
ಗದಗ, 19 ಅಕ್ಟೋಬರ್ (ಹಿ.ಸ.)
ಮತ್ತೊಬ್ಬರ ದೌರ್ಬಲ್ಯಗಳನ್ನು ಎತ್ತಿ ತೋರಿಸುವ ಮೂಲಕ ತಮ್ಮ ಬಲವನ್ನು ಪ್ರದರ್ಶಿಸುವುದು ದುರ್ದೈವದ ಸಂಗತಿ. ಸ್ಟಿಂಗ್ ಎಂಬ ಪದವೇ ಅಸಹ್ಯಕರವಾಗಿದ್ದು, ಜನರಲ್ಲಿ ಕೀಳು ಅಭಿರುಚಿ ಉಂಟುಮಾಡುವಂತಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಗದಗದಲ್ಲಿ ಸ್ಟಿಂಗ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದ ಸತ್ಯಾಸತ್ಯತೆಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸ್ಟಿಂಗ್ ಹೆಸರಿನಲ್ಲಿ ತಾತ್ಕಾಲಿಕವಾಗಿ ಕೆಲವು ನಾಯಕರ ಚಾರಿತ್ರಿಕ ತೇಜೋವಧೆ ಮಾಡಲಾಗುತ್ತಿದೆ. ಇದರಿಂದ ಸಮಾಜಕ್ಕೆ ಯಾವುದೇ ಲಾಭವಿಲ್ಲ. ಇಂತಹ ಬೆಳವಣಿಗೆಗಳಿಗೆ ಸಮಾಜದಲ್ಲಿ ಮನ್ನಣೆಯೂ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸ್ಟಿಂಗ್ ಪ್ರಕರಣದ ತನಿಖೆಗೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ತನಿಖೆ ನಡೆಸಲು ಹಿಂಜರಿಯುವ ಪೊಲೀಸರನ್ನು ಸರ್ಕಾರ ತಕ್ಷಣ ವಜಾಗೊಳಿಸಬೇಕು. ಅವರ ಬದಲಿಗೆ ಬೇರೆಯವರನ್ನು ನೇಮಕ ಮಾಡಿ, ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇನ್ನು ಸ್ಟಿಂಗ್ ಪ್ರಕರಣದಲ್ಲಿ 200 ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ ಎಂಬ ವಿಚಾರದ ಕುರಿತು ಪ್ರಶ್ನಿಸಿದ ಅವರು, 200 ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯವೇನು? ಇಂತಹ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸದೆ ಅವುಗಳನ್ನು ನಂಬಬಾರದು. ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP