ಆಪರೇಷನ್ ಸಿಂಧೂರದಿಂದ ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ಮತ್ತಷ್ಟು ಬಲಿಷ್ಠ: ರಾಜನಾಥ್ ಸಿಂಗ್
ನವದೆಹಲಿ, 29 ಅಕ್ಟೋಬರ್ (ಹಿ.ಸ.): ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ಕೇವಲ ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತವಾಗಿಲ್ಲ. ದಶಕಗಳ ಕಾಲದ ನೈಜ ಅನುಭವ ಮತ್ತು ಯಶಸ್ವಿ ಕಾರ್ಯಾಚರಣೆಗಳಿಂದ ಈ ಹೋರಾಟ ಮತ್ತಷ್ಟು ಬಲಿಷ್ಠವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಫಿಲಿಪ್ಪೀನ್ಸ್‌ನ ಸೆಬು ನ
आसियान रक्षा मंत्रियों की बैठक को संबोधित करते राजनाथ सिंह


ನವದೆಹಲಿ, 29 ಅಕ್ಟೋಬರ್ (ಹಿ.ಸ.):

ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ಕೇವಲ ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತವಾಗಿಲ್ಲ. ದಶಕಗಳ ಕಾಲದ ನೈಜ ಅನುಭವ ಮತ್ತು ಯಶಸ್ವಿ ಕಾರ್ಯಾಚರಣೆಗಳಿಂದ ಈ ಹೋರಾಟ ಮತ್ತಷ್ಟು ಬಲಿಷ್ಠವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಫಿಲಿಪ್ಪೀನ್ಸ್‌ನ ಸೆಬು ನಗರದಲ್ಲಿ ನಡೆದ 13ನೇ ಆಸಿಯಾನ್ ರಕ್ಷಣಾ ಸಚಿವರ ಸಭೆ–ಪ್ಲಸ್‌ನಲ್ಲಿ ಮಾತನಾಡಿದ ಅವರು, ‘ಆಪರೇಷನ್ ಸಿಂಧೂರ’ ಭಯೋತ್ಪಾದಕ ಮೂಲಸೌಕರ್ಯವನ್ನು ಧ್ವಂಸಗೊಳಿಸುವ ಮೂಲಕ ಭಯೋತ್ಪಾದನೆ ವಿರುದ್ಧದ ಭಾರತದ ದೃಢ ಸಂಕಲ್ಪವನ್ನು ಜಗತ್ತಿಗೆ ತೋರಿಸಿದೆ ಎಂದು ತಿಳಿಸಿದರು. ಈ ಅನುಭವವನ್ನು ಪಾಲುದಾರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವ ಮೂಲಕ ಸುರಕ್ಷಿತ, ಸ್ಥಿರ ಮತ್ತು ಶಾಂತಿಯುತ ಹಿಂದೂ ಮಹಾಸಾಗರ–ಪೆಸಿಫಿಕ್ ವಲಯ ನಿರ್ಮಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದರು.

ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ಯುವಜನರು ಎರಡೂ ಕಡೆಯ ಬಹುದೊಡ್ಡ ಶಕ್ತಿಯಾಗಿದ್ದಾರೆ. ಈ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಳ್ಳಲು ಜನರ ನಡುವಿನ ಸಂಪರ್ಕ, ಡಿಜಿಟಲ್ ನಾವೀನ್ಯತೆ ಮತ್ತು ಸಾಮರ್ಥ್ಯ ವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಕ್ಷಣಾ ಕ್ಷೇತ್ರದಲ್ಲಿ ವಿಶೇಷ ‘ಯುವ ಸೇತು’ ಸ್ಥಾಪಿಸುವ ಪ್ರಸ್ತಾವನೆಯನ್ನು ಭಾರತ ಮುಂದಿಟ್ಟಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಯುವಜನರನ್ನು ಸಬಲೀಕರಣಗೊಳಿಸುವ ಮೂಲಕ ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಹಿಂದೂ ಮಹಾಸಾಗರ–ಪೆಸಿಫಿಕ್ ವಲಯದ ಭವಿಷ್ಯವನ್ನು ಮತ್ತಷ್ಟು ಬಲಪಡಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

