ಮಗು ಆರೋಗ್ಯವಾಗಿದೆ.

ಗರ್ಭಾವಸ್ಥೆಯಲ್ಲೇ ಸಮಸ್ಯೆ ಪತ್ತೆ

ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಆಸ್ಪತ್ರೆಯ ವಿಕಿರಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾಶಿವಗೌಡ ಅವರ ನೇತೃತ್ವದ ತಂಡ ಈ ಅಪರೂಪದ ಸಮಸ್ಯೆಯನ್ನು ಪತ್ತೆಹಚ್ಚಿತ್ತು. ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಜನನದ ನಂತರ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ನಡೆಸಿ, ಸೂಕ್ತ ಯೋಜನೆಯೊಂದಿಗೆ ಶಸ್ತ್ರಚಿಕಿತ್ಸೆ ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ಡಾ. ಸಂಜೀವ್ ಜೋಶಿ, ಡಾ. ರಾಮ್ ಮೋಹನ್ ಮತ್ತು ಡಾ. ಅಶ್ವಿತಾ ಭಾಗವಹಿಸಿದ್ದರು.

ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಬಾಲಸುಬ್ರಹ್ಮಣ್ಯ ಅವರೊಂದಿಗೆ ಡಾ. ಪರಿಮಳಾ, ಡಾ. ನಿಜಾಮುದ್ದೀನ್, ಡಾ. ರಘುನಾಥ್ ಮತ್ತು ಡಾ. ಮಧುಶ್ರೀ ಕಾರ್ಯನಿರ್ವಹಿಸಿದರು. ಶುಶ್ರೂಷಕರಾದ ಪುಷ್ಪಲತಾ ಹಾಗೂ ಸಲೀಂ ಪಾಷಾ ಕೂಡ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಸಹಕರಿಸಿದರು.

ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಕಾಣಿಸುವ ಸಮಸ್ಯೆ

‘ಭ್ರೂಣದೊಳಗಿನ ಭ್ರೂಣ’ ಎಂಬುದು ತಾಯಿಯ ಗರ್ಭದಲ್ಲಿನ ಅವಳಿ ಭ್ರೂಣಗಳ ಬೆಳವಣಿಗೆಯ ಸಂದರ್ಭದಲ್ಲಿ ಒಂದು ಭ್ರೂಣ ಮತ್ತೊಂದರ ದೇಹದೊಳಗೆ ಸೇರಿಕೊಳ್ಳುವುದರಿಂದ ಉಂಟಾಗುವ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದೆ. ಸುಮಾರು ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಇಂತಹ ಪ್ರಕರಣ ಕಂಡುಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ಗರ್ಭಾವಸ್ಥೆಯಲ್ಲಿಯೇ ಪತ್ತೆಹಚ್ಚಿ, ಜನನದ ನಂತರ ಸೂಕ್ತ ತಪಾಸಣೆ ಹಾಗೂ ಯೋಜಿತ ಶಸ್ತ್ರಚಿಕಿತ್ಸೆ ನಡೆಸುವುದರಿಂದ ಮಗುವಿಗೆ ಅಗತ್ಯ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಈ ಕುರಿತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗಡ್ಡಿ ದಿವಾಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಇಂತಹ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿಯೇ ಗಂಡು ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಬೆಳೆಯುತ್ತಿರುವುದು ಪತ್ತೆಯಾಗಿದ್ದರಿಂದ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಯಿತು. ಶಸ್ತ್ರಚಿಕಿತ್ಸೆಯ ನಂತರ ಮಗು ಆರೋಗ್ಯವಾಗಿದೆ” ಎಂದು ತಿಳಿಸಿದ್ದಾರೆ.

22 ವರ್ಷಗಳಿಂದ ಸುಧಾರಿತ ಶಸ್ತ್ರಚಿಕಿತ್ಸೆ

ಡಾ. ಗಡ್ಡಿ ದಿವಾಕರ್ ಅವರ ನೇತೃತ್ವದಲ್ಲಿ ಕಳೆದ 22 ವರ್ಷಗಳಿಂದ ಸುಧಾರಿತ ಮಕ್ಕಳ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. 2008ರಲ್ಲಿಯೂ ಇದೇ ರೀತಿಯ ಪ್ರಕರಣವೊಂದನ್ನು ವಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಿಭಾಯಿಸಲಾಗಿತ್ತು.

ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿದ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ. ಮರಿರಾಜ್, ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಎಂ., ವೈದ್ಯಕೀಯ ಅಧೀಕ್ಷಕ ಡಾ. ಅರುಣ್, ಮುಖ್ಯ ಆಡಳಿತಾಧಿಕಾರಿ ಡಾ. ನಯನಾ ಹಾಗೂ ಹಣಕಾಸು ಸಲಹೆಗಾರ ಮಹೇಶ್ ಅವರಿಗೆ ವೈದ್ಯರ ತಂಡ ಕೃತಜ್ಞತೆ ಸಲ್ಲಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande