ಗದಗ ಜಿಲ್ಲೆಯಿಂದ ಸ್ಪರ್ಧಿಸುವಂತೆ ಎಚ್.ಡಿ. ಕುಮಾರಸ್ವಾಮಿಗೆ ಬಹಿರಂಗ ಆಹ್ವಾನ
ಪ್ರಿಯಾಂಕ್ ಖರ್ಗೆ ಸವಾಲು ಸ್ವೀಕರಿಸಿದ ಗದಗದ ಜನತೆ; ನಗರದ ಪ್ರಮುಖ ವೃತ್ತದಲ್ಲಿ ಫ್ಲೆಕ್ಸ್ ಅಳವಡಿಕೆ
gadag-jds-leaders-invite-hd-kumaraswamy-to-contest-from-gadag


ಗದಗ, 22 ಅಕ್ಟೋಬರ್ (ಹಿ.ಸ.):

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿ ಗದಗ ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ಜೆಡಿಎಸ್ ಮುಖಂಡರು ಆಹ್ವಾನ ನೀಡಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಹಾಕಿರುವ ಸವಾಲಿನ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಸ್ಪರ್ಧಿಸುವಂತೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದ್ದು, ನಗರದ ಪ್ರಮುಖ ವೃತ್ತವೊಂದರಲ್ಲಿ ಈ ಸಂಬಂಧ ಫ್ಲೆಕ್ಸ್ ಅಳವಡಿಸಲಾಗಿದೆ.

‘ನೀವು ಒಂದು ಕ್ಷೇತ್ರಕ್ಕೆ ಸೀಮಿತವಾದ ನಾಯಕರಲ್ಲ; ಇಡೀ ನಾಡಿಗೆ ಬೇಕಾದ ಜನನಾಯಕರು’ ಎಂದು ಫ್ಲೆಕ್ಸ್ನಲ್ಲಿ ಉಲ್ಲೇಖಿಸಿರುವ ಮುಖಂಡರು, ಗದಗ ಜಿಲ್ಲೆಯಿಂದ ಸ್ಪರ್ಧಿಸಿ ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವಂತೆ ಮನವಿ ಮಾಡಿದ್ದಾರೆ.

ದಶಕಗಳಿಂದ ಗದಗ ಜಿಲ್ಲೆ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಹೊತ್ತಿದ್ದು, ನೀರಾವರಿ ಸೌಲಭ್ಯಗಳ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆ ಸಮರ್ಪಕವಾಗಿಲ್ಲದ ಕಾರಣ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳ ಕೊರತೆ ಕಾಡುತ್ತಿದೆ. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹಾಗೂ ನೈರ್ಮಲ್ಯ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಆಹ್ವಾನ ನೀಡಿರುವವರು ಅಭಿಪ್ರಾಯಪಟ್ಟಿದ್ದಾರೆ.

‘ಗದಗ ಜಿಲ್ಲೆಗೆ ಬೇಕಿರುವುದು ದ್ವೇಷದ ರಾಜಕಾರಣವಲ್ಲ, ಅಭಿವೃದ್ಧಿಪರ ನಾಯಕತ್ವದ ಸ್ಪರ್ಶ’ ಎಂಬ ಸಂದೇಶದೊಂದಿಗೆ ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಆಡಳಿತ ಶೈಲಿಯ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡರು, ಅವರು ಜಿಲ್ಲೆಯಿಂದ ಸ್ಪರ್ಧಿಸಿದರೆ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರ ಸವಾಲಿನ ಬೆನ್ನಲ್ಲೇ ಗದಗ ಜಿಲ್ಲೆಯಿಂದ ಸ್ಪರ್ಧಿಸುವಂತೆ ಕುಮಾರಸ್ವಾಮಿ ಅವರಿಗೆ ಬಹಿರಂಗ ಆಹ್ವಾನ ನೀಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande