
ಬೆಂಗಳೂರು, 17 ಅಕ್ಟೋಬರ್ (ಹಿ.ಸ.):
ರಾಜ್ಯದಲ್ಲಿ ಆಸ್ತಿ ದಾಖಲೆಗಳ ನಿರ್ವಹಣೆ ಹಾಗೂ ನಿವೇಶನಗಳ ವಿಂಗಡಣೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ಸುಲಭಗೊಳಿಸಲು ಕಂದಾಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
ವಿಕಾಸಸೌಧದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, 'ಇ-ಆಸ್ತಿ 2.0' ಯೋಜನೆಯಡಿ 'ಎ' ಖಾತಾ ನಿವೇಶನಗಳ ಉಪವಿಭಜನೆ ಸೇವೆಗೆ ಹೊಸ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತಂದಿರುವುದಾಗಿ ಘೋಷಿಸಿದರು.
ಮೊದಲ ಹಂತದಲ್ಲಿ ರಾಜ್ಯದ ಐದು ಪ್ರಮುಖ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಸುಧಾರಿತ ವ್ಯವಸ್ಥೆ ಲಭ್ಯವಾಗಲಿದ್ದು, ಆಸ್ತಿ ಮಾಲೀಕರಿಗೆ ಹಾಗೂ ಜಂಟಿ ಮಾಲೀಕರಿಗೆ ತಮ್ಮ ಜಮೀನು ಮತ್ತು ನಿವೇಶನಗಳನ್ನು ವಿಂಗಡಿಸಿಕೊಳ್ಳಲು ಇದ್ದ ಹಲವು ತೊಡಕುಗಳು ಇದರಿಂದ ನಿವಾರಣೆಯಾಗಲಿವೆ.
ಅರ್ಧ ಏಕರೆವರೆಗಿನ ಜಮೀನಿಗೆ ಸ್ವಯಂ ಡಿಕ್ಲೇರೇಷನ್ ಅವಕಾಶ
ನಿವೇಶನ ಅಥವಾ ಜಮೀನು ವಿಂಗಡಣೆಯ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅರ್ಧ ಏಕರೆವರೆಗಿನ ಜಮೀನು ಹೊಂದಿರುವ ಮಾಲೀಕರು ಇನ್ಮುಂದೆ ಸರ್ಕಾರಕ್ಕೆ ತಾವೇ ಸ್ವಯಂ ಡಿಕ್ಲೇರೇಷನ್ ನೀಡಬಹುದು.
ತಮ್ಮ ಜಾಗದಲ್ಲಿ ರಸ್ತೆ ಎಲ್ಲಿ ಬಿಡಲಾಗಿದೆ, ಎಷ್ಟು ಅಡಿಯ ರಸ್ತೆ ಇದೆ ಎಂಬ ಸಂಪೂರ್ಣ ವಿವರಗಳನ್ನು ಮಾಲೀಕರೇ ದಾಖಲಿಸಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಜಂಟಿ ಮಾಲೀಕರ ನಡುವೆ ಸುಲಭ ವಿಂಗಡನೆ
ಒಂದೇ ಕುಟುಂಬದ ಅಥವಾ ಜಂಟಿ ಮಾಲೀಕರ ನಡುವೆ ಜಾಗ ವಿಭಾಗ ಮಾಡಿಕೊಳ್ಳಲು ಹಿಂದೆ ಇದ್ದ ಸುದೀರ್ಘ ಪ್ರಕ್ರಿಯೆಯನ್ನು ಕೈಬಿಟ್ಟು, ಅತ್ಯಂತ ಸರಳ ವಿಧಾನವನ್ನು ಜಾರಿಗೆ ತರಲಾಗಿದೆ.
ಖಾಸಗಿಯವರ ಜಾಗದಲ್ಲಿ ರಸ್ತೆ ನಿರ್ಮಾಣ, ಜಿಬಿಎ ಯಿಂದ ಪರಿಹಾರ!
ಹಿಂದೆ ತಮ್ಮ ಖಾಸಗಿ ಜಮೀನಿನಲ್ಲಿ ರಸ್ತೆ ಬಿಡುವ ವಿಷಯದಲ್ಲಿ ಹಲವು ಸಾರ್ವಜನಿಕರು ಆಕ್ಷೇಪ ಎತ್ತಿದ್ದರು. ನಮ್ಮ ಸ್ವಂತ ಜಾಗದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಯಾಕೆ ಉಚಿತವಾಗಿ ರಸ್ತೆ ಮಾಡಿಕೊಡಬೇಕು? ಎಂಬ ತಕರಾರುಗಳು ಕೇಳಿಬರುತ್ತಿದ್ದವು.
ಈ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಂಡಿರುವ ಸರ್ಕಾರ, ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಖಾಸಗಿ ವ್ಯಕ್ತಿಗಳು ತಮ್ಮ ಜಾಗವನ್ನು ಬಿಟ್ಟುಕೊಟ್ಟರೆ, ಅಂತಹ ಜಾಗಕ್ಕೆ ಜಿಬಿಎ ವತಿಯಿಂದ ಸೂಕ್ತ ಪರಿಹಾರ ಧನ ನೀಡಲು ಹೊಸ ಯೋಜನೆಯಡಿ ಅವಕಾಶ ಕಲ್ಪಿಸಿದೆ.
ಲೇಔಟ್ ನಿರ್ಮಾಣ ನಿಯಮದಲ್ಲಿ ಪ್ರಮುಖ ಬದಲಾವಣೆ !
ಅರ್ಧ ಏಕರೆಯಿಂದ ಒಂದು ಏಕರೆವರೆಗಿನ ಜಾಗದಲ್ಲಿ ನೂತನ ಲೇಔಟ್ ನಿರ್ಮಿಸುವವರು ಹಾಗೂ ಅರ್ಧ ಏಕರೆಗಿಂತ ಹೆಚ್ಚಿನ ಜಾಗ ಹೊಂದಿರುವವರು ಕಡ್ಡಾಯವಾಗಿ ಟೌನ್ ಪ್ಲಾನಿಂಗ್ ವಿಭಾಗದಿಂದ ಅನುಮೋದನೆ ಪಡೆದುಕೊಳ್ಳಬೇಕು.
ಹೊಸ ನಿಯಮದ ಪ್ಲಸ್ ಪಾಯಿಂಟ್
ಈ ಹಿಂದೆ ಯಾರೇ ಹೊಸ ಲೇಔಟ್ ನಿರ್ಮಿಸಿದರೂ ಶೇ.15% ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕಾಗಿ (ಸಿಎ ಸೈಟ್/ಪಾರ್ಕ್ ಇತ್ಯಾದಿ) ಉಚಿತವಾಗಿ ಬಿಟ್ಟುಕೊಡಬೇಕಾಗಿತ್ತು. ಆದರೆ, ಜಾರಿಗೆ ಬಂದಿರುವ ನೂತನ ನಿಯಮದ ಪ್ರಕಾರ, ಶೇ.15% ರಷ್ಟು ಜಾಗವನ್ನು ಬಿಟ್ಟುಕೊಡಲು ಸಾಧ್ಯವಾಗದಿದ್ದರೆ, ಆ ಜಾಗದ ಮೌಲ್ಯಕ್ಕೆ ಸರಿಹೊಂದುವಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಿ ಲೇಔಟ್ ಅನುಮೋದನೆ ಪಡೆದುಕೊಳ್ಳಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ಆಸ್ತಿ ಸಮಸ್ಯೆಗಳಿಗೆ ತಕ್ಷಣದ ಪರಿಹಾರ
ಆಸ್ತಿ ವಿಂಗಡಣೆ ಹಾಗೂ ದಾಖಲೆಗಳ ನಿರ್ವಹಣೆಯಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ಹಲವು ವರ್ಷಗಳ ತೊಡಕುಗಳಿಗೆ ಇಂದಿನಿಂದಲೇ ತೆರೆಬಿದ್ದಿದೆ. ನಿವೇಶನಗಳಿಗೆ ಸಂಬಂಧಿಸಿದಂತೆ ಯಾವುದೇ ಕಾನೂನಾತ್ಮಕ ಅಥವಾ ತಾಂತ್ರಿಕ ತೊಂದರೆಗಳಿದ್ದರೂ, ಅವುಗಳನ್ನು ತ್ವರಿತವಾಗಿ ಪರಿಹರಿಸಲು ಕಂದಾಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಮ್ಮ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R