ಮೈಶುಗರ್ನಲ್ಲಿ ₹150 ಕೋಟಿಗೂ ಅಧಿಕ ಭ್ರಷ್ಟಾಚಾರದ ಆರೋಪ: ಅಧ್ಯಕ್ಷ, ಎಂಡಿ ವಜಾಕ್ಕೆ ಶಿವಕುಮಾರ್ ಆಗ್ರಹ
ಮೈಶುಗರ್ ಕಾರ್ಖಾನೆಯಲ್ಲಿ ₹150 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಸಾಮಾಜಿಕ ಹೋರಾಟಗಾರ ಶಿವಕುಮಾರ್, ಅಧ್ಯಕ್ಷ ಸಿ.ಡಿ. ಗಂಗಾಧರ್ ಹಾಗೂ ಎಂಡಿ ಮಂಗಲ್ ದಾಸ್ ಅವರನ್ನು ವಜಾಗೊಳಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
my sugar-corruption-allegations-cd-gangadhar-mangal-das-removal-demand


ಮಂಡ್ಯ, 22 ಅಕ್ಟೋಬರ್ (ಹಿ.ಸ.):

ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ₹150 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಸಾಮಾಜಿಕ ಹೋರಾಟಗಾರ ಶಿವಕುಮಾರ್, ಕಾರ್ಖಾನೆಯ ಅಧ್ಯಕ್ಷ ಸಿ.ಡಿ. ಗಂಗಾಧರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖಾ ವರದಿಯಲ್ಲಿ ಉಲ್ಲೇಖವಾಗಿದ್ದರೂ, ಸಂಬಂಧಪಟ್ಟವರ ವಿರುದ್ಧ ಈವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವರಿಗೂ ಈ ಕುರಿತು ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಕಾರ್ಖಾನೆಯು ನಿತ್ಯ 5,000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಅರೆಯದೆ ಸುಮಾರು 90 ದಿನಗಳ ಕಾಲದ ಕಾರ್ಯಾಚರಣೆಯಲ್ಲಿ ಕಾರ್ಖಾನೆಗೆ ನಷ್ಟ ಉಂಟುಮಾಡಲಾಗಿದೆ ಎಂದು ಶಿವಕುಮಾರ್ ದೂರಿದರು. ಕಾರ್ಖಾನೆಯ ನಿರ್ವಹಣೆಯಲ್ಲಿ ಲೋಪಗಳಾಗಿದ್ದು, ಇದರಿಂದ ರೈತರು ಹಾಗೂ ಕಾರ್ಖಾನೆಯ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.

ಕ್ಯಾಬಿನೆಟ್ ಸಭೆ ಕರೆದು ಕ್ರಮ ಕೈಗೊಳ್ಳಲು ಒತ್ತಾಯ

ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಹಾಗೂ ಎಂಡಿ ಮಂಗಲ್ ದಾಸ್ ಅವರನ್ನು ವಜಾಗೊಳಿಸುವ ಕುರಿತು ರಾಜ್ಯ ಸರ್ಕಾರ ತಕ್ಷಣ ಕ್ಯಾಬಿನೆಟ್ ಸಭೆ ನಡೆಸಬೇಕು. ಅಲ್ಲಿಯವರೆಗೆ ಜಿಲ್ಲಾಧಿಕಾರಿಗಳಿಗೆ ಕಾರ್ಖಾನೆಯ ಉಸ್ತುವಾರಿ ವಹಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಶ್ರೇಯಾ ಕಂಪನಿಗೆ ₹8 ಕೋಟಿ ಮೊತ್ತದ ಬಿಲ್ ಮಾಡಲಾಗಿದೆ ಎಂದು ಆರೋಪಿಸಿದ ಅವರು, ರೈತರಿಗೆ ಸಂಬಂಧಿಸಿದ ಬಿಲ್ಗಳನ್ನು ಇನ್ನೂ ಏಕೆ ಪಾವತಿಸಿಲ್ಲ ಎಂದು ಪ್ರಶ್ನಿಸಿದರು. ಕಾರ್ಖಾನೆಯ ಹಣಕಾಸು ವ್ಯವಹಾರಗಳು ಹಾಗೂ ನಿರ್ವಹಣೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೈಶುಗರ್ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande