
ಕಠ್ಮಂಡು, 23 ಅಕ್ಟೋಬರ್ 23 (ಹಿ.ಸ.):
ನೇಪಾಳದಲ್ಲಿ ವಿನಾಶಕಾರಿ ಪ್ರವಾಹದಿಂದ ಉಂಟಾದ ಹಾನಿಯ ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾರ್ಯಗಳಿಗಾಗಿ ಹವಾಮಾನ ಬದಲಾವಣೆಯಿಂದ ಉಂಟಾಗುವ ನಷ್ಟ ಮತ್ತು ಹಾನಿ ಪರಿಹಾರ ನಿಧಿಯು ನೇಪಾಳಕ್ಕೆ 2 ಕೋಟಿ ಅಮೆರಿಕನ್ ಡಾಲರ್ (ಸುಮಾರು 3 ಅಬ್ಜ 2 ಕೋಟಿ ನೇಪಾಳಿ ರೂಪಾಯಿ) ಅನುದಾನ ನೀಡಲು ನಿರ್ಧರಿಸಿದೆ ಎಂದು ಕೃಷಿ, ಅರಣ್ಯ ಮತ್ತು ಪರಿಸರ ಸಚಿವಾಲಯ ತಿಳಿಸಿದೆ.
ಆಗಸ್ಟ್ 26ರಂದು ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಉಂಟಾದ ಭೀಕರ ಪ್ರವಾಹದಿಂದ ಬಾಧಿತ ಕುಟುಂಬಗಳು ಮತ್ತು ಸಮುದಾಯಗಳಿಗೆ ಪರಿಹಾರ ಒದಗಿಸುವುದು, ಪುನರ್ವಸತಿ ಕಲ್ಪಿಸುವುದು ಹಾಗೂ ಪುನರ್ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವುದು ಈ ಅನುದಾನದ ಉದ್ದೇಶವಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪ್ರವಾಹದಲ್ಲಿ 1,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 5,000ಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. 15 ಸಾವಿರಕ್ಕೂ ಹೆಚ್ಚು ಕುಟುಂಬಗಳ 60 ಸಾವಿರಕ್ಕೂ ಅಧಿಕ ಜನರು ಪ್ರವಾಹದಿಂದ ನೇರವಾಗಿ ಬಾಧಿತರಾಗಿದ್ದಾರೆ. ಪ್ರವಾಹದಿಂದ ಉಂಟಾದ ಪ್ರಾಥಮಿಕ ಆರ್ಥಿಕ ನಷ್ಟವನ್ನು ಸುಮಾರು 270 ಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಪುನರ್ನಿರ್ಮಾಣ ಕಾರ್ಯಗಳಿಗೆ ಸುಮಾರು 470 ಕೋಟಿ ಅಮೆರಿಕನ್ ಡಾಲರ್ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ತ್ವರಿತವಾಗಿ ನೆರವು ತಲುಪಿಸುವ ಉದ್ದೇಶದಿಂದ ಆಗಸ್ಟ್ 31ರಂದು ನೇಪಾಳದ ಹಣಕಾಸು ಸಚಿವ ಡಾ. ಸ್ವರ್ಣಿಮ್ ವಾಗ್ಲೆ ಮತ್ತು ಕೃಷಿ ಸಚಿವೆ ಗೀತಾ ಚೌಧರಿ ಅವರು ನಿಧಿಯ ಆಡಳಿತ ಮಂಡಳಿಗೆ ವಿಶೇಷ ಮನವಿ ಸಲ್ಲಿಸಿದ್ದರು. ಈ ಮನವಿಯ ಆಧಾರದಲ್ಲಿ ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ದೇಶಗಳು, ಅತಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು, ಸಣ್ಣ ದ್ವೀಪ ರಾಷ್ಟ್ರಗಳು ಹಾಗೂ ಏಷ್ಯಾ-ಪೆಸಿಫಿಕ್, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರತಿನಿಧಿಗಳ ನಡುವೆ ಹಲವು ಹಂತಗಳಲ್ಲಿ ಔಪಚಾರಿಕ ಹಾಗೂ ಅನೌಪಚಾರಿಕ ಚರ್ಚೆಗಳು ನಡೆದಿದ್ದವು.
ಅಕ್ಟೋಬರ್ 22ರಂದು ನಡೆದ ನಿಧಿಯ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ನೇಪಾಳಕ್ಕೆ ಅನುದಾನ ನೀಡುವ ನಿರ್ಧಾರಕ್ಕೆ ಅಂತಿಮ ರೂಪ ನೀಡಲಾಯಿತು ಎಂದು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಮಹೇಶ್ವರ್ ಢಕಾಲ್ ತಿಳಿಸಿದ್ದಾರೆ. ನೇಪಾಳದ ಪರವಾಗಿ ಅವರು ಸಮನ್ವಯಕಾರ ಮತ್ತು ಸಹಾಯಕನ ಪಾತ್ರ ನಿರ್ವಹಿಸಿದ್ದರು.
ಈ ನಿಧಿಯಿಂದ ಅನುದಾನ ಪಡೆಯಲು ನೇಪಾಳವು ಬಾರ್ಬಡೋಸ್ ಅನುಷ್ಠಾನ ಚೌಕಟ್ಟಿನ ಪ್ರಕ್ರಿಯೆಯಡಿ ಪ್ರಸ್ತಾವನೆ ಸಿದ್ಧಪಡಿಸಿ ಮಂಡಿಸಲಿದೆ. ಇದೇ ವೇಳೆ, ನಿಧಿಯ 11ನೇ ಆಡಳಿತ ಮಂಡಳಿ ಸಭೆಯು 2027ರ ಮಾರ್ಚ್ 17ರಿಂದ 19ರವರೆಗೆ ಕಠ್ಮಂಡುವಿನಲ್ಲಿ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.
ನೇಪಾಳದ ರಾಷ್ಟ್ರೀಯ ಸಂಪರ್ಕ ಅಧಿಕಾರಿ ಹಾಗೂ ನಿಧಿಯ ಪರ್ಯಾಯ ಆಡಳಿತ ಮಂಡಳಿ ಸದಸ್ಯರಾಗಿರುವ ಡಾ. ಮಹೇಶ್ವರ್ ಢಕಾಲ್ ಅವರು, ಈ ಅನುದಾನದ ನಿರ್ಧಾರವು ನೇಪಾಳದ ಹವಾಮಾನ ಹಣಕಾಸು ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದು ಹೇಳಿದ್ದಾರೆ. ನೇಪಾಳದ ಹವಾಮಾನ ಹಣಕಾಸು ಇತಿಹಾಸದಲ್ಲಿ ಇದಕ್ಕಿಂತ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಮತ್ತೊಂದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ನಿರ್ಧಾರವು ನೇಪಾಳಕ್ಕೆ ಮಹತ್ವದ್ದಾಗಿರುವುದರ ಜತೆಗೆ, ನಷ್ಟ ಮತ್ತು ಹಾನಿ ಪರಿಹಾರ ನಿಧಿಯ ಇತಿಹಾಸದಲ್ಲಿಯೂ ಹೊಸ ಅಧ್ಯಾಯವನ್ನು ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.