ನ.28ರಿಂದ ವಾರಣಾಸಿಯಲ್ಲಿ ಕಾಶಿ ತಮಿಳು ಸಂಗಮ 5.0 ಸಾಂಸ್ಕೃತಿಕ ಮಹೋತ್ಸವ:ಪ್ರಹ್ಲಾದ ಜೋಶಿ
ನವದೆಹಲಿ, 22 ಅಕ್ಟೋಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿರುವ ‘ಕಾಶಿ ತಮಿಳು ಸಂಗಮ’ವು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ
ಪ್ರಹ್ಲಾದ ಜೋಶಿ


ನವದೆಹಲಿ, 22 ಅಕ್ಟೋಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿರುವ ‘ಕಾಶಿ ತಮಿಳು ಸಂಗಮ’ವು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

2022ರಲ್ಲಿ ಆರಂಭವಾದ ಈ ಸಾಂಸ್ಕೃತಿಕ ಮಹೋತ್ಸವವು ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ಸಾಂಸ್ಕೃತಿಕ ಹಾಗೂ ನಾಗರಿಕತೆಯ ನಂಟನ್ನು ಬಲಪಡಿಸುತ್ತಿದೆ. ಕಳೆದ ನಾಲ್ಕು ಆವೃತ್ತಿಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಬರಹಗಾರರು, ಕರಕುಶಲಕರ್ಮಿಗಳು, ಕೃಷಿಕರು, ವೃತ್ತಿಪರರು, ಮಹಿಳೆಯರು ಹಾಗೂ ಆಧ್ಯಾತ್ಮಿಕ ವಿದ್ವಾಂಸರನ್ನು ಒಂದೇ ವೇದಿಕೆಗೆ ತಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ವೈವಿಧ್ಯತೆಯೇ ನಮ್ಮ ಶಕ್ತಿಯಾಗಿದ್ದು, ಭಾಷೆಗಳು ಮತ್ತು ಸಂಸ್ಕೃತಿಗಳು ಹಂಚಿಕೊಂಡಿರುವ ನಾಗರಿಕತೆಯ ಪರಂಪರೆಯ ಮೂಲಕ ದೇಶದ ಜನರನ್ನು ಬೆಸೆಯುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯದಂತೆ ಭಾರತೀಯ ಜ್ಞಾನ ಪರಂಪರೆ ಮತ್ತು ಸಾಂಸ್ಕೃತಿಕ ಕಲಿಕೆಯನ್ನು ಉತ್ತೇಜಿಸುವಲ್ಲಿ ಕಾಶಿ ತಮಿಳು ಸಂಗಮ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಮಹೋತ್ಸವದ ಐದನೇ ಆವೃತ್ತಿಯು 2026ರ ನವೆಂಬರ್ 28ರಿಂದ ಡಿಸೆಂಬರ್ 12ರವರೆಗೆ ವಾರಣಾಸಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿನಿಧಿಗಳು ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಗೂ ಭೇಟಿ ನೀಡಲಿದ್ದಾರೆ.

ತಿರುಕ್ಕುರಲ್ ಜ್ಞಾನ ಪ್ರಸಾರಕ್ಕೆ ಆದ್ಯತೆ

ಈ ಬಾರಿಯ ಮಹೋತ್ಸವದ ವಿಷಯವಸ್ತು ‘ತಿರುಕ್ಕುರಲ್ ಕಲಿಯೋಣ’ ಎಂಬುದಾಗಿದೆ. ತಿರುಕ್ಕುರಲ್‌ನ ಕಾಲಾತೀತ ಜ್ಞಾನವನ್ನು ಜನರಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ನೈತಿಕತೆ, ಸದಾಚಾರ, ಉತ್ತಮ ನಡವಳಿಕೆ ಮತ್ತು ಜವಾಬ್ದಾರಿಯುತ ಜೀವನದ ಮೌಲ್ಯಗಳನ್ನು ಸಾರುವ ತಿರುಕ್ಕುರಲ್‌ನ ಸಂದೇಶಗಳನ್ನು ಯುವಜನರಿಗೆ ತಲುಪಿಸಲು ವಿಶೇಷ ಆದ್ಯತೆ ನೀಡಲಾಗಿದೆ.

ಶಾಸ್ತ್ರೀಯ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಯುವ ಸಮೂಹವನ್ನು ಪ್ರೇರೇಪಿಸುವುದು ಈ ಆವೃತ್ತಿಯ ಪ್ರಮುಖ ಉದ್ದೇಶವಾಗಿದೆ. ತಮಿಳುನಾಡಿನಿಂದ ಏಳು ವಿಭಿನ್ನ ವಿಭಾಗಗಳಲ್ಲಿ ಸುಮಾರು 1,400 ಪ್ರತಿನಿಧಿಗಳು ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳೊಂದಿಗೆ ಸಂವಾದ ಹಾಗೂ ತಿರುಕ್ಕುರಲ್ ತಜ್ಞರೊಂದಿಗೆ ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ಭಾರತೀಯ ರಾಷ್ಟ್ರೀಯ ಪುಸ್ತಕ ಟ್ರಸ್ಟ್ ಮತ್ತು ರಾಷ್ಟ್ರೀಯ ಇ-ಪುಸ್ತಕಾಲಯದ ಸಹಯೋಗದೊಂದಿಗೆ ಯುವ ಕಲಿಕಾರ್ಥಿಗಳಿಗೆ ತಿರುಕ್ಕುರಲ್‌ನ ಜ್ಞಾನವನ್ನು ಪರಿಚಯಿಸುವ ಪ್ರಯತ್ನವೂ ನಡೆಯಲಿದೆ.

ನೋಂದಣಿ ಪೋರ್ಟಲ್ ಉದ್ಘಾಟನೆ

ಕಾಶಿ ತಮಿಳು ಸಂಗಮದ ಐದನೇ ಆವೃತ್ತಿಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಚೆನ್ನೈನ ಶಾಸ್ತ್ರೀಯ ತಮಿಳು ಕೇಂದ್ರ ಸಂಸ್ಥೆಯು ಅಧಿಕೃತ ನೋಂದಣಿ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಈ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ.

ಪೋರ್ಟಲ್‌ನಲ್ಲಿ ನೋಂದಣಿ ಸೌಲಭ್ಯದ ಜೊತೆಗೆ ಕಾರ್ಯಕ್ರಮದ ವಿವರಗಳು, ಮಾರ್ಗಸೂಚಿಗಳು ಮತ್ತು ಅಧ್ಯಯನಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಒದಗಿಸಲಾಗುತ್ತದೆ.

ಭಾರತದ ಶಾಸ್ತ್ರೀಯ ಜ್ಞಾನ ಸಂಪತ್ತನ್ನು ಪುಸ್ತಕಗಳಿಗೆ ಮಾತ್ರ ಸೀಮಿತಗೊಳಿಸದೆ, ಅದರ ಅಮೂಲ್ಯ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಮುಖ್ಯ ಗುರಿಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಕಾಶಿ ತಮಿಳು ಸಂಗಮವು ಸಾಂಸ್ಕೃತಿಕ ತಿಳುವಳಿಕೆಯನ್ನು ವೃದ್ಧಿಸುವುದರ ಜೊತೆಗೆ ದೇಶದ ಭಾಷಾ ವೈವಿಧ್ಯತೆಯನ್ನು ಸಂಭ್ರಮಿಸಲು ಮತ್ತು ಹಂಚಿಕೊಂಡ ನಾಗರಿಕತೆಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande