
ಬಳ್ಳಾರಿ, 22 ಅಕ್ಟೋಬರ್ (ಹಿ.ಸ.)
ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಅಂಗವಾಗಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆಯನ್ನು ಸುಗಮ ಹಾಗೂ ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಕೈಗೊಂಡಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
*ಒಟ್ಟು ಮತದಾರರು ಮತ್ತು ಮತಗಟ್ಟೆಗಳ ವಿವರ:*
ಜಿಲ್ಲೆಯಲ್ಲಿ ಒಟ್ಟು 3,393 ಮತದಾರರಿದ್ದು, ಇದರಲ್ಲಿ 1,814 ಪುರುಷ ಹಾಗೂ 1,579 ಮಹಿಳಾ ಶಿಕ್ಷಕ ಮತದಾರರಿದ್ದಾರೆ (ಇತರೆ ಮತದಾರರಿಲ್ಲ). ಮತದಾನಕ್ಕಾಗಿ ಒಟ್ಟು 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 8 ಮುಖ್ಯ ಮತಗಟ್ಟೆಗಳು ಹಾಗೂ 94-ಬಳ್ಳಾರಿ ನಗರ ವ್ಯಾಪ್ತಿಯಲ್ಲಿ 1 ಹೆಚ್ಚುವರಿ ಮತಗಟ್ಟೆ ಒಳಗೊಂಡಿದೆ. ಎಲ್ಲಾ ಮತಗಟ್ಟೆಗಳ ಭೌತಿಕ ಪರಿಶೀಲನೆ ಪೂರ್ಣಗೊಂಡಿದ್ದು, ಮೂಲಸೌಕರ್ಯಗಳನ್ನು ಖಾತರಿಪಡಿಸಲಾಗಿದೆ ಎಂದು ಹೇಳಿದ್ದಾರೆ.
*ಮತಗಟ್ಟೆಗಳ ವಿವರ:*
ನೂತನ ಜಿಲ್ಲಾಡಳಿತ ಭವನದ ಬಳ್ಳಾರಿ ತಾಲೂಕು ಕಚೇರಿ ಸಭಾಂಗಣ (ಮತಗಟ್ಟೆ 1): 939 ಮತದಾರರು
ಬಳ್ಳಾರಿ ನಗರದ ಅಂಚೆ ಕಚೇರಿ ಹತ್ತಿರದ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು (ಮತಗಟ್ಟೆ 2 ಮತ್ತು 2ಎ): 1,264 ಮತದಾರರು
ಕಂಪ್ಲಿ ಪುರಸಭೆ ಕಚೇರಿ (ಮತಗಟ್ಟೆ 3): 216 ಮತದಾರರು
ಕುರುಗೋಡು ತಾಲೂಕು ಕಚೇರಿ (ಮತಗಟ್ಟೆ 4): 120 ಮತದಾರರು
ಸಂಡೂರು ತಾಲೂಕು ಕಚೇರಿ (ಮತಗಟ್ಟೆ 5): 387 ಮತದಾರರು
ಸಿರುಗುಪ್ಪ ತಾಲೂಕು ಕಚೇರಿ (ಮತಗಟ್ಟೆ 6): 313 ಮತದಾರರು
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಕಚೇರಿ (ಮತಗಟ್ಟೆ 7): 96 ಮತದಾರರು
ಕರೂರು ನಾಡ ಕಚೇರಿ (ಮತಗಟ್ಟೆ 8): 58 ಮತದಾರರು.
*ಮತಗಟ್ಟೆ ಸಿಬ್ಬಂದಿ ಮತ್ತು ತರಬೇತಿ:*
ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 12 ಮತಗಟ್ಟೆ ತಂಡಗಳನ್ನು (9 ಪ್ರಮುಖ, ಜೊತೆಗೆ 3 ಮೀಸಲು) ನಿಯೋಜಿಸಲಾಗಿದೆ. ಇದಲ್ಲದೆ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 12 ಮೈಕ್ರೋ ಅಬ್ಸರ್ವರ್ಗಳನ್ನು (9 ಪ್ರಮುಖ, ಜೊತೆಗೆ 3 ಮೀಸಲು) ನೇಮಿಸಲಾಗಿದೆ. ನಿಯೋಜಿತ ಸಿಬ್ಬಂದಿಗೆ ಅಕ್ಟೋಬರ್ 12 ಮತ್ತು 17 ರಂದು ಬಳ್ಳಾರಿಯ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಚುನಾವಣಾ ಅಕ್ರಮಗಳನ್ನು ತಡೆಯಲು ಹಾಗೂ ನಿಗಾ ವಹಿಸಲು ವಿವಿಧ ಅಧಿಕಾರಿ, ಸಿಬ್ಬಂದಿ ಒಳಗೊಂಡ ನಾನಾ ತಂಡಗಳನ್ನು ರಚಿಸಲಾಗಿದೆ.
*ಮತಪೆಟ್ಟಿಗೆಗಳು ಮತ್ತು ಸಾಮಗ್ರಿಗಳು:*
ಪ್ರತಿ ಮತಗಟ್ಟೆಗೆ 2 ರಂತೆ ಒಟ್ಟು 18 ಮತಪೆಟ್ಟಿಗೆಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಚುನಾವಣಾ ಸಾಮಗ್ರಿಗಳನ್ನು ಸಿಇಒ ಕಚೇರಿ ಅನುಮೋದಿತ ಸಂಸ್ಥೆಯ ಮೂಲಕ ಸಂಗ್ರಹಿಸಲಾಗಿದೆ. ಮತಗಟ್ಟೆಗಳ ಗುರುತಿಸುವಿಕೆಗೆ ಬಿಳಿ ಹಿನ್ನೆಲೆಯಲ್ಲಿ ಕೆಂಪು ಅಕ್ಷರ ಹಾಗೂ ಕೆಂಪು ವೃತ್ತ ಹೊಂದಿರುವ ಬೋರ್ಡ್ ಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದಿದ್ದಾರೆ.
*ಕಟ್ಟುನಿಟ್ಟಿನ ಭದ್ರತೆ, ವೆಬ್ಕಾಸ್ಟಿಂಗ್ ಹಾಗೂ ಇತರೆ ಕ್ರಮಗಳು:*
ಕಲಬುರಗಿಯ ಚುನಾವಣಾಧಿಕಾರಿಗಳ ಕಚೇರಿ ಮೂಲಕ ಎಲ್ಲಾ ಮತಗಟ್ಟೆಗಳಲ್ಲಿ ನೇರ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಮತಗಟ್ಟೆಯ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ರಚಾರ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿ, ಮತಪೆಟ್ಟಿಗೆಗಳು ಮತ್ತು ಚುನಾವಣಾ ಸಾಮಗ್ರಿಗಳ ಸುರಕ್ಷಿತ ಸಾಗಾಣಿಕೆಗೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗಿದೆ. ಮತದಾನದ ನಂತರ ಸಾಮಗ್ರಿಗಳನ್ನು ಬಳ್ಳಾರಿಯ ಜಿಲ್ಲಾಡಳಿತ ಭವನದ ತಾಲೂಕು ಕಚೇರಿಯ ಸ್ವೀಕರಣಾ ಕೇಂದ್ರದಲ್ಲಿ ಜಮಾ ಮಾಡಲಾಗುವುದು.
ಮದ್ಯ ಮಾರಾಟ ನಿಷೇಧ: ಜನಪ್ರತಿನಿಧಿಗಳ ಕಾಯ್ದೆ 1951ರ ಕಲಂ 135(ಸಿ) ಅನ್ವಯ 2026ರ ಅಕ್ಟೋಬರ್ 21ರ ಸಂಜೆ 4 ಗಂಟೆಯಿAದ ಅಕ್ಟೋಬರ್ 24ರ ಬೆಳಗ್ಗೆ 6 ಗಂಟೆಯವರೆಗೆ ತಾತ್ಕಾಲಿಕವಾಗಿ ಮದ್ಯ ಮಾರಾಟ ನಿಷೇಧಕ್ಕೆ ಕ್ರಮ ವಹಿಸಲಾಗಿದೆ.
ಜಿಲ್ಲೆಯಲ್ಲಿ ನೋಂದಾಯಿತ ಎಲ್ಲಾ ಶಿಕ್ಷಕ ಮತದಾರರು ಅಕ್ಟೋಬರ್ 23 ರಂದು ತಪ್ಪದೇ ನಿಗದಿತ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಬೇಕು. ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್