
ನವದೆಹಲಿ, 29 ಅಕ್ಟೋಬರ್ (ಹಿ.ಸ.):
ಹಬ್ಬಗಳ ಸಂದರ್ಭದಲ್ಲಿ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ನಡೆಸುವವರ ವಿರುದ್ಧ ದೆಹಲಿ ಸರ್ಕಾರದ ಕಾರ್ಯಾಚರಣೆ ಮುಂದುವರಿದಿದೆ. ಆಹಾರ ಸುರಕ್ಷತಾ ಇಲಾಖೆಯ ತಂಡಗಳು ಬುಧವಾರ ದೆಹಲಿಯ ಮೂರು ಪ್ರದೇಶಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಒಟ್ಟು 948.9 ಲೀಟರ್ ತುಪ್ಪವನ್ನು ವಶಪಡಿಸಿಕೊಂಡಿವೆ.
ದಕ್ಷಿಣ-ಪೂರ್ವ ದೆಹಲಿಯ ಭೋಗಲ್ ಮಾರುಕಟ್ಟೆ, ದಕ್ಷಿಣ-ಪಶ್ಚಿಮ ದೆಹಲಿಯ ನಜಫ್ಗಢ ಮಾರುಕಟ್ಟೆ ಮತ್ತು ಈಶಾನ್ಯ ದೆಹಲಿಯ ಶಿವ ವಿಹಾರದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಈ ಪೈಕಿ ಭೋಗಲ್ ಮಾರುಕಟ್ಟೆಯಲ್ಲಿ 389.9 ಲೀಟರ್, ನಜಫ್ಗಢ ಮಾರುಕಟ್ಟೆಯಲ್ಲಿ 338 ಲೀಟರ್ ಹಾಗೂ ಶಿವ ವಿಹಾರದಲ್ಲಿ 221 ಲೀಟರ್ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ.
ಭೋಗಲ್ ಮತ್ತು ನಜಫ್ಗಢ ಮಾರುಕಟ್ಟೆಗಳಲ್ಲಿ ತುಪ್ಪದ ಒಟ್ಟು 15 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಶಿವ ವಿಹಾರದಲ್ಲಿ ದೆಹಲಿ ಪೊಲೀಸರ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಯೋಗಾಲಯದ ವರದಿ ಆಧರಿಸಿ ಮುಂದಿನ ಕ್ರಮ
ವಶಪಡಿಸಿಕೊಂಡ ತುಪ್ಪದ ಮಾದರಿಗಳನ್ನು ನಿಗದಿತ ಆಹಾರ ಸುರಕ್ಷತಾ ಮಾನದಂಡಗಳ ಪ್ರಕಾರ ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ವರದಿಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಗುರುವಾರ ಈ ಕುರಿತು ಪ್ರತಿಕ್ರಿಯಿಸಿ, ಆಹಾರ ಸುರಕ್ಷತಾ ಇಲಾಖೆಯ ಪರಿಶೀಲನಾ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದಿಂದ ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು. ಅಕ್ರಮಗಳನ್ನು ತ್ವರಿತವಾಗಿ ಪತ್ತೆಹಚ್ಚಿ, ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ತಿಳಿಸಿದರು.
ಕಲಬೆರಕೆ ವಿರುದ್ಧ ವರ್ಷವಿಡೀ ಕಾರ್ಯಾಚರಣೆ
ಆಹಾರ ಪದಾರ್ಥಗಳ ಗುಣಮಟ್ಟವನ್ನು ಖಾತರಿಪಡಿಸುವುದು ಮತ್ತು ಕಲಬೆರಕೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಮಾದರಿಗಳ ಪರೀಕ್ಷೆಯನ್ನು ತ್ವರಿತಗೊಳಿಸಲು ತಂತ್ರಜ್ಞಾನದ ಬಳಕೆ ಹೆಚ್ಚಿಸಲಾಗುತ್ತಿದ್ದು, ಅಗತ್ಯಬಿದ್ದರೆ ಇತರ ಇಲಾಖೆಗಳ ಸಿಬ್ಬಂದಿಯನ್ನೂ ನಿಯೋಜಿಸಿ ತಪಾಸಣಾ ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಕಲಬೆರಕೆ ಪ್ರಕರಣಗಳಲ್ಲಿ ತಪ್ಪಿತಸ್ಥರು ಯಾರೇ ಆಗಿರಲಿ, ಹೆಸರಾಂತ ಕಂಪನಿಗಳಾಗಿದ್ದರೂ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶೀಘ್ರದಲ್ಲೇ ವಿಶೇಷ ಅಭಿಯಾನ ಆರಂಭಿಸಲಾಗುವುದು ಎಂದರು.
ಕಲಬೆರಕೆ ವಿರುದ್ಧದ ಕ್ರಮಗಳು ಹಬ್ಬದ ಅವಧಿಗೆ ಮಾತ್ರ ಸೀಮಿತವಾಗದೆ ವರ್ಷವಿಡೀ ಮುಂದುವರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದರು.
ದೂರು ನೀಡಲು ಸಹಾಯವಾಣಿ
ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ಕಳಪೆ ಗುಣಮಟ್ಟ ಅಥವಾ ಅವಧಿ ಮುಗಿದ ಉತ್ಪನ್ನಗಳ ಮಾರಾಟ ಕಂಡುಬಂದರೆ ಇಲಾಖೆಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ದೂರು ಸಲ್ಲಿಸಲು ಆಹಾರ ಸುರಕ್ಷತಾ ಇಲಾಖೆಯ 1800-11-3921 ಸಹಾಯವಾಣಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
ಆಹಾರ ಪದಾರ್ಥಗಳ ಶುದ್ಧತೆ ಕೇವಲ ನಿಯಮಗಳ ಪಾಲನೆಯ ವಿಷಯವಲ್ಲ; ಅದು ಪ್ರತಿಯೊಬ್ಬ ನಾಗರಿಕನ ಆರೋಗ್ಯ, ವಿಶ್ವಾಸ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಚಾರವಾಗಿದೆ. ಸಾರ್ವಜನಿಕರಿಗೆ ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಆಹಾರ ಪದಾರ್ಥಗಳು ದೊರೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.