

ಬಳ್ಳಾರಿ, 19 ಅಕ್ಟೋಬರ್ (ಹಿ.ಸ.):
ಪ್ರಸ್ತುತ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ಕೇಂದ್ರ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯು ಅಕ್ಟೋಬರ್ 31 ರವರೆಗೆ ಜಾರಿಯಲ್ಲಿದ್ದು, ಈ ಬಾರಿಯ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಸರಳವಾಗಿ ಹಾಗೂ ಸಾಂಕೇತಿಕವಾಗಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಹೇಳಿದ್ದಾರೆ.
ಸೋಮವಾರ ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಕ್ಟೋಬರ್ 26ರ ಸೀಗೆ ಹುಣ್ಣಿಮೆಯಂದು ಹಮ್ಮಿಕೊಳ್ಳಲು ಉದ್ದೇಶಿಸಿರುವ ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ, ಮತದಾನ ಇದೇ ಅಕ್ಟೋಬರ್ 22ರಂದು, ಮತ ಎಣಿಕೆ 27ರಂದು ಹಾಗೂ ನೀತಿ ಸಂಹಿತೆಯು 31ರ ವರೆಗೆ ಜಾರಿಯಲ್ಲಿರಲಿದೆ. ಹೀಗಾಗಿ ಸರ್ಕಾರದ ನಿರ್ದೇಶನದಂತೆ ನೀತಿ ಸಂಹಿತೆಯ ಯಾವುದೇ ನಿಯಮ ಉಲ್ಲಂಘನೆಯಾಗದಂತೆ, ಕಾರ್ಯಕ್ರಮವನ್ನು ಸರಳವಾಗಿ ಆಚರಿಸಬೇಕಾಗಿದೆ ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ಅದ್ದೂರಿ ಮೆರವಣಿಗೆ ಅಥವಾ ನಿಯಮ ಮೀರುವ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ಆದಾಗ್ಯೂ, ಮಹರ್ಷಿ ವಾಲ್ಮೀಕಿಯವರ ತತ್ವ-ಆದರ್ಶಗಳು ಹಾಗೂ ಅವರ ಸಂದೇಶಗಳನ್ನು ಗೌರವಪೂರ್ವಕವಾಗಿ ಸ್ಮರಿಸುವ ರೀತಿಯಲ್ಲಿ ಶಿಷ್ಟಾಚಾರದ ಚೌಕಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಇದಕ್ಕೆ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ರದ್ದು:
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪ್ರತಿ ವರ್ಷದಂತೆ ಅದ್ಧೂರಿಯಾಗಿ ಆಯೋಜಿಸುತ್ತಿದ್ದ ಮೆರವಣಿಗೆ, ವೇದಿಕೆ ಕಾರ್ಯಕ್ರಮಗಳು ಹಾಗೂ ಧ್ವನಿವರ್ಧಕ ಬಳಕೆಗೆ ಯಾವುದೇ ಅವಕಾಶವಿರುವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು.
ಪ್ರತಿಮೆಗಳಿಗೆ ಮಾಲಾರ್ಪಣೆ ಮಾತ್ರ:
ನಗರದಲ್ಲಿನ ವಾಲ್ಮೀಕಿ ವೃತ್ತದಲ್ಲಿನ ವಾಲ್ಮೀಕಿ ಪ್ರತಿಮೆ ಹಾಗೂ ವಾಲ್ಮೀಕಿ ಭವನದಲ್ಲಿನ ವಾಲ್ಮೀಕಿ ಪ್ರತಿಮೆಗಳಿಗೆ ಸೂಕ್ತ ಸ್ವಚ್ಛತೆ, ಬಣ್ಣ ಹಾಗೂ ಅಗತ್ಯ ಅಲಂಕಾರಗಳನ್ನು ಮಹಾನಗರ ಪಾಲಿಕೆಯಿಂದ ಮಾಡಿಸಲಾಗುವುದು. ನಿಗದಿತ ಸಮಯದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಗೌರವಪೂರ್ವಕವಾಗಿ ಮಾಲಾರ್ಪಣೆ ಮಾಡಲು ಮಾತ್ರ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:
ಸಮುದಾಯದ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ನೀಡುವ ಕುರಿತು ಸಾರ್ವಜನಿಕರು ಸಲಹೆ ನೀಡಿದ್ದು, ನೀತಿ ಸಂಹಿತೆ ಮುಗಿದ ನಂತರ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.
ಮೀಸಲಾತಿ ಬೇಡಿಕೆ ಸರ್ಕಾರದ ಗಮನಕ್ಕೆ:
ಸಮುದಾಯದ ಮೀಸಲಾತಿ ಹಾಗೂ ಇತರೆ ಬೇಡಿಕೆಗಳ ಕುರಿತು ಮಾತನಾಡಿದ ಅಪರ ಜಿಲ್ಲಾಧಿಕಾರಿಯವರು, ಸಂಘ-ಸಂಸ್ಥೆಗಳು ನೀಡಿರುವ ಮನವಿಗಳನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ಸರ್ಕಾರ ಮಟ್ಟದಲ್ಲೇ ಅಂತಿಮ ತೀರ್ಮಾನವಾಗಲಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಾರ್ವಜನಿಕರು ಹಾಗೂ ಮುಖಂಡರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್