
ದಾವಣಗೆರೆ, 27 ಅಕ್ಟೋಬರ್ (ಹಿ.ಸ.):
ದಸರಾ ಶೋಭಾಯಾತ್ರೆ ವೇಳೆ ದೇಶಭಕ್ತಿ ಹಾಗೂ ದೈವಭಕ್ತಿಯ ಹಾಡುಗಳನ್ನು ಪ್ರಸಾರ ಮಾಡಲು ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಬಿಜೆಪಿ ಮುಖಂಡರು, ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸಿ, ಹಿಂದೂ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ದಸರಾ ಶೋಭಾಯಾತ್ರೆ ಸಂದರ್ಭದಲ್ಲಿ ‘ಬನಾಯೇಂಗೆ ಮಂದಿರ್’, ‘ರಾಮ ಮಂದಿರ್’, ‘ವಂದೇ ಮಾತರಂ’, ‘ಹಿಂದೂಸ್ಥಾನ್ ಗೊತ್ತೇನೋ’ ಹಾಗೂ ‘ಚೋರರಿಗೊಂದು ಕಾಲ’ ಸೇರಿದಂತೆ ಹಲವು ಹಾಡುಗಳನ್ನು ಪ್ರಸಾರ ಮಾಡದಂತೆ ಪೊಲೀಸರು ತಡೆದಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶವಿದೆ ಎಂದು ಹೇಳಿ ಹಾಡುಗಳನ್ನು ಹಾಕಲು ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಮುಖಂಡರು ದೂರಿದರು.
“ರಾಮನ ಮೇಲಿನ ಭಕ್ತಿಯಿಂದ ರಾಮಮಂದಿರ ನಿರ್ಮಾಣವಾಗಿದೆ. ರಾಮ ನಮ್ಮ ಆರಾಧ್ಯ ದೈವ. ಅವರ ಕುರಿತಾದ ಹಾಡುಗಳನ್ನು ಪ್ರಸಾರ ಮಾಡುವುದು ತಪ್ಪೇ? ಪ್ರತಿ ವರ್ಷ ದಸರಾ ಹಾಗೂ ಗಣೇಶೋತ್ಸವದ ಮೆರವಣಿಗೆಗಳಲ್ಲಿ ದೇಶಭಕ್ತಿ ಮತ್ತು ದೈವಭಕ್ತಿಯ ಹಾಡುಗಳ ಮೂಲಕ ಭಕ್ತಿಯ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಈ ಬಾರಿ ಪೊಲೀಸ್ ವರಿಷ್ಠಾಧಿಕಾರಿಗಳು ಅದಕ್ಕೆ ತಡೆ ಒಡ್ಡಿದ್ದಾರೆ. ಎಷ್ಟೇ ಮನವಿ ಮಾಡಿದರೂ ಹಾಡುಗಳನ್ನು ಪ್ರಸಾರ ಮಾಡಲು ಅವಕಾಶ ನೀಡಲಿಲ್ಲ” ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ಗಣಪತಿ ಮೆರವಣಿಗೆಗಳಲ್ಲಿಯೂ ಇದೇ ರೀತಿಯ ನಿರ್ಬಂಧ ವಿಧಿಸಲಾಗಿದೆ. ಮೆರವಣಿಗೆಗಳಲ್ಲಿ ಡಿಜೆಗಳಲ್ಲಿ ಯಾವ ಹಾಡುಗಳನ್ನು ಪ್ರಸಾರ ಮಾಡಬೇಕು ಎಂಬುದನ್ನು ಪೊಲೀಸರೇ ನಿರ್ಧರಿಸಿದ್ದಾರೆ ಎಂದು ಅವರು ಆರೋಪಿಸಿದರು.
ಪೊಲೀಸ್ ಇಲಾಖೆಗೆ ಬಿಜೆಪಿ ಎಚ್ಚರಿಕೆ
“ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕಾನೂನು ರಕ್ಷಣೆಯ ಕಾರ್ಯದಲ್ಲಿ ಪೊಲೀಸರೊಂದಿಗೆ ನಾವು ಸಹಕರಿಸುತ್ತೇವೆ. ಆದರೆ ಪೊಲೀಸ್ ರಾಜ್ಯದ ರೀತಿಯಲ್ಲಿ ವರ್ತಿಸಿ ದೌರ್ಜನ್ಯ ನಡೆಸುವುದನ್ನು ಸಹಿಸುವುದಿಲ್ಲ.
ಇಂತಹ ನಡೆ ಹಾಗೂ ಹಿಂದೂ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ಇದೇ ರೀತಿ ಮುಂದುವರಿದರೆ ಪೊಲೀಸ್ ಇಲಾಖೆಯ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ” ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.
ದೇಶಭಕ್ತಿ ಮತ್ತು ದೈವಭಕ್ತಿಯ ಅಭಿವ್ಯಕ್ತಿಗೆ ಅನಗತ್ಯ ನಿರ್ಬಂಧ ವಿಧಿಸಬಾರದು ಎಂದು ಆಗ್ರಹಿಸಿದ ಬಿಜೆಪಿ ಮುಖಂಡರು, ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R