‘ಸರ್ವೇ ಭವಂತು ಸುಖಿನಃ’ ಎಂಬ ಆಶಯ ಭಾರತದ ರಕ್ಷಣಾ ಮತ್ತು ವಿದೇಶಾಂಗ ನೀತಿಯ ಮೂಲಾಧಾರವಾಗಿದೆ. ‘ನಮ್ಮ ಭವಿಷ್ಯವನ್ನು ಒಟ್ಟಾಗಿ ಮುನ್ನಡೆಸುವುದು’ ಎಂಬ ಆಸಿಯಾನ್ ರಕ್ಷಣಾ ಸಚಿವರ ಸಭೆಯ ಧ್ಯೇಯವಾಕ್ಯವು ಹಂಚಿಕೆಯ ಹೊಣೆಗಾರಿಕೆ, ಪರಸ್ಪರ ವಿಶ್ವಾಸ ಮತ್ತು ಸಹಕಾರದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.

ಮುಕ್ತ, ಎಲ್ಲರನ್ನೂ ಒಳಗೊಂಡ ಮತ್ತು ನಿಯಮಾಧಾರಿತ ಹಿಂದೂ ಮಹಾಸಾಗರ–ಪೆಸಿಫಿಕ್ ವಲಯ ನಿರ್ಮಾಣಕ್ಕೆ ಭಾರತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಆಸಿಯಾನ್‌ನ ಪ್ರಮುಖ ಪಾತ್ರ ಹಾಗೂ ಅದರೊಂದಿಗೆ ಭಾರತದ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಭಾರತೀಯ ನೌಕಾಪಡೆಯು ದಶಕಗಳಿಂದ ಜಾಗತಿಕ ಸಾಗರ ವ್ಯಾಪಾರ ಮತ್ತು ಪ್ರಮುಖ ಸಮುದ್ರ ಸಂಚಾರ ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಿ ಭಾರತ, ಮುಕ್ತ ನೌಕಾಯಾನ ಮತ್ತು ಅಂತಾರಾಷ್ಟ್ರೀಯ ಸಾಗರ ಕಾನೂನಿನ ಗೌರವದೊಂದಿಗೆ ಸುರಕ್ಷಿತ ಹಾಗೂ ಸ್ಥಿರ ಹಿಂದೂ ಮಹಾಸಾಗರ–ಪೆಸಿಫಿಕ್ ವಲಯ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆಯ ಎಲ್ಲ ರೂಪಗಳನ್ನು ನಿರ್ಮೂಲನೆ ಮಾಡುವ ಮತ್ತು ಸಾಮೂಹಿಕ ಪ್ರಾದೇಶಿಕ ಭದ್ರತೆಯನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ರಾಜನಾಥ್ ಸಿಂಗ್ ಪುನರುಚ್ಚರಿಸಿದರು. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾರತದ ಅನುಭವ ತರಗತಿಗಳಿಗೆ ಸೀಮಿತವಾದ ಸೈದ್ಧಾಂತಿಕ ಜ್ಞಾನವಲ್ಲ. ಗಡಿಯಾಚೆಗಿನ ಸಂಕೀರ್ಣ ಭದ್ರತಾ ಸವಾಲುಗಳನ್ನು ದಶಕಗಳ ಕಾಲ ನೇರವಾಗಿ ಎದುರಿಸುವ ಮೂಲಕ ನೆಲಮಟ್ಟದಲ್ಲಿ ಗಳಿಸಿದ ಅನುಭವವಾಗಿದೆ ಎಂದು ವಿವರಿಸಿದರು.

ಭಾರತದ ಪ್ರತಿಯೊಂದು ಕಾರ್ಯತಂತ್ರವನ್ನೂ ನೈಜ ಪರಿಸ್ಥಿತಿಗಳಲ್ಲಿ ನಡೆದ ಕಾರ್ಯಾಚರಣೆಗಳ ಮೂಲಕ ಪರೀಕ್ಷಿಸಲಾಗಿದ್ದು, ಅವುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿ, ಅವುಗಳ ಉಪಯುಕ್ತತೆಯನ್ನು ಸಾಬೀತುಪಡಿಸಲಾಗಿದೆ. ‘ಆಪರೇಷನ್ ಸಿಂಧೂರ’ ಈ ಕಾರ್ಯತಂತ್ರದ ನಿರ್ಣಾಯಕ ಪ್ರದರ್ಶನವಾಗಿತ್ತು. ಈ ಕಾರ್ಯಾಚರಣೆಯ ಮೂಲಕ ಭಾರತ ಭಯೋತ್ಪಾದಕ ಮೂಲಸೌಕರ್ಯವನ್ನು ಧ್ವಂಸಗೊಳಿಸಿದ್ದು, ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ ಎಂದು ಹೇಳಿದರು.

ಆಸಿಯಾನ್‌ನೊಂದಿಗಿನ ಭಾರತದ ಕಾರ್ಯತಂತ್ರದ ಸಂಬಂಧಗಳು ದೀರ್ಘಕಾಲೀನವಾಗಿದ್ದು, ಹಂಚಿಕೆಯ ಹಿತಾಸಕ್ತಿಗಳು, ಪರಸ್ಪರ ಗೌರವ ಮತ್ತು ಪ್ರಾಯೋಗಿಕ ಸಹಕಾರವನ್ನು ಆಧರಿಸಿವೆ ಎಂದು ರಕ್ಷಣಾ ಸಚಿವರು ತಿಳಿಸಿದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೌಲಾಲಂಪುರದಲ್ಲಿ ನಡೆದ ಎರಡನೇ ಆಸಿಯಾನ್–ಭಾರತ ರಕ್ಷಣಾ ಸಚಿವರ ಅನೌಪಚಾರಿಕ ಸಭೆಯನ್ನು ಉಲ್ಲೇಖಿಸಿದ ಅವರು, ಆಸಿಯಾನ್–ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ರಕ್ಷಣಾ ಮತ್ತು ಭದ್ರತಾ ಆಯಾಮಗಳನ್ನು ಬಲಪಡಿಸುವ ಹಾಗೂ 2026ರಿಂದ 2030ರವರೆಗಿನ ಕಾರ್ಯಯೋಜನೆಯನ್ನು ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಲಾಯಿತು ಎಂದರು.

ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ಯುವಜನರ ಜನಸಂಖ್ಯಾ ಸ್ವರೂಪ ಹಾಗೂ ಆಕಾಂಕ್ಷೆಗಳಲ್ಲಿನ ಸಾಮ್ಯತೆಗಳು ಪ್ರಾದೇಶಿಕ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಬಲವಾದ ಆಧಾರ ಒದಗಿಸುತ್ತವೆ. ಸಾಂಸ್ಥಿಕ ಮಟ್ಟದಲ್ಲಿ ಜನರ ನಡುವಿನ ಸಂಪರ್ಕವನ್ನು ವಿಸ್ತರಿಸುವುದು, ಡಿಜಿಟಲ್ ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಸಾಮರ್ಥ್ಯ ವೃದ್ಧಿಗೆ ನೆರವಾಗುವುದು ಪ್ರಸ್ತಾವಿತ ಯುವ ಸೇತುವೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಹೇಳಿದರು.

ಯುವಜನರಿಗೆ ಸಬಲೀಕರಣದ ಅವಕಾಶಗಳನ್ನು ಒದಗಿಸಿ, ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಕೊಡುಗೆ ನೀಡಲು ಪ್ರೋತ್ಸಾಹಿಸುವುದು ‘ಯುವಜನ, ಶಾಂತಿ ಮತ್ತು ಭದ್ರತೆ’ ಎಂಬ ಆಶಯಕ್ಕೆ ಅನುಗುಣವಾಗಿದೆ. ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಹಿಂದೂ ಮಹಾಸಾಗರ–ಪೆಸಿಫಿಕ್ ವಲಯ ನಿರ್ಮಾಣಕ್ಕೆ ಇದು ಅಗತ್ಯವಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande