


ಬಳ್ಳಾರಿ, 19 ಅಕ್ಟೋಬರ್ (ಹಿ.ಸ.):
ರಾಜ್ಯದಲ್ಲಿ ಮಳೆ ಕೊರತೆ ಹಾಗೂ ತೀವ್ರ ಬರ ಪರಿಸ್ಥಿತಿಯ ನಡುವೆ ಬಳ್ಳಾರಿಯ ಗ್ರಾಮೀಣ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ (ಗುಳೆ) ಹೋಗುವುದನ್ನು ತಡೆಗಟ್ಟಲು ಬಳ್ಳಾರಿ ಜಿಲ್ಲಾಡಳಿತವು ‘ವಿಬಿ-ಜಿ ರಾಮ್ ಜಿ’ (ವಿಕ್ಷಿತ್ ಭಾರತ್- ಗ್ಯಾರಂಟಿ ಫಾರ್ ರೋಜಗಾರ್ & ಅಜೀವಿಕ ಮಿಷನ್ ಗ್ರಾಮೀಣ್) ಯೋಜನೆಯನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ ಕೆಲಸ ಕೇಳಿದ ಪ್ರತಿಯೊಬ್ಬರಿಗೂ ಉದ್ಯೋಗ ಖಾತ್ರಿಪಡಿಸಲು ಪ್ರತಿನಿತ್ಯ ಕನಿಷ್ಠ 5 ಲಕ್ಷ ಜನರಿಗೆ ಕಾಮಗಾರಿ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಎಲ್ಲ ಗ್ರಾಮ ಪಂಚಾಯತ್ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಬರ ನಿರ್ವಹಣೆಗಾಗಿ ದಾಖಲೆ ಮಟ್ಟದಲ್ಲಿ ಮಾನವ ದಿನಗಳನ್ನು ಸೃಜಿಸಲಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ 2 ಕೋಟಿಗೂ ಅಧಿಕ ಮಾನವ ದಿನಗಳು ಸೃಜನೆಯಾಗಿವೆ. ಅದೇ ರೀತಿ ಬಳ್ಳಾರಿಯ ಬರಪೀಡಿತ ತಾಲೂಕುಗಳಲ್ಲಿ ಗುಳೇ ಹೋಗುವುದನ್ನು ತಡೆಯಲು ಹೆಚ್ಚಿನ ಜನರಿಗೆ ಕೆಲಸವನ್ನ ಒದಗಿಸಲು ಗಮನಹರಿಸಲಾಗಿದೆ.
ಬರ ಪರಿಸ್ಥಿತಿಯಲ್ಲಿ ಅಂತರ್ಜಲ ಹೆಚ್ಚಿಸಲು ಹೂಳೆತ್ತುವುದು, ಕೆರೆಗಳ ಪುನಶ್ಚೇತನ, ಕೃಷಿ ಹೊಂಡ, ಚೆಕ್ ಡ್ಯಾಂ ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳಿಗೆ ಆದ್ಯತೆ ನೀಡಿ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಲಾಗಿದೆ.
ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳು ಕೆಲಸ ಕೇಳಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕೆಲಸ ನೀಡಬೇಕು; ತಪ್ಪಿದರೆ ನಿಯಮಾನುಸಾರ ನಿರುದ್ಯೋಗ ಭತ್ಯೆ ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂದರು.
ಹೊಸ ನಿಯಮಾವಳಿಗಳ ಅನ್ವಯ ವಾರ್ಷಿಕ ಕೆಲಸದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದ್ದು, ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕೂಲಿ ನಿಗದಿಯಾಗಿದ್ದು, ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ
ಜಿಲ್ಲೆಯಲ್ಲಿ ಮಸ್ಟರ್ ರೋಲ್ ನೀಡಲಾದ ಒಟ್ಟು 213 ಕಾಮಗಾರಿಗಳು ಪ್ರಸ್ತುತ ಚಾಲ್ತಿಯಲ್ಲಿದ್ದು, ಮಸ್ಟರ್ ರೋಲ್ ಪ್ರಕಾರ 17,359 ಕೂಲಿಕಾರರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ ಮೂಲಕ ಅಕ್ಟೋಬರ್ 15ರಂದು 6,951 ಮಾನವ ದಿನಗಳ ಹಾಜರಾತಿ ದಾಖಲಾಗಿದೆ.
ಕೃಷಿ ಕೆಲಸಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು ಕುಟುಂಬ ಸಮೇತ ಪರಸ್ಥಳಗಳಿಗೆ ಗುಳೆ ಹೋಗುವುದು ತಪ್ಪಿದೆ. ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಎದುರಿಸುತ್ತಿದ್ದ ನೂರಾರು ಪದವೀಧರ ಯುವಕ-ಯುವತಿಯರೂ ಸ್ಥಳೀಯವಾಗಿ ಈ ಯೋಜನೆಯಡಿ ನೋಂದಾಯಿಸಿಕೊಂಡು ಆರ್ಥಿಕ ನೆರವು ಪಡೆಯುತ್ತಿದ್ದಾರೆ.
ಅಂತರ್ಜಲ ಮರುಪೂರಣ, ರಸ್ತೆ ಸಂಪರ್ಕ ಮತ್ತು ಕೃಷಿ ಪೂರಕ ಮೂಲಸೌಕರ್ಯಗಳು ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್