
ಕೀವ್/ವಾಷಿಂಗ್ಟನ್, 24 ಅಕ್ಟೋಬರ್(ಹಿ.ಸ.):
ಅಮೆರಿಕದಲ್ಲಿ ಡೀಸೆಲ್ ಬೆಲೆ ಏರಿಕೆಗೆ ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ನಡೆಸುತ್ತಿರುವ ದಾಳಿಗಳೇ ಕಾರಣ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣ ಸುಳ್ಳು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಅಮೆರಿಕದಲ್ಲಿ ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದ ನೈಜ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಟ್ರಂಪ್ ಉಕ್ರೇನ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಇರಾನ್‌ಗೆ ಸಂಬಂಧಿಸಿದ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರ ಮಾರ್ಗದ ಸಂಚಾರಕ್ಕೆ ಉಂಟಾಗಿರುವ ಅಡಚಣೆಗಳು ಜಾಗತಿಕ ಇಂಧನ ಬಿಕ್ಕಟ್ಟಿನ ಪ್ರಮುಖ ಕಾರಣಗಳಾಗಿವೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ಸ್ಟೀವನ್ ಬಾರ್ಟ್ಲೆಟ್ ಅವರ ‘ದಿ ಡೈರಿ ಆಫ್ ಎ ಸಿಇಒ’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಝೆಲೆನ್‌ಸ್ಕಿ, ರಷ್ಯಾದಿಂದ ರಫ್ತಾಗುವ ಡೀಸೆಲ್ ಅಮೆರಿಕದ ಇಂಧನ ಬೆಲೆಗಳ ಮೇಲೆ ನೇರವಾಗಿ ಬೀರುವ ಪರಿಣಾಮ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ಅವರ ಹೇಳಿಕೆಗಳು ತಪ್ಪು ಮಾಹಿತಿಯಿಂದ ಕೂಡಿವೆ ಎಂದು ಟೀಕಿಸಿದ್ದಾರೆ.
ಇಂಧನ ಬೆಲೆಗಳ ಬಗ್ಗೆ ಅಮೆರಿಕ ಅಧ್ಯಕ್ಷರು ಅಷ್ಟೊಂದು ಕಾಳಜಿ ಹೊಂದಿದ್ದರೆ, ಅಮೆರಿಕದ ಕಂಪನಿಗಳು ಇತರ ದೇಶಗಳಿಗೆ ಇಂಧನ ರಫ್ತು ಮಾಡುವುದನ್ನು ಏಕೆ ಮುಂದುವರಿಸಿವೆ ಎಂದು ಅವರು ಪ್ರಶ್ನಿಸಿದ್ದಾರೆ. ಖಾಸಗಿ ವಲಯದ ಇಂಧನ ರಫ್ತಿನ ಮೇಲೆ ನಿರ್ಬಂಧ ವಿಧಿಸುವ ವಿಚಾರವೂ ಈ ಚರ್ಚೆಯ ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇರಾನ್ ಬಿಕ್ಕಟ್ಟಿನಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ
ಇರಾನ್‌ಗೆ ಸಂಬಂಧಿಸಿದ ಬಿಕ್ಕಟ್ಟಿನಿಂದ ಗಮನ ಬೇರೆಡೆ ಸೆಳೆಯಲು ಟ್ರಂಪ್ ಉಕ್ರೇನ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಪ್ರತಿಯೊಂದು ಸಮಸ್ಯೆಗೂ ಉಕ್ರೇನ್ ಅನ್ನು ಹೊಣೆ ಮಾಡಲಾಗುತ್ತಿದೆ. ದೇಶದ ನಾಯಕನಾಗಿರುವ ತಮ್ಮನ್ನೇ ವೈಯಕ್ತಿಕವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಇಂಧನ ಬಿಕ್ಕಟ್ಟಿನ ಪ್ರಮುಖ ಕೇಂದ್ರ ಹಾರ್ಮುಜ್ ಜಲಸಂಧಿಯಾಗಿದೆ ಎಂದು ಹೇಳಿದ ಅವರು, ಈ ಸಮುದ್ರ ಮಾರ್ಗವು ವಿಶ್ವದ ತೈಲ ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಹಡಗುಗಳ ಸಂಚಾರ ಹಾಗೂ ತೈಲ ರಫ್ತಿಗೆ ಅಡಚಣೆಯಾದರೆ ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯ ಮೇಲಿನ ಒತ್ತಡ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.
ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿ ನಿಲ್ಲಿಸಲು ಟ್ರಂಪ್ ಒತ್ತಾಯ
ಉಕ್ರೇನ್ ರಷ್ಯಾದ ತೈಲ ಸಂಸ್ಕರಣಾಗಾರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ನಡೆಸುತ್ತಿರುವ ದಾಳಿಗಳನ್ನು ನಿಲ್ಲಿಸುವಂತೆ ಟ್ರಂಪ್ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಇಂತಹ ದಾಳಿಗಳಿಂದ ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಯಾಗುವುದರ ಜೊತೆಗೆ ಬೆಲೆಗಳು ಏರಿಕೆಯಾಗಬಹುದು ಎಂಬುದು ಅವರ ವಾದವಾಗಿದೆ.
ಜಾಗತಿಕ ಇಂಧನ ಮಾರುಕಟ್ಟೆಗೆ ಉಕ್ರೇನ್ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗಿಂತ ಝೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸುವುದು ಹೆಚ್ಚು ಕಷ್ಟಕರವಾಗಿದೆ ಎಂದೂ ಹೇಳಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ಪ್ರಯತ್ನಗಳಿಗೆ ಅಡ್ಡಿಯಾಗದ ನಾಯಕತ್ವ ಉಕ್ರೇನ್‌ಗೆ ಅಗತ್ಯವಿದೆ ಎಂಬ ಸೂಚನೆಯನ್ನೂ ನೀಡಿದ್ದಾರೆ.
ಜಾಗತಿಕ ಇಂಧನ ಬಿಕ್ಕಟ್ಟಿನ ಪರಿಣಾಮ ತಗ್ಗಿಸುವ ಉದ್ದೇಶದಿಂದ ವಾಷಿಂಗ್ಟನ್ ರಷ್ಯಾದ ಡೀಸೆಲ್ ರಫ್ತಿನ ಮೇಲಿದ್ದ ಕೆಲವು ನಿರ್ಬಂಧಗಳಿಗೆ ತಾತ್ಕಾಲಿಕ ಸಡಿಲಿಕೆ ನೀಡಿತ್ತು. ಈ ಕ್ರಮವನ್ನು ಝೆಲೆನ್‌ಸ್ಕಿ ಟೀಕಿಸಿದ್ದು, ಇದು ದುರ್ಬಲ ನಿರ್ಧಾರ ಎಂದು ಹೇಳಿದ್ದಾರೆ.
ಡೀಸೆಲ್ ಪೂರೈಕೆ ಹೆಚ್ಚಿಸಲು ರಷ್ಯಾ ಒಪ್ಪಿಗೆ
ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ಡೀಸೆಲ್ ಪೂರೈಕೆಯನ್ನು ಹೆಚ್ಚಿಸಲು ರಷ್ಯಾ ಒಪ್ಪಿಗೆ ಸೂಚಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ತಕ್ಷಣವೇ ಮೂರು ಲಕ್ಷ ಟನ್‌ಗಳಿಗೂ ಅಧಿಕ ಡೀಸೆಲ್ ಪೂರೈಸುವುದರ ಜೊತೆಗೆ ನವೆಂಬರ್‌ನಲ್ಲಿ ಐದು ಲಕ್ಷ ಟನ್ ಮತ್ತು ನಂತರದ ಹಂತಗಳಲ್ಲಿ ಹೆಚ್ಚುವರಿ ಪೂರೈಕೆ ಮಾಡುವ ಯೋಜನೆಯನ್ನು ಮಾಸ್ಕೋ ತಿಳಿಸಿದೆ. ಮುಂದಿನ ಪೂರೈಕೆಯ ಪ್ರಮಾಣವು ತೈಲ ಸಂಸ್ಕರಣಾಗಾರಗಳ ಉತ್ಪಾದನಾ ಸಾಮರ್ಥ್ಯವನ್ನು ಅವಲಂಬಿಸಿರಲಿದೆ.
ಉಕ್ರೇನ್ ರಷ್ಯಾದ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಮುಂದುವರಿಸುತ್ತಿರುವುದರಿಂದ ಇಂಧನ ಪೂರೈಕೆಯ ಮೇಲಿನ ಒತ್ತಡ ಹೆಚ್ಚಾಗಿದೆ ಎಂಬುದು ರಷ್ಯಾದ ವಾದವಾಗಿದೆ. ಆದರೆ, ರಷ್ಯಾ ವಿರುದ್ಧದ ದಾಳಿಗಳು ಯುದ್ಧದ ಸಂದರ್ಭದಲ್ಲಿ ಉಕ್ರೇನ್ ಅನುಸರಿಸುತ್ತಿರುವ ಸೇನಾ ಕಾರ್ಯತಂತ್ರದ ಭಾಗವಾಗಿವೆ ಎಂದು ಕೀವ್ ಹೇಳಿದೆ.
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಕೂಡ ಜಾಗತಿಕ ಡೀಸೆಲ್ ಬಿಕ್ಕಟ್ಟನ್ನು ತಗ್ಗಿಸುವ ಪ್ರಯತ್ನಗಳಿಗೆ ಝೆಲೆನ್‌ಸ್ಕಿ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಷ್ಯಾದ ಇಂಧನ ಮೂಲಸೌಕರ್ಯಗಳ ಮೇಲಿನ ಉಕ್ರೇನ್ ದಾಳಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಮಾಸ್ಕೋದ ಅಭಿಪ್ರಾಯವಾಗಿದೆ.
ಅಮೆರಿಕದಲ್ಲಿ ಇಂಧನ ಬೆಲೆ ಏರಿಕೆ ರಾಜಕೀಯ ಸವಾಲು
ಅಮೆರಿಕದಲ್ಲಿ ಇಂಧನ ಬೆಲೆ ಏರಿಕೆ ಟ್ರಂಪ್ ಆಡಳಿತಕ್ಕೆ ಪ್ರಮುಖ ಆಂತರಿಕ ರಾಜಕೀಯ ಸವಾಲಾಗಿ ಪರಿಣಮಿಸಿದೆ. ಸೆಪ್ಟೆಂಬರ್‌ನಲ್ಲಿ ಅಮೆರಿಕದ ಕೆಲವು ಮಾರುಕಟ್ಟೆಗಳಲ್ಲಿ ಡೀಸೆಲ್ ಬೆಲೆ ಪ್ರತಿ ಗ್ಯಾಲನ್‌ಗೆ 6.50 ಡಾಲರ್‌ಗಿಂತ ಹೆಚ್ಚಾಗಿತ್ತು. ಕ್ಯಾಲಿಫೋರ್ನಿಯಾದ ಕೆಲವು ಪ್ರದೇಶಗಳಲ್ಲಿ ಬೆಲೆ ಎಂಟು ಡಾಲರ್‌ಗಳ ಗಡಿಯನ್ನು ದಾಟಿತ್ತು ಎಂದು ವರದಿ ತಿಳಿಸಿದೆ.
ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ ಚುನಾವಣೆಗಳ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆಯು ಟ್ರಂಪ್ ಆಡಳಿತದ ಮೇಲಿನ ರಾಜಕೀಯ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ರಷ್ಯಾದೊಳಗಿನ ಇಂಧನ ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ತೀವ್ರಗೊಳಿಸಿದೆ. ಈ ದಾಳಿಗಳನ್ನು ಭಯೋತ್ಪಾದಕ ಕೃತ್ಯಗಳೆಂದು ಬಣ್ಣಿಸಿರುವ ರಷ್ಯಾ, ಪ್ರತಿಯಾಗಿ ಉಕ್ರೇನ್‌ನ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.