
ಬೆಂಗಳೂರು, 22 ಅಕ್ಟೋಬರ್ (ಹಿ.ಸ.):
ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ ದಿಢೀರ್ ಮಳೆ ಸುರಿದಿದ್ದು, ನಗರದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.
ಜಯನಗರ, ಲಾಲ್ಬಾಗ್ ಸುತ್ತಮುತ್ತ ಧಾರಾಕಾರ ಮಳೆಯಾದರೆ, ಕಾರ್ಪೊರೇಷನ್, ಕೆ.ಆರ್. ಮಾರ್ಕೆಟ್, ಶಾಂತಿನಗರ, ವಿಧಾನಸೌಧ, ರಾಜಾಜಿನಗರ ಹಾಗೂ ಮಲ್ಲೇಶ್ವರಂ ಸೇರಿದಂತೆ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಿದೆ.
ಬೆಳಗ್ಗೆಯಿಂದಲೇ ನಗರದಲ್ಲಿ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಏಕಾಏಕಿ ಮಳೆ ಆರಂಭವಾಗುತ್ತಿದ್ದಂತೆ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು ರಸ್ತೆಬದಿಯ ಹೋಟೆಲ್ಗಳು ಹಾಗೂ ಮೇಲ್ಸೇತುವೆಗಳ ಕೆಳಗೆ ಆಶ್ರಯ ಪಡೆದರು. ಛತ್ರಿ ಹಿಡಿದು ಸಂಚರಿಸುತ್ತಿದ್ದ ಸಾರ್ವಜನಿಕರು ಕಂಡುಬಂದರು.
ಅ.26ರವರೆಗೆ ಯೆಲ್ಲೋ ಅಲರ್ಟ್
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 26ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಏಳು ದಿನಗಳಲ್ಲಿಯೂ ರಾಜ್ಯದ ವಿವಿಧೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕೆಲವೆಡೆ ಜೋರಾದ ಗಾಳಿಯೂ ಬೀಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್ 22ರಿಂದ 26ರವರೆಗೆ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಗುರುವಾರ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದ್ದು, ಮೋಡಕವಿದ ಹಾಗೂ ತಂಪಾದ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.
ಸಾರ್ವಜನಿಕರಿಗೆ ಮುನ್ನೆಚ್ಚರಿಕೆ
ದಿಢೀರ್ ಮಳೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕು. ಗುಡುಗು-ಮಿಂಚು ಸಹಿತ ಮಳೆಯ ಸಂದರ್ಭದಲ್ಲಿ ಮರಗಳ ಕೆಳಗೆ ಹಾಗೂ ವಿದ್ಯುತ್ ಕಂಬಗಳ ಸಮೀಪ ಆಶ್ರಯ ಪಡೆಯುವುದನ್ನು ತಪ್ಪಿಸಬೇಕು. ಮಳೆಯ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R