
ಬೆಂಗಳೂರು, 19 ಅಕ್ಟೋಬರ್ (ಹಿ.ಸ.):
ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದು, ಇದರಿಂದ ಪ್ರಯೋಜನವಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹಿತ ಕಾಪಾಡಲು ತಾವು ಪ್ರಯತ್ನಿಸಿದ್ದಾಗಿ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈ ವಿಚಾರದಲ್ಲಿ ಪ್ರಯತ್ನಿಸಿ, ಕೊನೆಗೆ ಮತ್ತೆ ಕಾಂಗ್ರೆಸ್ ಮೇಲೆ ಆರೋಪ ಹೊರಿಸಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಬಗೆಹರಿಸಬೇಕು ಎಂದು ಹೇಳಿದರು.
ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ
ಕಬ್ಬು ಬೆಳೆಗಾರರ ಸಮಸ್ಯೆಯ ವಿಚಾರದಲ್ಲಿ ರಾಜಕಾರಣ ಮಾಡಲು ತಮಗೆ ಇಷ್ಟವಿಲ್ಲ. ರೈತರ ವಿಷಯದಲ್ಲಿ ಏನು ರಾಜಕಾರಣ ಮಾಡುವುದು? ರಾಜಕಾರಣ ಮಾಡಲು ಬೇರೆ ಜನರಿದ್ದಾರೆ. ಅವರು ಟೀಕೆ ಮಾಡುತ್ತಿರಲಿ. ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿಗಳ ಭೇಟಿ
ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಮುಂದಿನ ವಾರ ಪ್ರಧಾನಿಗಳಿಗೆ ಮನವಿ ಸಲ್ಲಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ವಿರೋಧ ಪಕ್ಷದವರೂ ನಮ್ಮೊಂದಿಗೆ ಬರುವುದಾಗಿ ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಎಲ್ಲ ಕಡೆ ಬರಗಾಲವಿದೆ. ಹೀಗಾಗಿ ಪ್ರಧಾನಿಗಳ ಭೇಟಿಗೆ ಸದ್ಯ ಆತುರಪಡುತ್ತಿಲ್ಲ. ದಸರಾ ಮುಗಿದು ರಾಜ್ಯೋತ್ಸವದ ನಡುವಿನ ಅವಧಿಯಲ್ಲಿ ಪ್ರಧಾನಿಗಳು ಸಮಯ ನೀಡಿದರೆ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.
10 ದಿನಗಳ ಕಾಲ ದಸರಾ ದೀಪಾಲಂಕಾರ ವಿಸ್ತರಣೆ
ದಸರಾ ದೀಪಾಲಂಕಾರ ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ದೀಪಾಲಂಕಾರವನ್ನು ಇನ್ನಷ್ಟು ದಿನ ವಿಸ್ತರಿಸುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ದಸರಾ ದೀಪಾಲಂಕಾರವನ್ನು 10 ದಿನಗಳ ಕಾಲ ಮುಂದುವರಿಸಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.